×
Ad

ಪ್ರಜೆಗಳು ಭಾಷೆ-ಧರ್ಮದ ಹೆಸರಿನೊಂದಿಗೆ ಹೋದಲ್ಲಿ ದೇಶ ಛಿದ್ರ : ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

Update: 2022-04-28 19:19 IST

ಕೊಣಾಜೆ: ಭಾಷೆ, ಧರ್ಮದ ಹೆಸರಲ್ಲಿ ಪ್ರಜೆಗಳು ಹೋದಲ್ಲಿ ದೇಶ ಛಿದ್ರವಾದೀತು. ಸಂವಿಧಾನದ ಆಶಯದಂತೆ ಮೌಲ್ಯದ ಆಧಾರಗಳಲ್ಲಿ ನಿಲ್ಲಿಸುವ ಸಮಾಜವನ್ನು ಕಟ್ಟಬೇಕಿದೆ, ಈ ನಿಟ್ಟಿನಲ್ಲಿ ಎಲ್ಲರಿಗೂ ಸಂವಿಧಾನದ ಅಧ್ಯಯನ ಅಗತ್ಯ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಕೋಶ ಕರ್ನಾಟಕ ಸರಕಾರ, ರಾಷ್ಟ್ರೀಯ ಸೇವಾ ಯೋಜನೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ಇವರ ಸಂಯುಕ್ತಾಶ್ರಯದಲ್ಲಿ ಡಾ ಬಿ.ಆರ್. ಅಂಬೇಡ್ಕರ್ ಪ್ರಚಾರ ಅಭಿಯಾನದ ಅಂಗವಾಗಿ ದೇರಳಕಟ್ಟೆಯ ಆವಿಷ್ಕಾರ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ  'ಸಂವಿಧಾನ ಓದು' ವಿಶ್ವ ವಿದ್ಯಾಲಯ ಮಟ್ಟದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಸಾಮಾಜಿಕ, ಧಾರ್ಮಿಕ ಸೇರಿದಂತೆ ದೇಶದ ಮೂಲೆಗಳಿಂದ ಪ್ರಜೆಗಳ ಗುಂಪುಗಳನ್ನು  ಸೇರಿಸಿಕೊಂಡು ಅವರಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅಂದಿನ ಹಿರಿಯರು ವೇತನಕ್ಕಾಗಿ ದುಡಿಯದೆ, ಸೇವೆಯೆಂದೇ ಪರಿಗಣಿಸಿ ದೇಶದ ಧರ್ಮಗ್ರಂಥ ಸಂವಿಧಾನವನ್ನು ರಚಿಸಿದರು. ವಿವಾದಗಳು ಚರ್ಚೆಗಳ ಮೂಲಕ ಬಗೆಹರಿದರೂ ಇಡೀ ಸಭೆಯಲ್ಲಿ ಸಭಾತ್ಯಾಗ, ಗಲಾಟೆಯಾಗಲಿ ನಡೆಯದೆ ರಚನೆಯಾದ ಸಂವಿಧಾನ ರಚನಾ ಸಭೆ,  ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ ಸಿಗಬೇಕು ಅನ್ನುವ ರಾಜನೀತಿಯ ಉದ್ದೇಶದಿಂದ ಆರಂಭವಾಗಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಮೂರು ಸ್ತಂಭಗಳ ಮೂಲಕ ಆಡಳಿತ ವ್ಯವಸ್ಥೆ ಸುಧಾರಣೆ ಕಂಡಿತ್ತು ಎಂದರು.

ಶಾಸಕಾಂಗ ಹಾಗೂ ಕಾರ್ಯಾಂಗಗಳಲ್ಲಿ  ಪ್ರಾಮಾಣಿಕತೆ ಹಾಗೂ  ವಿದ್ಯಾರ್ಹತೆಯ ಮಾನದಂಡ ಕೇಳಿ ಬಂದರೂ, ಪ್ರತಿ ಪ್ರಜೆಯ ಹಿತಕ್ಕಾಗಿ ಸ್ಥಾಪನೆಯಾಗಿರುವ ಸಂವಿಧಾನ ಹಾಗೂ ವಿದ್ಯಾರ್ಹತೆಯ ಮಾನದಂಡ ವಿದ್ದಲ್ಲಿ ಶೇ.20% ಜನ ಮಾತ್ರ  ವ್ಯವಸ್ಥೆಯಡಿ ಪಾಲ್ಗೊಳ್ಳಲು ಸಾಧ್ಯವಾಗುವುದು ಅನ್ನುವ ಅಭಿಪ್ರಾಯಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಮೂರು ರಂಗಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಕಲ್ಪಿಸಲಾಯಿತು. ಆದರೆ ಪ್ರಸ್ತುತ ಸ್ಥಿತಿ ಶಾಸಕಾಂಗ, ಕಾರ್ಯಾಮಗ, ನ್ಯಾಯಾಂಗ ಹಾಗೂ ಮಾಧ್ಯಮ  ನಾಲ್ಕೂ ರಂಗಗಳು ದುರಾಸೆಯುಳ್ಳವರ ಪಾಲಾಗಿದೆ. ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ಸಮಾಜ ನಿರ್ಮಾಣವಾಗಿದೆ. ದೇಶದ ಆಡಳಿತದುದ್ದಕ್ಕೂ ಹಗರಣಗಳ ಸಾಲುಗಳೇ ಕೇಳಿಬರುತ್ತಿದೆ. ಪೊಲೀಸ್ ನೇಮಕಾತಿಯಲ್ಲಿ ಅಕ್ರಮ, ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಭ್ರಷ್ಟಾಚಾರ, ಬೆಂಗಳೂರು ನಗರದ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ರೂ.20,000 ಕೋಟಿ ಅನುದಾನ, ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಶ್ನಿಸಲು ಹಲವು  ಅವಕಾಶಗಳಿಂದಾಗಿ  ಕಕ್ಷಿದಾರನ ತೀರ್ಪು ಕಾಲಕ್ಕೆ ಸಿಗುವುದು ಮರೀಚಿಕೆಯಾಗಿದೆ.  ಎಲ್ಲದಕ್ಕೂ ಮೂಲಕಾರಣ ಸಮಾಜವೇ ಆಗಿರುತ್ತದೆ.  ಹಿಂದೆ ಜೈಲಿಗೆ ಹೋಗಿ ಬಂದವನ ಮನೆಗೆ ಹೋಗದ ಕಾಲವಿತ್ತು, ಆ ಸಂದರ್ಭ ಅಪರಾಧ ನಡೆಸಿದಾತನ ಇಡೀ ಕುಟುಂಬವೇ ಸಮಾಜದಲ್ಲಿ ಶಿಕ್ಷೆಗೊಳಗಾಗುತಿತ್ತು. ಆದರೆ ಇದೀಗ ಜೈಲಿಗೆ ಹೋದವನನ್ನು ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ. ಇಂತಹ ದುರಾಡಳಿತಗಳನ್ನು ಹೋಗಲಾಡಿಸಲು ಸಂವಿಧಾನದ ಅಧ್ಯಯನದಿಂದಷ್ಟೇ ಸಾಧ್ಯ. ಇದರಿಂದ ವ್ಯಕ್ತಿಯಲ್ಲಿನ ಮೌಲ್ಯಗಳ ವೃದ್ಧಿಯೂ ಸಾಧ್ಯ.  ದೇಶದ ಭವಿಷ್ಯಕ್ಕಾಗಿ ದುರಾಸೆ ದೂರವಿಡಿ, ತೃಪ್ತಿಯನ್ನು ಜತೆಯಾಗಿಸುವ ಮನಸ್ಸು ಮುಂದಿನ ಯುವಪೀಳಿಗೆಯಲ್ಲಿ ಮೂಡಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಎನ್ಎಸ್‍ಎಸ್ ಸಂಯೋಜಕ ಹಾಗೂ ರಾಜ್ಯ ನೋಡೆಲ್ ಅಧಿಕಾರಿ ಸಂವಿಧಾನ ಓದು ಅಭಿಯಾನದ ರಾಜ್ಯ ನೋಡೆಲ್ ಅಧಿಕಾರಿ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ಮಾತನಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ಕಲಿಸುವ ವಿಚಾರ ಮಹತ್ವವಾದುದು. ಸಂವಿಧಾನ ಬರೀ ಗ್ರಂಥವಲ್ಲ, ಹುಟ್ಟಿನಿಂದ ಸಾಯುವವರೆಗೆ ಹೆಜ್ಜೆಯಿಡಲು ಸಂವಿಧಾನ ಸಹಕಾರಿ. ಸಂವಿಧಾನವನ್ನು ಅರ್ಥಮಾಡದೇ ಇದ್ದಲ್ಲಿ ತಪ್ಪು ಹೆಜ್ಜೆಗಳು ಇಡುತ್ತೇವೆ. ಸರ್ವರಿಗೆ ಸಮಪಾಲು, ಸರ್ವರಿಗೂ ಸಮಬಾಳು ಸಂವಿಧಾನದ ಒಟ್ಟು ಆಶಯವಾಗಿದೆ. ನಮ್ಮ ಪಾಲಿನ ಕರ್ತವ್ಯ ನಾವು ನಿರ್ವಹಿಸಿದಾಗ ಮಾತ್ರ ಸಂವಿಧಾನದ ಆಶಯ ಈಡೇರುವುದು. ಡಾ.ಬಿ.ಆರ್ ಅಂಬೇಡ್ಕರ್ ಹೇಳಿದಂತೆ ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ ಸಂವಿಧಾನದ ಮುನ್ನುಡಿ ಓದಿದರು.

ಡಾ.ಶಶಿಕುಮಾರ್ ಶೆಟ್ಟಿ ಸ್ವಾಗತಿಸಿದರು. ಡಾ.ರಾಹುಲ್ ಭಂಡಾರಿ, ಡಾ. ತಪಸ್ವಿ ಅತಿಥಿಗಳ ಪರಿಚಯಿಸಿದರು. ಡಾ.ನೇಸರ ಕಾಡನಗುಪ್ಪೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News