ಬೆಂಗಳೂರು: ನಗರದಲ್ಲಿ ಕೋವಿಡ್ ಹೆಚ್ಚಳ, ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ
ಬೆಂಗಳೂರು, ಎ.29: ಭಾರತದ ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳು ಮತ್ತು ನಗರದಲ್ಲಿ ಕಳೆದ ಒಂದು ವಾರದಿಂದ ಪ್ರಕರಣಗಳ ಕನಿಷ್ಠ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಪಾಲಿಕೆಯ ಮಾನ್ಯ ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕ್ ಚಂದ್ರ ರವರು ಶುಕ್ರವಾರ ಖಾಸಗಿ ಆಸ್ಪತ್ರೆ ಪ್ರತಿನಿಧಿಗಳು, ನಸಿರ್ಂಗ್ ಹೋಮ್ಸ್ ಅಸೋಸಿಯೇಷನ್ ಮತ್ತು ಅನೇಕ ಪ್ರಮುಖ ಖಾಸಗಿ ಆಸ್ಪತ್ರೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ವರ್ತಕರ ಸಂಘಗಳು, ಮಾಲ್‍ಗಳು, ಹೋಟೆಲ್‍ಗಳು, ಚಿತ್ರಮಂದಿರಗಳು ಮತ್ತು ಇತರೆ ವಾಣಿಜ್ಯ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು.
ಹೊರ ರೋಗಿಗಳ ವಿಭಾಗಗಳಲ್ಲಿ ಎಲ್ಲಾ ಐಎಲ್‍ಐಹಾಗೂ ಸಾರಿ (ILI/ SARI) ಪ್ರಕರಣಗಳನ್ನು ಪರೀಕ್ಷಿಸಿ. ಒಳರೋಗಿಗಳಿಗೆ ಕೋವಿಡ್-19 ಪರೀಕ್ಷೆ ಮಾಡಬೇಕು. ಐಸಿಎಂಆರ್ ಪೋರ್ಟಲ್‍ನಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಎಲ್ಲಾ ಪರೀಕ್ಷಾ ವಿವರಗಳನ್ನು ಅಪ್ಲೋಡ್ ಮಾಡಿ. ಅಖಿ ವ್ಯಾಲ್ಯು 30ಕ್ಕಿಂತ ಕಡಿಮೆ ಇರುವ ಎಲ್ಲಾ ಪಾಸಿಟಿವ್ ಪ್ರಕರಣಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್‍ಗೆ ಕಳುಹಿಸಲು ಅವರು ಸೂಚಿಸಿದರು.
ಖಾಸಗಿ ಆಸ್ಪತ್ರೆಯ ಹಾಸಿಗೆಗಳನ್ನು ಕಾಯ್ದಿರಿಸುವ ಕುರಿತು ಚರ್ಚಿಸಲಾಯಿತು ಮತ್ತು ಶೇ. 10 ಮೀಸಲಾತಿಯನ್ನು ಕಡ್ಡಾಯಗೊಳಿಸುವ ಕೇಂದ್ರ ಸರಕಾರದ ಹಿಂದಿನ ಆದೇಶವು ಇನ್ನೂ ಪ್ರಸ್ತುತವಾಗಿದೆ ಮತ್ತು ಆಸ್ಪತ್ರೆಗಳು ಅದನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಬಹುದು ಎಂದು ಪುನರುಚ್ಚರಿಸಲಾಯಿತು. ಖಾಸಗಿ ಆಸ್ಪತ್ರೆಯ ಹಾಸಿಗೆಗಳಿಗಾಗಿ ರಿಯಲ್ ಟೈಮ್ ಬೆಡ್ ಲಭ್ಯತೆ ಪೋರ್ಟಲ್ ಅನ್ನು ತಕ್ಷಣವೇ ಸಕ್ರಿಯಗೊಳಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಹೋಟೆಲ್‍ಗಳು, ಮಾಲ್‍ಗಳು, ಅಂಗಡಿಗಳು, ಚಿತ್ರಮಂದಿರಗಳು ಇತ್ಯಾದಿ ವಾಣಿಜ್ಯ ಸ್ಥಳಗಳಲ್ಲಿ ಕೋವಿಡ್ ಸಮುಚಿತ ನಡವಳಿಕೆಯನ್ನು ಕೊರೋನಾ ಮುಂಜಾಗೃತ ಕ್ರಮಗಳ ಪಾಲನೆ ಕುರಿತು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಸಿನಿಮಾ ಹಾಲ್‍ಗಳು, ಮಾಲ್‍ಗಳು, ರೆಸ್ಟೋರೆಂಟ್‍ಗಳು, ಹೋಟೆಲ್‍ಗಳಿಗೆ ಪ್ರವೇಶಕ್ಕಾಗಿ ಡಬಲ್ ಡೋಸ್ ವ್ಯಾಕ್ಸಿನೇಷನ್ ಅನ್ನು ಕಟ್ಟುನಿಟ್ಟಾ
ಗಿ ಕಡ್ಡಾಯಗೊಳಿಸಬೇಕು. ಎಲ್ಲಾ ಸಿಬ್ಬಂದಿಗಳ ಲಸಿಕಾಕರಣವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅವರನ್ನು ಆಗಾಗ್ಗೆ ಪರೀಕ್ಷೆಗೊಳಪಡಿಸಬೇಕು ಎಂದು ಅವರು ಹೇಳಿದರು.
ಹೆಚ್ಚಿನ ಪ್ರಕರಣಗಳಿರುವ ಪ್ರದೇಶಗಳಿಂದ ಬರುವವರ, ಅದರಲ್ಲೂ ವಿಶೇಷವಾಗಿ ಅಂತರ್‍ರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚು ಜಾಗರೂಕರಾಗಿರುವುದು. ಹೆಚ್ಚು ಜನರು ಸೇರುವ ವ್ಯಾಪಾರ ಪ್ರದೇಶಗಳಲ್ಲಿ ಮಾರ್ಷಲ್‍ಗಳು ಗಸ್ತು ತಿರುಗಬೇಕು ಮತ್ತು ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.