×
Ad

ಬೆಂಗಳೂರು: ಪೊಲೀಸರ ಮೇಲೆ ಕಾರು ಹರಿಸಲು ಯತ್ನ; ಮೂವರು ಆರೋಪಿಗಳ ಬಂಧನ

Update: 2022-04-27 00:06 IST

ಬೆಂಗಳೂರು, ಎ.26: ಮದ್ಯದ ಅಮಲಿನಲ್ಲಿ ಕಾರಿನಲ್ಲೇ ನಿದ್ದೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಕಾರು ಹರಿಸಲು ಯತ್ನಿಸಿದ್ದ ಮೂವರನ್ನು ಕಬ್ಬನ್‍ಪಾರ್ಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ದಯಾನಂದ್ ಸಾಗರ್, ಮಂಜುನಾಥ್ ಹಾಗೂ ವೀರೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಎ.22ರಂದು ಮದ್ಯ ಸೇವಿಸಿ ಬ್ರಿಗೇಡ್ ರಸ್ತೆ ಬಳಿ ಬಂದು ಕಾರು ನಿಲ್ಲಿಸಿದ್ದರು. ಈ ವೇಳೆ, ಸಿಟಿಒ ಸರ್ಕಲ್ ಬಳಿ ತಪಾಸಣೆ ನಡೆಸುತ್ತಿದ್ದ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. 

ಮದ್ಯದ ಅಮಲಿನಲ್ಲಿ ಕಾರಿನಲ್ಲಿಯೇ ನಿದ್ರೆಗೆ ಜಾರಿದ್ದ ಆರೋಪಿಗಳನ್ನು ಪೊಲೀಸರು ಎಚ್ಚರಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ ಪೊಲೀಸರು ಕಾರಿನ ಚಕ್ರಕ್ಕೆ ವ್ಹೀಲ್ ಕ್ಲಾಂಪ್ ಹಾಕಿ ಕಾರಿನ ಸುತ್ತ ಬ್ಯಾರಿಕೇಡ್ ಹಾಕಿದ್ದರು. 

ಬಳಿಕ ಮಧ್ಯರಾತ್ರಿ ಎಚ್ಚರಗೊಂಡ ಆರೋಪಿಗಳು ಸುತ್ತಲೂ ಬ್ಯಾರಿಕೇಡ್ ಹಾಕಿರುವುದನ್ನು ಕಂಡು, ಕೂಡಲೇ ಕಾರನ್ನು ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ, ಎದುರುಗಡೆ ನಿಂತಿದ್ದ ಸಿಬ್ಬಂದಿ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದು, ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News