ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಹಿರಿಯ ಪ್ರಾಧ್ಯಾಪಕ ಪೊಲೀಸರ ಬಲೆಗೆ
ಬೆಂಗಳೂರು, ಎ.27: ಸಹಾಯಕ ಪ್ರಾಧ್ಯಾಪಕರ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಹಿರಿಯ ಪ್ರಾಧ್ಯಪಕನನ್ನು ವಶಕ್ಕೆ ಪಡೆದಿರುವ ಇಲ್ಲಿನ ಮಲ್ಲೇಶ್ವರಂ ಠಾಣಾ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಓರ್ವ ಮಹಿಳಾ ಅತಿಥಿ ಉಪನ್ಯಾಸಕಿಯನ್ನು ಬಂಧಿಸಿದ್ದು, ಮತ್ತೊಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.
ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಪರೀಕ್ಷೆ ನಡೆಯುವ ಮುನ್ನವೇ ವಾಟ್ಸಾಪ್‍ನಲ್ಲಿ ಪ್ರಶ್ನೆಪತ್ರಿಕೆ ಹರಿದಾಡಿತ್ತು. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಮುಂದುವರಿದೆ ಎಂದು ಅವರು ವಿವರಿಸಿದರು.
ಯಾರು ಪ್ರಾಧ್ಯಾಪಕ?: ಧಾರವಾಡ ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ್ರದ ಹಿರಿಯ ಪ್ರಾಧ್ಯಾಪಕ ನಾಗರಾಜು ಎಂಬುವರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಧಾರವಾಡ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ್ ಅವರಿಗೆ ಪ್ರಶ್ನೆಪತ್ರಿಕೆ ತಯಾರಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿತ್ತು. ಅದರಂತೆ ಪ್ರಶ್ನೆ ಪತ್ರಿಕೆ ಸಿದ್ದಪಡಿಸುವಾಗ ಭೂಗೋಳಶಾಸ್ತ್ರದ ಅತಿಥಿ ಉಪನ್ಯಾಸಕಿಯಾಗಿದ್ದ ಆರೋಪಿಗೆ ಸೌಮ್ಯಾ ಅವರಿಗೆ ಪ್ರಶ್ನೆಗಳನ್ನು ಸಿದ್ಧಪಡಿಸಲು ನಾಗರಾಜ್ ಹೇಳಿದ್ದಾರೆ ಎನ್ನಲಾಗಿದೆ.
ಅದರಂತೆ 17 ಪ್ರಶ್ನೆಗಳನ್ನ ಸಿದ್ಧಪಡಿಸಿ ಸೌಮ್ಯಾ ನೀಡಿದ್ದರು. ಇದರಲ್ಲಿ 12 ಪ್ರಶ್ನೆಗಳನ್ನು ಉಳಿಸಿಕೊಂಡಿದ್ದರು. ಸದ್ಯ ನಾಗರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಗುರುಗಳಿಗೆ ಕಳಿಸಿದ್ದ ಪ್ರಶ್ನೆಗಳನ್ನು ಪರೀಕ್ಷೆಗೂ ಅರ್ಧಗಂಟೆ ಮೊದಲು ಸೌಮ್ಯಾ ಸ್ನೇಹಿತೆಯರಿಗೆ ಕಳುಹಿಸಿದ್ದರಂತೆ. ಸದ್ಯ ಇದೇ ಆಯಾಮದಲ್ಲಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೌಮ್ಯಾ 12 ದಿನ ಪೊಲೀಸ್ ವಶಕ್ಕೆ
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಆರೋಪಿ ಸೌಮ್ಯಾ ಅನ್ನು ಪೊಲೀಸರು 12 ದಿನ ಕಸ್ಟಡಿಗೆ ಪಡೆದಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.