×
Ad

'ಎಸ್‍ಸಿಎಸ್‍ಪಿ ಹಾಗೂ ಟಿಎಸ್‍ಪಿ ಕಾಯ್ದೆಯ ಕಲಂ 7ಡಿ ಅನ್ನು ರದ್ದುಗೊಳಿಸಿ'

Update: 2022-04-25 22:50 IST

ಬೆಂಗಳೂರು, ಎ.25: ಪರಿಶಿಷ್ಟ ಸಮುದಾಯಗಳ ಉನ್ನತಿ ಮತ್ತು ಕಲ್ಯಾಣಕ್ಕೆ ಬಳಸಬೇಕಾಗಿರುವ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕಾಗಿಯೇ ಎಸ್‍ಸಿಎಸ್‍ಪಿ ಹಾಗೂ ಟಿಎಸ್‍ಪಿ ಕಾಯ್ದೆಯ ಕಲಂ 7ಕ್ಕೆ ‘ಡಿ’ ಉಪಕಲಂನ್ನು ಸೇರಿಸಿ, ಈ ಸಮುದಾಯಗಳಿಗೆ ಸರಕಾರ ವಂಚಿಸುತ್ತಿದೆ ಎಂದು ಸಿಪಿಐ(ಎಂಎಲ್) ಲಿಬರೇಷನ್ ಕರ್ನಾಟಕ ರಾಜ್ಯ ಸಮಿತಿಯು ಆರೋಪಿಸಿದೆ. 

ಈ ಕುರಿತು ಪ್ರಕಟನೆ ಹೊರಡಿಸಿದ್ದು, ರಾಷ್ಟ್ರೀಯ ಯೋಜನಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಕರ್ನಾಟಕ ಸರಕಾರವು ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ-ಹಂಚಿಕೆ ಮತ್ತು ಬುಡಕಟ್ಟು-ಉಪ ಹಂಚಿಕೆ ಕಾಯಿದೆ, 2013 ಮತ್ತು ನಿಯಮಗಳು 2017 ಅನ್ನು ಜಾರಿಗೊಳಿಸಿ, ಪರಿಶಿಷ್ಟ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಜಾರಿಗೊಳಿಸಿದೆ. ಶಾಸಕಾಂಗವು ಅಂಗೀಕರಿಸಿದ ಈ ಕಾನೂನನ್ನು ರಾಜ್ಯ ಬಿಜೆಪಿ ಸರಕಾರ ಉಲ್ಲಂಘಿಸಿ ಪರಿಶಿಷ್ಟ ಸಮುದಾಯಗಳ ಉನ್ನತಿಗಾಗಿ ಬಳಸಬೇಕಾಗಿದ್ದ 7,888 ಕೋಟಿ ರೂ.ಗಳನ್ನು ಕಾಯ್ದೆಯ 7ಡಿ ಅನ್ನು ಬಳಸಿ ರಸ್ತೆ, ಪ್ಲೈ ಒವರ್, ಇತ್ಯಾದಿಗಳ ನಿರ್ಮಾಣಕ್ಕಾಗಿ ಬಳಕೆ ಮಾಡಿದೆ. ಈ ರೀತಿಯ ಯೋಜನೆಗಳಿಗಾಗಿ ಎಸ್‍ಸಿ/ಎಸ್‍ಟಿ ಉಪಯೋಜನೆಯಲ್ಲಿ ಮೀಸಲಿರುವ ಹಣವನ್ನು ಹೆಚ್ಚು ಹೆಚ್ಚು ಬಳಸುವುದರ ಮೂಲಕ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಯನ್ನು ಕ್ಷೀಣಿಸಲು ಬಿಜೆಪಿ ಸರಕಾರವು ಪ್ರಯತ್ನಿಸುತ್ತಿದೆ ಎಂದು ತಿಳಿಸಿದೆ.

ಬಿಜೆಪಿ ಸರಕಾರವು ಅನೇಕ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನೂರಾರು ಕೋಟಿಗಳನ್ನು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಅನುದಾನವನ್ನು ಮಂಜೂರು ಮಾಡಿರುವ ಸಮಯದಲ್ಲಿ, ಶತಮಾನಗಳಿಂದ ದಬ್ಬಾಳಿಕೆ ಮತ್ತು ತಾರತಮ್ಯವನ್ನು ಎದುರಿಸುತ್ತಿರುವ ಸಮುದಾಯಗಳನ್ನು ಮೇಲೆತ್ತಲು ಉದ್ದೇಶಿಸಿರುವ ಹಣವನ್ನು ಬೇರೆಡೆಗೆ ತಿರುಗಿಸುವುದು ಸರಿಯಲ್ಲ ಎಂದು ಟೀಕಿಸಿದೆ.

ಉದ್ದೇಶಿತ ಸಮುದಾಯಗಳ ಅಭಿವೃದ್ಧಿಗೆ ಸೂಕ್ತ ಯೋಜನೆಗಳನ್ನು ರೂಪಿಸದೇ ನಿರ್ಲಕ್ಷ್ಯ ವಹಿಸಿರುವ ಎಲ್ಲಾ ಇಲಾಖೆಗಳ ಅಧಿಕಾರಗಳ ವಿರುದ್ಧ ಅಪರಾಧಿಕ ಪ್ರಕರಣ ದಾಖಲು ಮಾಡಿ, ಸೂಕ್ತ ತನಿಖೆಯನ್ನು ಕೈಗೊಳ್ಳಬೇಕು ಹಾಗೂ ಮೀಸಲು ಹಣದ ದುರುಪಯೋಗವನ್ನು ತಡೆಗಟ್ಟುವ ಸಲುವಾಗಿ ಕಾಯ್ದೆಯ ಕಲಂ 7(ಡಿ) ಅನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News