ಭಾರತದಲ್ಲಿ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆ

Update: 2022-04-30 04:51 GMT

ಎಪ್ರಿಲ್ 26ರಂದು ‘ಕಾನ್‌ಸ್ಟಿಟ್ಯೂಶನಲ್ ಕಾಂಡಕ್ಟ್ ಗ್ರೂಪ್’ಗೆ ಸೇರಿದ ಭಾರತದ 100ಕ್ಕೂ ಅಧಿಕ ಮಾಜಿ ಹಿರಿಯ ನಾಗರಿಕ ಸೇವಾ ಅಧಿಕಾರಿಗಳು ಪ್ರಧಾನಿಗೆ ಪತ್ರವೊಂದನ್ನು ಬರೆದು, ಕೋಮು ಹಿಂಸಾಚಾರದಲ್ಲಿ ಆಗಿರುವ ಆಘಾತಕಾರಿ ಏರಿಕೆ ಮತ್ತು ಅದಕ್ಕೆ ಸರಕಾರದ ಪ್ರತಿಕ್ರಿಯೆಗಳ ಬಗ್ಗೆ ಅವರ ಗಮನ ಸೆಳೆದರು. ಈ ಪತ್ರದಲ್ಲಿ ಹೇಳಲಾಗಿರುವ ವಿಷಯವು ಅತ್ಯಂತ ಮಹತ್ವದ್ದಾಗಿದೆ ಹಾಗೂ ಅತ್ಯಂತ ಪ್ರಾಮಾಣಿಕ ಮತ್ತು ಉನ್ನತ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳು ಅತ್ಯಂತ ಕಳವಳದಿಂದ ಬರೆದಿರುವ ಈ ಪತ್ರವನ್ನು ದೇಶ ಮತ್ತು ಅದರ ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಅತ್ಯಂತ ಸಾಂದರ್ಭಿಕ ಎಚ್ಚರಿಕೆಯನ್ನಾಗಿ ಪರಿಗಣಿಸಬೇಕಾಗಿದೆ.

ಈ ಪತ್ರಕ್ಕೆ ಸಹಿ ಹಾಕಿರುವ ಎಲ್ಲ 108 ಮಾಜಿ ಸರಕಾರಿ ಅಧಿಕಾರಿಗಳು ಹಿಂದೆ ಸರಕಾರದ ಅತ್ಯಂತ ಉನ್ನತ ಹುದ್ದೆಗಳಲ್ಲಿದ್ದವರು. ಈ ನಿವೃತ್ತ ಅಧಿಕಾರಿಗಳು ಭದ್ರತಾ ವಿಭಾಗದ ಅತ್ಯಂತ ಉನ್ನತ ಹುದ್ದೆಗಳಲ್ಲಿದ್ದದ್ದು ಈ ಪತ್ರದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಪತ್ರಕ್ಕೆ ಸಹಿ ಹಾಕಿದವರಲ್ಲಿ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಭಾರತ ಸರಕಾರದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೆ ಮತ್ತು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಶ್ಯಾಮ್ ಶರಣ್ ಮುಂತಾದವರು ಸೇರಿದ್ದಾರೆ.

ಮಹತ್ವದ ಘಟನೆಗಳು ನಡೆಯುವಾಗ, ವ್ಯವಸ್ಥೆಗಳ ಒಳ ಹೊರಗುಗಳನ್ನು ಬಲ್ಲ ಹಿರಿಯ ಮತ್ತು ಅನುಭವಿ ವ್ಯಕ್ತಿಗಳು ನಮಗೆ ಈ ಘಟನೆಗಳ ಬಗ್ಗೆ ಮತ್ತು ಏನಾಗುತ್ತಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಪ್ರಸಕ್ತ ಪ್ರಕರಣದಲ್ಲಿ ಮಾಹಿತಿ ನೀಡಲು ಈ ಸಾಂವಿಧಾನಿಕ ವರ್ತನೆ ಗುಂಪು (ಸಿಸಿಜಿ)ವಿಗಿಂತ ಹೆಚ್ಚಿನ ಅನುಭವಿ ಮತ್ತು ಹೆಚ್ಚಿನ ಅರ್ಹ ಗುಂಪು ನಮಗೆ ಸಿಗುವುದಿಲ್ಲ.

ಈ ಸವಾಲಿನ ಮತ್ತು ಸಾಹಸದ ಕೆಲಸ ಮಾಡಲು ತಮ್ಮನ್ನು ಯಾವುದು ಪ್ರೇರೇಪಿಸಿತು ಎನ್ನುವುದನ್ನು ಸಿಸಿಜಿ ಗುಂಪು ವಿವರಿಸಿದೆ. ‘‘ದೇಶದಲ್ಲಿ ದ್ವೇಷಪೂರಿತ ವಿನಾಶವನ್ನು ನಾವು ನೋಡುತ್ತಿದ್ದೇವೆ. ಇಲ್ಲಿನ ಬಲಿಪೀಠದಲ್ಲಿ ಇರುವುದು ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಮಾತ್ರವಲ್ಲ, ಸ್ವತಃ ಸಂವಿಧಾನವಿದೆ. ಮಾಜಿ ನಾಗರಿಕ ಸೇವಾ ಅಧಿಕಾರಿಗಳಾಗಿ ಸಾಮಾನ್ಯವಾಗಿ ನಾವು ಇಂಥ ಕಟು ಮಾತುಗಳಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಿಲ್ಲ. ಆದರೆ ನಮ್ಮ ಹಿರಿಯರು ರಚಿಸಿರುವ ಸಾಂವಿಧಾನಿಕ ಕಟ್ಟಡ (ವ್ಯವಸ್ಥೆ)ವು ನಾಶಗೊಳ್ಳುತ್ತಿರುವ ವೇಗವನ್ನು ನೋಡಿದಾಗ ನಮ್ಮ ಆಕ್ರೋಶ ಮತ್ತು ದುಃಖವನ್ನು ವ್ಯಕ್ತಪಡಿಸುವ ಬಲವಂತಕ್ಕೆ ನಾವು ಒಳಗಾಗಬೇಕಾಯಿತು.’’

ಹಾಗಾಗಿ, ಅಪಾಯಕ್ಕೆ ಸಿಲುಕಿರುವುದು ‘‘ಸಾಂವಿಧಾನಿಕ ವ್ಯವಸ್ಥೆ’’ಗಿಂತ ಕಡಿಮೆಯದೇನಲ್ಲ ಹಾಗೂ ಇದಕ್ಕೆ ಹೆಚ್ಚುವರಿಯಾಗಿ, ಖಂಡಿತವಾಗಿಯೂ ಕೆಲವು ಅಲ್ಪಸಂಖ್ಯಾತ ಗುಂಪುಗಳ ಭದ್ರತೆಗೆ ತೀವ್ರ ಬೆದರಿಕೆಯುಂಟಾಗಿದೆ.

ಇತ್ತೀಚಿನ ದಿನಗಳಲ್ಲಿ ಏನು ನಡೆದಿದೆ ಎನ್ನುವುದನ್ನು ಸಿಸಿಜಿ ಚುಟುಕಾಗಿ ವಿವರಿಸಿದೆ: ‘‘ಅಸ್ಸಾಮ್, ದಿಲ್ಲಿ, ಗುಜರಾತ್, ಹರ್ಯಾಣ, ಕರ್ನಾಟಕ, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿಕಳೆದ ಹಲವು ವರ್ಷಗಳು ಮತ್ತು ತಿಂಗಳುಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳು, ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ವಿರುದ್ಧದ ದ್ವೇಷಪೂರಿತ ಹಿಂಸಾಚಾರವು ಹೊಸ ಭಯಾನಕ ಆಯಾಮವನ್ನೇ ಪಡೆದುಕೊಂಡಿದೆ. ದಿಲ್ಲಿಯನ್ನು ಹೊರತುಪಡಿಸಿ ಹಿಂಸಾಚಾರ ನಡೆದ ಇತರ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಮತ್ತು ದಿಲ್ಲಿ ಪೊಲೀಸರನ್ನು ಕೇಂದ್ರ ಸರಕಾರ ನಿಯಂತ್ರಿಸುತ್ತದೆ. ಇದು ಈಗ, ದಶಕಗಳಿಂದ ನಡೆದುಕೊಂಡು ಬಂದಿರುವಂತೆ, ಹಿಂದುತ್ವ ಗುರುತಿನ ರಾಜಕೀಯವಾಗಿ ಮಾತ್ರ ಉಳಿದಿಲ್ಲ ಅಥವಾ ಕೋಮು ದಳ್ಳುರಿಯನ್ನು ಜೀವಂತವಾಗಿ ಇಡುವ ಪ್ರಯತ್ನವಾಗಿಯೂ ಉಳಿದಿಲ್ಲ. ಕಳೆದ ಹಲವು ವರ್ಷಗಳಲ್ಲಿ ನಡೆಯುತ್ತಿರುವುದು ಹೊಸ ದೈನಂದಿನ ಸಂಗತಿಯೆಂಬಂತಾಗಿದೆ. ಈಗಿನ ಅಪಾಯಕಾರಿ ಸಂಗತಿಯೆಂದರೆ, ನಮ್ಮ ಸಂವಿಧಾನದ ಮೂಲ ತತ್ವಗಳು ಮತ್ತು ಕಾನೂನಿನ ಆಡಳಿತವನ್ನು ಬಹುಸಂಖ್ಯತ್ವವನ್ನು ಪ್ರತಿಪಾದಿಸುವ ಶಕ್ತಿಗಳ ನಿಯಂತ್ರಣಕ್ಕೆ ಒಪ್ಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಸರಕಾರವು ಸಂಪೂರ್ಣವಾಗಿ ಶಾಮೀಲಾಗಿರುವಂತೆ ಕಾಣುತ್ತದೆ.

‘‘ಮುಸ್ಲಿಮರ ವಿರುದ್ಧದ ದ್ವೇಷ ಮತ್ತು ಪೂರ್ವಾಗ್ರಹವು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಆಡಳಿತ ವ್ಯವಸ್ಥೆಯ ಎಲ್ಲ ಪದರಗಳಲ್ಲಿ, ಸಂಸ್ಥೆಗಳಲ್ಲಿ ಮತ್ತು ಪ್ರಕ್ರಿಯೆಗಳಲ್ಲಿ ಆಳವಾಗಿ ಬೇರುಬಿಟ್ಟಿರುವಂತೆ ಕಾಣುತ್ತದೆ. ಕಾನೂನನ್ನು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ಉದ್ದೇಶಕ್ಕಾಗಿ ಬಳಸುವ ಬದಲು, ಅಲ್ಪಸಂಖ್ಯಾತರನ್ನು ನಿರಂತರವಾಗಿ ಹೆದರಿಕೆಯಲ್ಲಿಡುವ ಸಾಧನವನ್ನಾಗಿ ಬಳಸಲಾಗುತ್ತಿದೆ. ತಮ್ಮದೇ ಆದ ಧರ್ಮವನ್ನು ಅನುಸರಿಸುವ, ತಮ್ಮದೇ ಆದ ಸಂಪ್ರದಾಯಗಳು, ವಸ್ತ್ರ ಸಂಹಿತೆ ಮತ್ತು ವೈಯಕ್ತಿಕ ಕಾನೂನುಗಳನ್ನು ಪಾಲಿಸುವ ಹಾಗೂ ತಮ್ಮದೇ ಆದ ಆಹಾರದ ಹಕ್ಕುಗಳನ್ನು ಚಲಾಯಿಸುವ ಅವರ ಸಾಂವಿಧಾನಿಕ ಹಕ್ಕನ್ನು ಬೆದರಿಸಲಾಗುತ್ತಿದೆ. ಈ ಬೆದರಿಕೆಯನ್ನು ಅಲ್ಪಸಂಖ್ಯಾತರ ವಿರುದ್ಧ ಕಾನೂನುಬಾಹಿರ ಗುಂಪುಗಳನ್ನು ಛೂಬಿಟ್ಟು ಹಿಂಸಾಚಾರ ನಡೆಸುವುದರ ಮೂಲಕ ಮಾತ್ರ ಹಾಕಲಾಗುತ್ತಿಲ್ಲ, ಕಾನೂನನ್ನೇ ತಿರುಚುವ ಮೂಲಕವೂ ನಡೆಸಲಾಗುತ್ತಿದೆ...’’

‘‘ಸಮುದಾಯವೊಂದರ ವಿರುದ್ಧ ಹಿಂಸಾಚಾರ ನಡೆಸಲು ಕಾನೂನುಬಾಹಿರ ಗುಂಪುಗಳನ್ನು ಛೂಬಿಡಲು ಮಾತ್ರ ಸರಕಾರ ತನ್ನ ಅಧಿಕಾರವನ್ನು ಬಳಸುತ್ತಿರುವುದಲ್ಲ. ಸಮುದಾಯದಲ್ಲಿ ಭೀತಿ ಹುಟ್ಟಿಸಲು, ಅವರನ್ನು ಜೀವನೋಪಾಯದಿಂದ ವಂಚಿಸಲು ಕಾನೂನುಬದ್ಧ ಎಂದು ಕಾಣುವಂತಹ ಆಯ್ಕೆಗಳನ್ನೂ ಸರಕಾರ ಬಳಸುತ್ತಿದೆ. ಬಹುಸಂಖ್ಯತ್ವದ ರಾಜಕೀಯ ಅಧಿಕಾರ ಮತ್ತು ಬಹುಸಂಖ್ಯತ್ವದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳಿಗೆ ತಲೆಬಾಗುವ ಕೆಳ ದರ್ಜೆಯ ನಾಗರಿಕರು ಎಂಬ ನಿಮ್ಮ ಸ್ಥಾನಮಾನವನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ ಎನ್ನುವುದನ್ನು ಅವರಿಗೆ ಸ್ಪಷ್ಟಪಡಿಸುವುದಕ್ಕಾಗಿಯೂ ಸರಕಾರ ತನ್ನ ಅಧಿಕಾರವನ್ನು ಬಳಸಿಕೊಳ್ಳುತ್ತಿದೆ. ಅಲ್ಪಸಂಖ್ಯಾತರು, ದಲಿತರು, ಬಡವರು ಮತ್ತು ತುಳಿತಕ್ಕೊಳಗಾದವರು ಮುಂತಾದ ತನ್ನದೇ ಪ್ರಜೆಗಳ ವರ್ಗಗಳನ್ನು ದ್ವೇಷ ಹಿಂಸಾಚಾರದ ಗುರಿಗಳನ್ನಾಗಿ ವ್ಯವಸ್ಥಿತವಾಗಿ ಮಾಡುವ ಮತ್ತು ಅವರನ್ನು ಮೂಲಭೂತ ಹಕ್ಕುಗಳಿಂದ ವಂಚಿತಗೊಳಿಸುವ ದೇಶವಾಗಿ ನಾವು ಪರಿವರ್ತನೆಗೊಳ್ಳುತ್ತಿರುವ ಸಾಧ್ಯತೆಗಳು ಭೀತಿಹುಟ್ಟಿಸುವಷ್ಟು ನಿಜವಾಗಿವೆ.

‘‘ಕೋಮು ಹಿಂಸಾಚಾರದಲ್ಲಿ ಆಗಿರುವ ಈಗಿನ ಹೆಚ್ಚಳವನ್ನು ಸಮನ್ವಯಗೊಳಿಸುವ ಕೆಲಸವನ್ನು ರಾಜಕೀಯ ನಾಯಕತ್ವವು ಮಾಡುತ್ತಿದೆಯೇ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ, ಯಾವುದೇ ಭಯವಿಲ್ಲದೆ ವ್ಯವಹರಿಸಲು ದುಷ್ಕರ್ಮಿಗಳ ಗುಂಪುಗಳಿಗೆ ರಾಜ್ಯ ಮತ್ತು ಸ್ಥಳೀಯ ಮಟ್ಟಗಳಲ್ಲಿ ಆಡಳಿತಗಳು ಪೂರಕ ವಾತಾವರಣವನ್ನು ಸೃಷ್ಟಿಸುತ್ತಿರುವುದು ಸ್ಪಷ್ಟವಾಗಿದೆ. ಇಂಥ ಸಹಕಾರ ಮತ್ತು ಬೆಂಬಲವು ಸ್ಥಳೀಯ ಪೊಲೀಸರು ಮತ್ತು ಇತರ ಸರಕಾರಿ ಅಧಿಕಾರಿಗಳು ನೀಡುತ್ತಿರುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಅತ್ಯುನ್ನತ ರಾಜಕೀಯ ಮಟ್ಟಗಳಲ್ಲಿಯೂ ಇದಕ್ಕೆ ಪರೋಕ್ಷ ಬೆಂಬಲವಿರುವುದು ಗೋಚರಿಸುತ್ತದೆ.

ಸಂವಿಧಾನದ ಜಾತ್ಯತೀತ ಹಂದರಕ್ಕೆ ಇತ್ತೀಚೆಗೆ ಗಂಭೀರ ಅಪಾಯವನ್ನು ಒಡ್ಡಲಾಗಿದೆ ಎಂದು ಹೇಳಿರುವ ಹೇಳಿಕೆಯು, ‘‘ಇಂಥ ಬೆಳವಣಿಗೆಗಳು ನಡೆಯದಂತೆ ತಡೆಯಲು ವಿನ್ಯಾಸಗೊಳಿಸಲಾಗಿರುವ ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟನ್ನೇ ತಿರುಚಲಾಗುತ್ತಿದೆ ಹಾಗೂ ಅದನ್ನು ಬಹುಸಂಖ್ಯತ್ವದ ನಿರಂಕುಶತೆಯ ಸಾಧನವನ್ನಾಗಿಸಲಾಗುತ್ತಿದೆ. ಹಾಗಾಗಿ, ರಾಜಕೀಯ ಮತ್ತು ಸರಕಾರದ ಶಕ್ತಿಯನ್ನು ಪ್ರದರ್ಶಿಸಲು ಬುಲ್ಡೋಜರ್ ಈಗ ಹೊಸ ರೂಪಕವಾಗಿ ಮೂಡಿಬಂದಿರುವುದರಲ್ಲಿ ಅಚ್ಚರಿಯೇನಿಲ್ಲ. ‘ಸರಿಯಾದ ಪ್ರಕ್ರಿಯೆ’ ಮತ್ತು ‘ಕಾನೂನಿನ ಆಡಳಿತ’ದ ಸುತ್ತ ನಿರ್ಮಿಸಲಾಗಿರುವ ವ್ಯವಸ್ಥೆಯು ಕುಸಿಯಲು ಸಿದ್ಧವಾಗಿದೆ. ಜಹಾಂಗೀರ್‌ಪುರಿ ಘಟನೆಯಲ್ಲಿ ಸಾಬೀತಾಗಿರುವಂತೆ, ಈ ನೆಲದ ಅತ್ಯುನ್ನತ ನ್ಯಾಯಾಲಯದ ಆದೇಶಗಳನ್ನೂ ಕಾರ್ಯಾಂಗವು ಅತ್ಯಂತ ತಿರಸ್ಕಾರದಿಂದ ಕಾಣುತ್ತದೆ.

ಅತ್ಯಂತ ಹಿರಿಯ ನೂರು ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಬರೆದಿರುವ ಈ ಪತ್ರವು ಎಚ್ಚರಿಕೆಯ ಕರೆಗಂಟೆಯಾಗಬೇಕು ಮತ್ತು ಭಾರತೀಯ ಸಂವಿಧಾನ ರಕ್ಷಿಸುತ್ತಾ ಬಂದಿರುವ ವಿಶಿಷ್ಟ ಸಾಮಾಜಿಕ ಹಂದರವು ನಾಶಗೊಳ್ಳುವುದನ್ನು ತಡೆಯಬೇಕು. ಇತ್ತೀಚಿನ ದಿನಗಳಲ್ಲಿ, ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಅನುಭವಿಸಿರುವ ಹಾನಿಗೆ ಸಂಬಂಧಿಸಿ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗಿರುವ ಕಳವಳದ ಹಿನ್ನೆಲೆಯಲ್ಲಿ ಈ ಹೇಳಿಕೆಯು ಅಗಾಧ ಮಹತ್ವವನ್ನು ಹೊಂದಿದೆ.

Writer - ಭರತ್ ಡೋಗ್ರಾ

contributor

Editor - ಭರತ್ ಡೋಗ್ರಾ

contributor

Similar News