ಮೇ 1ಕ್ಕೆ ಬೆಂಗಳೂರಿನಲ್ಲಿ ಕಾರ್ಮಿಕರ ಬಹಿರಂಗ ಸಮಾವೇಶ
ಬೆಂಗಳೂರು, ಎ.27: ಸರಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ, ಕಾರ್ಮಿಕ ದಿನಾಚರಣೆ ಅಂಗವಾಗಿ ಮೇ 1ಕ್ಕೆ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕಾರ್ಮಿಕ ಸಂಘಟನೆಗಳ ಬೃಹತ್ ಬಹಿರಂಗ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕಾರ್ಮಿಕ ಮುಖಂಡ ವಿಜಯ್ ಬಾಸ್ಕರ್ ತಿಳಿಸಿದ್ದಾರೆ.
ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಂಡವಾಳಗಾರರ ಹಿತ ಕಾಯುತ್ತಿದ್ದು, ಕಾರ್ಮಿಕರನ್ನು ಕಡೆಗಣಿಸುತ್ತಿವೆ. ಶತಮಾನಗಳ ಹೋರಾಟಗಳಿಂದ ಪಡೆದುಕೊಂಡಿರುವ ಕಾರ್ಮಿಕರ ಹಕ್ಕುಗಳನ್ನು ವಿದೇಶಿಗರಿಗೆ ಒತ್ತೆ ಇಡುತ್ತಿವೆ. ಇದಕ್ಕೆ ಪ್ರತಿರೋಧಿಸುತ್ತಿರುವ ಕಾರ್ಮಿಕ ಹೋರಾಟಗಳನ್ನು ಹತ್ತಿಕ್ಕಲು ಕೋವಿಡ್ ನಿರ್ಬಂಧವನ್ನು ಹೇರಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕ ಸಮಸ್ಯೆಗಳಾದ ಬೆಲೆ ಏರಿಕೆ, ಕನಿಷ್ಠ ವೇತನ ಜಾರಿ, ವೈದ್ಯಕೀಯ ಸೌಲಭ್ಯ, ಶಿಕ್ಷಣದಂತಹ ಸಮಸ್ಯೆಗಳನ್ನು ಮರೆಮಾಚಲು ರಾಜ್ಯ ಸರಕಾರವು ಕೋಮುದ್ವೇಷವನ್ನು ಸೃಷ್ಟಿಸುತ್ತಿದೆ ಎಂದ ಅವರು, ಸರಕಾರದ ಇಂತಹ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ, ಬಹಿರಂಗ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ನಾಗನಾಥ್, ಪ್ರತಾಪ್ ಸಿಂಹ, ಶಿವಶಂಕರ್‍ರಾಜನ್ ಮತ್ತಿತರರು ಉಪಸ್ಥಿತರಿದ್ದರು.