ಎಲ್‌ಐಸಿ ಐಪಿಒ: ಸಣ್ಣ ಪಾಲಿಸಿದಾರರಿಗೆ ಘೋರ ಅನ್ಯಾಯ

Update: 2022-04-26 18:53 GMT

ರಿಗೆ,
ಶ್ರೀಮತಿ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವರು

ಪ್ರಿಯ ಶ್ರೀಮತಿ ಸೀತಾರಾಮನ್,
ಪ್ರಸ್ತಾಪಿತ ಎಲ್‌ಐಸಿ ಐಪಿಒ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರ ಹಿಂದುಳಿದ ವರ್ಗಗಳ ಪಾಲಿಸಿದಾರರಿಗೆ ಹೇಗೆ ಘೋರ ಅನ್ಯಾಯ ಮಾಡಲಿದೆ ಎಂಬ ಬಗ್ಗೆ ನಾನು ನಿಮಗೆ 6-3-2022, 11-4-2022 ಮತ್ತು 16-4-2022ರಂದು ಬರೆದ ಪತ್ರಗಳನ್ನು ದಯವಿಟ್ಟು ಗಮನಿಸಿ.
ನನ್ನ ಹಿಂದಿನ ಪತ್ರಗಳಲ್ಲಿ, ಪ್ರಸ್ತಾಪಿತ ಎಲ್‌ಐಸಿ ಐಪಿಒದ ಈ ಕೆಳಗಿನ ಆಘಾತಕಾರಿ ಅಂಶಗಳನ್ನುನಿಮ್ಮ ಗಮನಕ್ಕೆ ತಂದಿದ್ದೆ.
 ಕಳೆದ ಹಲವಾರು ದಶಕಗಳ ಅವಧಿಯಲ್ಲಿ ಎಲ್‌ಐಸಿ ಸಂಪಾದಿಸಿರುವ ಹೆಚ್ಚುವರಿ ನಿಧಿಗಳು ಅದರ ಪಾಲಿಸಿದಾರರಿಗೆ ಸೇರುತ್ತವೆ. ಹಾಗಾಗಿ, ಪಾಲಿಸಿದಾರರು ಸರಕಾರದ ಜೊತೆಗೆ ಎಲ್‌ಐಸಿಯ ವಾಸ್ತವಿಕ ಮಾಲಕರಾಗಿದ್ದಾರೆ. ಹಾಗಾಗಿ, ಎಲ್‌ಐಸಿಯ ಬಂಡವಾಳ ಹಿಂದೆಗೆತ ಪ್ರಕ್ರಿಯೆ ನಡೆದಾಗ ಪಾಲಿಸಿದಾರರನ್ನು ಎಲ್‌ಐಸಿಯ ನೈಜ ಮಾಲಕರಾಗಿ ಪರಿಗಣಿಸುವ ಹಾಗೂ ಆ ಮೂಲಕ ಮೆಜಾರಿಟಿ ಈಕ್ವಿಟಿ ಹೋಲ್ಡರ್ಸ್ ಆಗಿ ಪರಿಗಣಿಸಬೇಕಾಗುತ್ತದೆ. ಆದರೆ ಎಲ್‌ಐಸಿಯು ಅವರಿಗೆ ಅತ್ಯಂತ ಕನಿಷ್ಠ, ಅಂದರೆ ಕೇವಲ 10 ಶೇಕಡ ಹೂಡಿಕೆ ಅವಕಾಶವನ್ನು ನೀಡುತ್ತಿದೆ. ಎಲ್‌ಐಸಿ ಐಪಿಒ ಹೊರಬರುವಾಗ ಅದರ ಜೀವ ನಿಧಿಯ ಹೆಚ್ಚಿನ ಭಾಗವನ್ನು ಅನ್ಯಾಯವಾಗಿ ಭವಿಷ್ಯದ ಖಾಸಗಿ ಈಕ್ವಿಟಿ ಖರೀದಿದಾರರಿಗೆ ಮೀಸಲಿಡಲಾಗಿದೆ. ಅಂದರೆ ಪಾಲಿಸಿದಾರರ ಅಗಾಧ ಪ್ರಮಾಣದ ನಿಧಿಗಳನ್ನು ಅನ್ಯಾಯವಾಗಿ ಶೇರು ಮಾರುಕಟ್ಟೆ ಹೂಡಿಕೆದಾರರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ.
ಈಕ್ವಿಟಿ ಹೋಲ್ಡರ್‌ಗಳಾಗಲು ಅತ್ಯಂತ ನಿರ್ಬಂಧಿತ ಪಾಲಿಸಿದಾರರ ಕೋಟದ ಮೂಲಕ ಹೂಡಿಕೆ ಮಾಡುವ ಪಾಲಿಸಿದಾರರಿಗೂ ತ್ರಾಸದಾಯಕ ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿದೆ. ಅದರ ಪ್ರಕಾರ, ಈ ಪಾಲಿಸಿದಾರರು ತಮ್ಮ ಪಾನ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ಗಳೊಂದಿಗೆ ಜೋಡಿಸಬೇಕು ಹಾಗೂ ಆ ಬಳಿಕ ತಮ್ಮ ಡೀಮ್ಯಾಟ್ ಖಾತೆಗಳನ್ನು ತೆರೆಯಬೇಕು. ಈ ಅಗತ್ಯವನ್ನು ಪೂರೈಸಲು ಕೆಲವೇ ಕೆಲವು ಪಾಲಿಸಿದಾರರಿಗೆ ಸಾಧ್ಯವಾಗಬಹುದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒಬಿಸಿ ಮುಂತಾದ ದುರ್ಬಲ ವರ್ಗಗಳಿಗೆ ಸೇರಿರುವ ಬಹುಸಂಖ್ಯೆಯ ಪಾಲಿಸಿದಾರರು ಈ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಇದು ಐಪಿಒದಿಂದ ಅವರನ್ನು ಹೊರಗಿಟ್ಟಿರುವುದಕ್ಕೆ ಸಮವಾಗಿದೆ. ಇದು ಅನ್ಯಾಯ.
ಇದೇ ಕಾರಣಕ್ಕಾಗಿ, ಅನೈತಿಕ ಹಣವಂತ ಬೇನಾಮಿ ಹೂಡಿಕೆದಾರರು ಸಣ್ಣ ಪಾಲಿಸಿದಾರರಿಗೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗಳನ್ನು ಜೋಡಿಸಲು ಮತ್ತು ಡಿಮ್ಯಾಟ್ ಖಾತೆಗಳನ್ನು ತೆರೆಯಲು ಸಹಾಯ ಮಾಡುವ ಹೆಸರಿನಲ್ಲಿ ಅವರ ಖಾತೆಗಳಲ್ಲಿ ವ್ಯವಹರಿಸಲು ಆರಂಭಿಸಿದ್ದಾರೆ. ಇದಕ್ಕಾಗಿ ಅವರು ಪಾಲಿಸಿದಾರರಿಗೆ ಜುಜುಬಿ ಮೊತ್ತವನ್ನು ಕೊಡುತ್ತಿದ್ದಾರೆ.
ಪಾಲಿಸಿದಾರರಿಗೆ ಕೇವಲ 10 ಶೇಕಡ ಹೂಡಿಕೆ ಕೋಟವನ್ನು ನೀಡಿರುವ ಹಣಕಾಸು ಸಚಿವಾಲಯವು, ವಿದೇಶಿ ಹೂಡಿಕೆದಾರರಿಗೆ 20 ಶೇಕಡ ಕೋಟವನ್ನು ಒದಗಿಸಿದೆ. ಇಷ್ಟೇ ಸಾಲದೆಂಬಂತೆ, ವಿದೇಶಿ ಸರಕಾರಗಳ ಒಡೆತನದ ಮತ್ತು ನಿಯಂತ್ರಣದ ಸೋವರೀನ್ ವೆಲ್ತ್ ಫಂಡ್‌ಗಳಿಂದಲೂ ಹಣಕಾಸು ಸಚಿವಾಲಯವು ಹೂಡಿಕೆಗಳನ್ನು ನಿರೀಕ್ಷಿಸುತ್ತಿದೆ ಎಂಬುದಾಗಿ ವರದಿಯಾಗಿದೆ. ಇದು ಬಳಿಕ, ಪಾಲಿಸಿದಾರರು ಕಷ್ಟದಿಂದ ಸಂಪಾದಿಸಿದ ಹಣವನ್ನು ವಿದೇಶಗಳಿಗೆ ಸಾಗಿಸಲು ಅವಕಾಶ ಕಲ್ಪಿಸುತ್ತದೆ. ಈ ನಡೆಯು ರಾಷ್ಟ್ರವ್ಯಾಪಿ ಕಳವಳಕ್ಕೆ ಕಾರಣವಾಗಬೇಕಾಗಿದೆ. ಹಾಗಾಗಿ, ಐಪಿಒ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿಲ್ಲ.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಐದು ವಿಧಾನಗಳಲ್ಲಿ ಎಲ್‌ಐಸಿ ಪಾಲಿಸಿದಾರರಿಗೆ ಅನ್ಯಾಯ ಮಾಡಲಾಗುತ್ತಿದೆ: 1)ಸಿರಿವಂತ ಮತ್ತು ಜೂಜಿನ ಮಾದರಿಯಲ್ಲಿ ಹಣ ಹೂಡುವ ಹೂಡಿಕೆದಾರರಿಗೆ ಲಾಭಗಳನ್ನು ಮಾಡಿಕೊಡುವುದಕ್ಕಾಗಿ ಪಾಲಿಸಿದಾರರ ನಿಧಿಗಳನ್ನು ದುರುಪಯೋಗಪಡಿಸಲಾಗುತ್ತಿದೆ. 2)ಪಾಲಿಸಿದಾರರನ್ನು ಎಲ್‌ಐಸಿಯ ನೈಜ ಮಾಲಕರಂತೆ ನೋಡುವ ಬದಲು ಜುಜುಬಿ 10 ಶೇಕಡಾ ಹೂಡಿಕೆ ಅವಕಾಶವನ್ನು ಅವರಿಗೆ ಒದಗಿಸಲಾಗಿದೆ. 3) ಪಾಲಿಸಿದಾರರಿಗೆ ನಿಗದಿಪಡಿಸಲಾಗಿರುವ 10 ಶೇಕಡಾ ಕೋಟಾದಲ್ಲಿ ಹೂಡಿಕೆ ನಡೆಸಬೇಕಾದರೂ ಕಠಿಣ ವಿಧಾನಗಳನ್ನು ಸೂಚಿಸಲಾಗಿದ್ದು, ಸಣ್ಣ ಪಾಲಿಸಿದಾರರು ಇದರ ಪ್ರಯೋಜನವನ್ನು ಪಡೆಯುವುದು ಹೆಚ್ಚುಕಡಿಮೆ ಅಸಾಧ್ಯವಾಗಿದೆ. 4) ಪಾಲಿಸಿದಾರರ ಗಾಯಕ್ಕೆ ಉಪ್ಪು ಸವರಿದಂತೆ, 20 ಶೇಕಡಾ ಕೋಟಾವನ್ನು ವಿದೇಶಿ ಹೂಡಿಕೆದಾರರಿಗೆ ಮೀಸಲಿಡಲಾಗಿದೆ ಹಾಗೂ ವಿದೇಶಿ ಸೋವರೀನ್ ವೆಲ್ತ್ ಫಂಡ್‌ಗಳಿಂದಲೂ ಹಣಕಾಸು ಸಚಿವಾಲಯವು ಹೂಡಿಕೆಯನ್ನು ನಿರೀಕ್ಷಿಸುತ್ತಿದೆ ಎನ್ನಲಾಗಿದೆ. ಹೀಗಾದರೆ, ಪಾಲಿಸಿದಾರರ ವೆಚ್ಚದಲ್ಲಿ ಸೋವರೀನ್ ವೆಲ್ತ್ ಫಂಡ್‌ಗಳು ಲಾಭ ಕೊಳ್ಳೆಹೊಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಹಾಗೂ ಪಾಲಿಸಿದಾರರ ಕಠಿಣ ಪರಿಶ್ರಮದ ಹಣವನ್ನು ವಿದೇಶಗಳಿಗೆ ಸಾಗಿಸಲು ಅವಕಾಶ ಸಿಗುತ್ತದೆ. 5) ಸಣ್ಣ ಪಾಲಿಸಿದಾರರ ಖಾತೆಗಳಿಗೆ ಅಕ್ರಮವಾಗಿ ಪ್ರವೇಶ ಪಡೆಯಲು, ಪಾಲಿಸಿದಾರರ ಖಾತೆಗಳು ಮತ್ತು ವೈಯಕ್ತಿಕ ಮಾಹಿತಿಗಳನ್ನು ಬಾಡಿಗೆಗೆ ಪಡೆಯಲು ಬೇನಾಮಿ ಹೂಡಿಕೆದಾರರಿಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ಬೇನಾಮಿ ಹೂಡಿಕೆದಾರರು ಪಾಲಿಸಿದಾರರಿಗೆ ಸಣ್ಣ ಮೊತ್ತವನ್ನು ಕೊಡುತ್ತಾರೆ ಹಾಗೂ ಅವರ ವೆಚ್ಚದಲ್ಲಿ ಭಾರೀ ಲಾಭ ಮಾಡುತ್ತಾರೆ.
  ಸಣ್ಣ ಪಾಲಿಸಿದಾರರ ಖಾತೆಗಳನ್ನು ಬೇನಾಮಿ ಹೂಡಿಕೆದಾರರು ಬಾಡಿಗೆಗೆ ಪಡೆದುಕೊಳ್ಳುವುದು ಸಾಬೀತಾದರೆ, ಅದು ಪಾಲಿಸಿದಾರರಿಗೆ ಮಾಡುವ ವಂಚನೆಗೆ ಸಮವಾಗುತ್ತದೆ ಹಾಗೂ ಅವರ ಖಾಸಗಿತನದ ಉಲ್ಲಂಘನೆಯೂ ಆಗುತ್ತದೆ. ನನ್ನ ಈ ಮೊದಲಿನ ಪತ್ರಗಳಲ್ಲಿ, ಇದಕ್ಕೆ ಸಂಬಂಧಿಸಿದ ಸುದ್ದಿಯೊಂದನ್ನು ಲಗತ್ತಿಸಿದ್ದೆ (https://www.motilaloswal.com/article-details/lic-ipo-triggers-a-frenzy-for-renting-of-demat-accounts/5307). 

ಆದರೆ, ಈ ವಂಚಕರು ಸಣ್ಣ ಪಾಲಿಸಿದಾರರ ಖಾತೆಗಳನ್ನು 2022 ಜನವರಿಯಿಂದಲೇ ಅಥವಾ 2021ರ ಉತ್ತರಾರ್ಧದ ಅವಧಿಯಲ್ಲೇ ಕೊಳ್ಳೆ ಹೊಡೆಯುತ್ತಿರುವಂತೆ ಅನಿಸುತ್ತಿದೆ. ಇದು ಅಂದಿನ ಸುದ್ದಿಯಿಂದ ಸಾಬೀತಾಗುತ್ತದೆ (https://www.thehindubusinessline.com/markets/lic-ipo-to-spun-a-frenzy-for-renting-of-demat-ac/article64889040.ece)! ಅವರ ಕಾರ್ಯವಿಧಾನದ ವಿವರಗಳು ಈ ಜನವರಿ ವರದಿಯಲ್ಲಿ ಲಭ್ಯವಿದೆ.

‘‘ಈ ಡಿಸ್ಕೌಂಟ್ ಕೋಟಾದ ಶೇರುಗಳನ್ನು ಪಡೆಯುವುದಕ್ಕಾಗಿ ದಲ್ಲಾಳಿಗಳು ಎಲ್‌ಐಸಿ ಪಾಲಿಸಿದಾರರಿಗೆ 2,000 ದಿಂದ 4,000 ರೂಪಾಯಿವರೆಗೆ ನೀಡಲು ಸಿದ್ಧರಿದ್ದಾರೆ. ಪಾಲಿಸಿದಾರರ ಖಾತೆಗಳನ್ನು ಬಾಡಿಗೆಗೆ ಪಡೆದು ಐಪಿಒ ಸಮಯದಲ್ಲಿ ಅರ್ಜಿ ಸಲ್ಲಿಸುತ್ತಾರೆ ಎಂಬುದಾಗಿ ಮಾರುಕಟ್ಟೆ ಮೂಲಗಳು ‘ಬಿಸ್ನೆಸ್ ಲೈನ್’ಗೆ ತಿಳಿಸಿವೆ. ಈ ಪೈಕಿ ಹೆಚ್ಚಿನ ದಲ್ಲಾಳಿಗಳು ಎಲ್‌ಐಸಿ ಏಜಂಟ್‌ಗಳೂ ಆಗಿರುವುದರಿಂದ ಪಾಲಿಸಿದಾರರ ಮಾಹಿತಿಕೋಶಗಳಿಗೆ ಅವರಿಗೆ ತಕ್ಷಣದ ಪ್ರವೇಶವಿದೆ. ಐಪಿಒ ಬೆಲೆ ವ್ಯಾಪ್ತಿ ಸ್ಪಷ್ಟಗೊಂಡ ಬಳಿಕ ಈ ಶುಲ್ಕವೂ ಹೆಚ್ಚಬಹುದು. ಐಪಿಒಗೆ ಅರ್ಜಿ ಹಾಕಲು ಹಣವನ್ನು ದಲ್ಲಾಳಿಗಳು ಕೊಡುತ್ತಾರೆ.

ಎಲ್‌ಐಸಿಯಲ್ಲಿ 32 ಕೋಟಿಗೂ ಅಧಿಕ ಪಾಲಿಸಿದಾರರಿದ್ದಾರೆ. ಈ ಪೈಕಿ ಕನಿಷ್ಠ 5-10 ಶೇಕಡಾ ಭಾಗವನ್ನು ಬಳಸಿಕೊಳ್ಳುವ ನಿರೀಕ್ಷೆಯನ್ನು ದಲ್ಲಾಳಿಗಳು ಹೊಂದಿದ್ದಾರೆ. ಈ 5-10 ಶೇಕಡಾ ಪಾಲಿಸಿದಾರರು ಈವರೆಗೆ ಡಿಮ್ಯಾಟ್ ಖಾತೆಯನ್ನು ಹೊಂದಿಲ್ಲ ಎಂಬುದಾಗಿ ದಲ್ಲಾಳಿಗಳು ಭಾವಿಸಿದ್ದಾರೆ. ದೊಡ್ಡ ದಲ್ಲಾಳಿಗಳು, ತಮ್ಮಲ್ಲಿ ಡಿಮ್ಯಾಟ್ ಖಾತೆಗಳನ್ನು ತೆರೆಯುವಂತೆ ಪಾಲಿಸಿದಾರರನ್ನು ಆಕರ್ಷಿಸಲು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಕೊಡಲೂ ಆರಂಭಿಸಿದ್ದಾರೆ. ಇದು ಕೆಳಗಿನ ಮಹತ್ವದ ಪ್ರಶ್ನೆಗಳಿಗೆ ಕಾರಣವಾಗುತ್ತದೆ ಹಾಗೂ ಹಣಕಾಸು ಸಚಿವಾಲಯವು ಅದಕ್ಕೆ ಉತ್ತರಗಳನ್ನು ನೀಡಬೇಕಾಗಿದೆ.

ಬೇನಾಮಿ ಹೂಡಿಕೆದಾರರು 2021ರ ಉತ್ತರಾರ್ಧದಿಂದಲೇ ಸಣ್ಣ ಪಾಲಿಸಿದಾರರ ಖಾತೆಗಳನ್ನು ದೋಚುತ್ತಿರುವಂತೆ ಕಾಣುತ್ತಿದೆ. ಇದು ಹಣಕಾಸು ಸಚಿವಾಲಯದ ಗಮನಕ್ಕೆ ಬಂದಿಲ್ಲವೇ? ಈ ವರದಿಗಳ ಬಗ್ಗೆ ಸಚಿವಾಲಯವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ?
ಪಾಲಿಸಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಡಿಮ್ಯಾಟ್ ಖಾತೆಗಳನ್ನು ತೆರೆಯುತ್ತಿದ್ದಾರೆ ಎಂಬುದಾಗಿ ದೀಪಮ್ ಮತ್ತು ಎಲ್‌ಐಸಿ ಪದೇ ಪದೇ ಹೇಳಿಕೊಂಡಿವೆ. ಇಂಥ ಒಟ್ಟು ಡಿಮ್ಯಾಟ್ ಖಾತೆ ಗಳ ಪೈಕಿ ಎಷ್ಟು ಖಾತೆಗಳನ್ನು ಬೇನಾಮಿ ಹೂಡಿಕೆದಾರರು ತೆರೆದಿ ದ್ದಾರೆ? ಪಾಲಿಸಿದಾರರ ಹೆಸರಿನಲ್ಲಿ ನೈಜ ಡಿಮ್ಯಾಟ್ ಖಾತೆ ಗಳು ತೆರೆಯಲ್ಪಡುವುದನ್ನು ಖಾತರಿಪಡಿಸಲು ದೋಷರಹಿತ ವ್ಯವಸ್ಥೆ ಯೊಂದನ್ನು ದೀಪಮ್/ಎಲ್‌ಐಸಿ ರೂಪಿಸಿದೆಯೇ? ತನ್ನ ನಿಜವಾದ ಮಾಲಕರು, ಅಂದರೆ ಪಾಲಿಸಿದಾರರು ವಂಚನೆಗೆ ಒಳಗಾಗುತ್ತಿರುವಾಗ ಎಲ್‌ಐಸಿ ಮೂಕ ಪ್ರೇಕ್ಷಕನಾಗಿ ಕೂರಲು ಹೇಗೆ ಸಾಧ್ಯ?

ಇದರಲ್ಲಿ ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವೆಲಪ್‌ಮೆಂಟ್ ಅಥಾರಿಟಿ (ಐಆರ್‌ಡಿಎ)ಯ ಪಾತ್ರವೇನು? ಅದರ ಪ್ರಾಥಮಿಕ ಜವಾಬ್ದಾರಿ ಪಾಲಿಸಿದಾರರ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿದೆ. ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಐಆರ್‌ಡಿಎ ವಿಫಲವಾಗಿದೆಯೇ?
ಸಣ್ಣ ಪಾಲಿಸಿದಾರರಿಗೆ ದ್ರೋಹವಾಗುತ್ತಿರುವ, ಅದರಲ್ಲೂ ಮುಖ್ಯವಾಗಿ ಅವರ ಖಾತೆಗಳನ್ನು ಬೇನಾಮಿ ಹೂಡಿಕೆದಾರರು ಬಾಡಿಗೆಗೆ ಪಡೆದುಕೊಳ್ಳುತ್ತಿರುವ ವಿಷಯವು ಸ್ವತಂತ್ರ ನ್ಯಾಯಾಂಗ ತನಿಖೆಗೆ ಅರ್ಹವಾಗಿದೆ. ಈ ತನಿಖೆ ಮುಗಿಯುವವರೆಗೆ ಐಪಿಒ ವಿಷಯದಲ್ಲಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಾರದು.
ಈ ವಿಷಯದಲ್ಲಿ ನೀವು ತೆಗೆದುಕೊಂಡಿರುವ ಕ್ರಮಗಳನ್ನು ಸಾರ್ವಜನಿಕರು ಮತ್ತು ಸಂಸತ್ತಿಗೆ ತಿಳಿಸಬೇಕೆಂದು ಕೋರುತ್ತೇನೆ.

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ

ಇ.ಎ.ಎಸ್. ಶರ್ಮ, ಮಾಜಿ ಕಾರ್ಯದರ್ಶಿ, ಭಾರತ ಸರಕಾರ, ವಿಶಾಖಪಟ್ಟಣಂ

Writer - ಇ.ಎ.ಎಸ್. ಶರ್ಮ

contributor

Editor - ಇ.ಎ.ಎಸ್. ಶರ್ಮ

contributor

Similar News