ಬೆಂಗಳೂರು: ಮೆಟ್ರೊ ರೈಲು ಯೋಜನೆಗಾಗಿ ಒಟ್ಟು 1,342 ಮರಗಳನ್ನು ಕತ್ತರಿಸಲು ಅನುಮತಿ ನೀಡಿದ ಹೈಕೋರ್ಟ್
ಬೆಂಗಳೂರು, ಎ.27: ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 2ನೆ ಹಂತದ ಮೆಟ್ರೊ ರೈಲು ಯೋಜನೆಗೆ ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ಹಾಗೂ ವೆಲ್ಲಾರ ಜಂಕ್ಷನ್‍ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ಮೆಟ್ರೊ ರೈಲು ಮಾರ್ಗ ಕಾಮಗಾರಿಗೆ ಒಟ್ಟು 1,342 ಮರಗಳನ್ನು ಕತ್ತರಿಸಲು ಹೈಕೋರ್ಟ್, ಬಿಎಂಆರ್‍ಸಿಎಲ್‍ಗೆ ಅನುಮತಿ ನೀಡಿದೆ.
ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರವಾದಿ ಟಿ. ದತ್ತಾತ್ರೇಯ ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು.
ಕಸ್ತೂರಿನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ನಡುವೆ 2ನೆ ಹಂತದ ನಮ್ಮ ಮೆಟ್ರೊ ಕಾಮಗಾರಿಗಾಗಿ 1,334 ಮರ ಕಡಿಯಲು, 163 ಸ್ಥಳಾಂತರಿಸಲು, 26 ಮರ ಉಳಿಸಿಕೊಳ್ಳಲು ನ್ಯಾಯಾಲಯ ಒಪ್ಪಿದೆ. ವೆಲ್ಲಾರ ಜಂಕ್ಷನ್‍ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ಅಂಡರ್ ಗ್ರೌಂಡ್ ನಮ್ಮ ಮೆಟ್ರೊ ಕಾಮಗಾರಿಗಾಗಿ 8 ಮರ ಕಡಿಯಲು, 2 ಮರಗಳನ್ನು ಹಾಗೆಯೇ ಉಳಿಸಿಕೊಳ್ಳಲು ಅಸ್ತು ಎಂದಿದೆ.
ಈ ನಡುವೆ, ಮೆಟ್ರೊ ಮಾರ್ಗದ ಕಾಮಗಾರಿ ನಡೆಸಲು ಎರಡು ಮಧ್ಯಂತರ ಅರ್ಜಿ ಸಲ್ಲಿಸಿದ್ದೀರಿ. ಈ ಹಿಂದೆ ಮರ ಕಡಿಯಲು ನೀಡಿರುವ ಅನುಮತಿ ಸಂಬಂಧ ಕಾಮಗಾರಿಯ ಪ್ರಗತಿ ಯಾವ ಹಂತದಲ್ಲಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಮೆಟ್ರೊ ನಿಗಮದ ಪರ ಹಿರಿಯ ವಕೀಲ ಉದಯ್ ಹೊಳ್ಳ, ‘ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ’ ಎಂದು ಪ್ರತಿಕ್ರಿಯಿಸಿದರು.
ಅರ್ಜಿದಾರರ ಪರ ವಕೀಲ ಪ್ರದೀಪ್ ನಾಯಕ್, ‘ಮರ ಕಡಿಯಲು ಅಧಿಕೃತ ಅನುಮತಿ ನೀಡಿರುವ ಅಧಿಕಾರಿಯು ಮರಗಳ ಸಮಿತಿಯಲ್ಲೂ ಸ್ಥಾನ ಪಡೆದಿದ್ದಾರೆ. ಮರಗಳ ಅಧಿಕಾರಿಯು ತಜ್ಞರ ಸಮಿತಿಯ ಭಾಗವಾಗಿರಬಾರದು’ ಎಂದು ಆಕ್ಷೇಪಿಸಿದರು. ಸರಕಾರಿ ವಕೀಲ ವಿಜಯಕುಮಾರ್ ಪಾಟೀಲ್, ಮರಗಳ ತಜ್ಞರ ಸಮಿತಿಯ ವರದಿಯಲ್ಲಿ ಸಮಸ್ಯೆಯಿದ್ದರೆ ಒಪ್ಪಿಕೊಳ್ಳಬಹುದು. ಆದರೆ, ಅರ್ಜಿದಾರರ ಈ ರೀತಿಯ ಆಕ್ಷೇಪ ಸರಿಯಲ್ಲ ಎಂದರು.