ಮುಲ್ಕಿ: ದಲಿತ ಯುವಕನಿಗೆ ಪೊಲೀಸ್ ದೌರ್ಜನ್ಯ ಆರೋಪ

Update: 2022-04-28 18:18 GMT

ಮುಲ್ಕಿ: ವಾಲಿಬಾಲ್ ಆಟವಾಡುತ್ತಿದ್ದ ಅಮಾಯಕ ದಲಿತ ಯುವಕನನ್ನು ಮುಲ್ಕಿ ಇನ್ಸ್ಪೆಕ್ಟರ್ ಕುಸುಮಾಧರ ಸೂಚನೆ ಮೇರೆಗೆ ಠಾಣೆಯ ಸಿಬ್ಬಂದಿ ಕರೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ನಾಯಕ ಸೀತಾರಾಮ್ ಲೈಟ್ ಹೌಸ್ ಆರೋಪಿಸಿದ್ದಾರೆ.

ಹಳೆಯಂಗಡಿಯ ಲೈಟ್ ಹೌಸ್ ಬಳಿ ಕೆಲ ಯುವಕರು ಬುಧವಾರ ಸಂಜೆ ವಾಲಿಬಾಲ್ ಆಟ ಆಡುತ್ತಿದ್ದು ಅಲ್ಲಿಗೆ ಬಂದ ಮುಲ್ಕಿ ಪೊಲೀಸ್ ಠಾಣೆ ಸಿಬ್ಬಂದಿ ವಾಲಿಬಾಲ್ ಆಟವಾಡುತ್ತಿದ್ದ ಯುವಕ ರಕ್ಷಿತ ಎಂಬಾತನನ್ನು ಪ್ರಶ್ನಿಸಿ ಬಳಿಗೆ ಕರೆದು "ನಿನ್ನ ತುಟಿ ಕಪ್ಪಾಗಿದೆ ನಿನ್ನನ್ನು ಟೆಸ್ಟ್ ಮಾಡಿಸಬೇಕು ತನಿಖೆ ನಡೆಸಬೇಕು ಎಂದು ಠಾಣೆಯ ಜೀಪ್ ಹತ್ತಲು ಹೇಳಿದ್ದಾರೆ. ಈ ಸಂದರ್ಭ ಮಾತಿನ ಚಕಮಕಿ ನಡೆದಿದ್ದು ಸ್ಥಳೀಯರು ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಿಬ್ಬಂದಿ ಉಡಾಫೆಯಾಗಿ ವರ್ತಿಸಿದ್ದು, ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ರಕ್ಷಿತ್ ತಂದೆ ಸೀತಾರಾಮ್ ರವರು ಅಮಾಯಕನನ್ನು ಠಾಣೆಗೆ ಕರೆದುಕೊಂಡು ಹೋಗುವ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದಾಗ ಅವರ ಮೇಲೆ ದೌರ್ಜನ್ಯ ನಡೆಸಿ ಉಡಾಫೆಯಾಗಿ ಉತ್ತರ ನೀಡಿರುವುದಾಗಿ ಸೀತಾರಾಮ್ ಆರೋಪಿಸಿದ್ದಾರೆ.

ಅಮಾಯಕನನ್ನು ಬಂಧಿಸಿದ ವಿರುದ್ಧ ದಲಿತ ಸಂಘರ್ಷ ಸಮಿತಿಯ ನಾಯಕರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದರು.

ಈ ಬಗ್ಗೆ ಸೀತಾರಾಮ್ ಮಾತನಾಡಿ ಅಮಾಯಕರನ್ನು ಬಂಧಿಸಿ ದೌರ್ಜನ್ಯ ನಡೆಸಿದ ಮುಲ್ಕಿ ಪೊಲೀಸರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

"ಗಾಂಜಾ ಸೇವಿಸಿರುವ ಬಗ್ಗೆ ಅನುಮಾನಾಸ್ಪದವಾಗಿ ಕಂಡು ಬಂದ ಕಾರಣ ಓರ್ವನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಬಳಿಕ ವರದಿ ನೆಗೆಟಿವ್ ಬಂದಿದ್ದು ಆತನನ್ನು ಬಿಟ್ಟು ಕಳುಹಿಸಲಾಗಿದೆ".

- ಕುಸುಮಾಧರ
ಪೊಲೀಸ್ ನಿರೀಕ್ಷಕರು ಮುಲ್ಕಿ ಪೊಲೀಸ್ ಠಾಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News