ನನ್ನ ಹೇಳಿಕೆಯನ್ನು ಖಾಸಗಿ ಸುದ್ದಿ ವಾಹಿನಿ ತಿರುಚಿದೆ: ಆರ್ಚ್ ಬಿಷಪ್ ಪೀಟರ್ ಮಚಾದೋ

Update: 2022-04-30 14:26 GMT
ಆರ್ಚ್ ಬಿಷಪ್ ಪೀಟರ್ ಮಚಾದೋ

ಬೆಂಗಳೂರು, ಎ. 30: ನಗರದ ಕ್ಲಾರೆನ್ಸ್ ಶಾಲೆಯಲ್ಲಿ ‘ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ಯಧರ್ಮದ ಮಕ್ಕಳಿಗೆ ಪ್ರವೇಶ ಇಲ್ಲ' ಎಂದು ಶಾಲೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಜೊತೆಗೆ ಆರ್ಚ್ ಬಿಷಪ್ ಪೀಟರ್ ಮಚಾದೋ ಹೇಳಿಕೆ ನೀಡಿದ್ದಾರೆ' ಎಂಬ ‘ಖಾಸಗಿ ವಾಹಿನಿ ಸುದ್ದಿ ಹಸಿ ಸುಳ್ಳಿನಿಂದ ಕೂಡಿದೆ' ಎಂದು ‘ಅಂತಹ ಆದೇಶವನ್ನು ಕ್ಲಾರೆನ್ಸ್ ಶಾಲೆ ಹೊರಡಿಸಿಲ್ಲ ಮತ್ತು ಅಂತಹ ಯಾವುದೇ ಹೇಳಿಕೆಯನ್ನು ತಾನು ನೀಡಿಲ್ಲ' ಎಂದು ಶಾಲೆ ಆಡಳಿತ ಮಂಡಳಿ ಹಾಗೂ ಆರ್ಚ್ ಬಿಷಪ್ ಪೀಟರ್ ಮಚಾದೋ ಸ್ಪಷ್ಟಣೆ ನೀಡಿದ್ದಾರೆ.

ಖಾಸಗಿ ಸುದ್ದಿವಾಹಿನಿ ವರದಿಗಾರ್ತಿ ಕೇಳಿದ ಪ್ರಶ್ನೆಗೆ ತಾನು ಉತ್ತರ ನೀಡಿದ್ದು, ಕ್ಲಾರೆನ್ಸ್ ಶಾಲೆಯಲ್ಲಿನ ಮಕ್ಕಳಿಗೆ ‘ನೈತಿಕ ಶಿಕ್ಷಣ ನೀಡುತ್ತಿದ್ದು, ಅದನ್ನು ಕೇವಲ ಬಹುಮಾನ ನೀಡಲು ಮಾತ್ರವೇ ಮಾಡಲಾಗುತ್ತಿದೆ. ಅದಕ್ಕೆ ಯಾವುದೇ ಅಂಕವನ್ನು ನೀಡುವುದಿಲ್ಲ. ಆದರೆ, ನೈತಿಕ ಶಿಕ್ಷಣ ಕ್ರೈಸ್ತ ಧರ್ಮದ ಮಕ್ಕಳಿಗೆ ಕಡ್ಡಾಯ. ಅನ್ಯಧರ್ಮದ ಮಕ್ಕಳು ಇಚ್ಛೆ ಇದ್ದರೆ ಬರಬಹುದು, ಇಲ್ಲವಾದರೆ ಅವರಿಗೆ ಕಡ್ಡಾಯ ಮಾಡುವುದಿಲ್ಲ' ಎಂದು ತಾನು ಸ್ಪಷ್ಟವಾಗಿ ತಿಳಿಸಿದ್ದೇನೆ. ವಿಡಿಯೋದಲ್ಲಿಯೂ ಅದು ದಾಖಲಾಗಿದೆ. ಆದರೆ, ಸುದ್ದಿ ವಾಹಿನಿ ಉದ್ದೇಶ ಪೂರ್ವಕವಾಗಿ ವಿವಾದ ಸೃಷ್ಟಿಸುತ್ತಿದ್ದು, ಈ ಸಂಬಂಧ ಶೀಘ್ರದಲ್ಲೆ ಲಿಖಿತ ರೂಪದ ಸ್ಪಷ್ಟಣೆ ನೀಡಲಿದ್ದಾರೆ ಎಂದು ಪೀಟರ್ ಮಚಾದೋ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಕಾಂತರಾಜ್ ತಿಳಿಸಿದ್ದಾರೆ.

‘ಶಾಲಾ ಆಡಳಿತ ಮಂಡಳಿಯೂ ಈಗಾಗಲೇ ಸ್ಪಷ್ಟಣೆ ನೀಡಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕ್ರೈಸ್ತ ಸಮುದಾಯದ ಶಿಕ್ಷಣ ಸಂಸ್ಥೆಗಳಿದ್ದು, ಅವುಗಳಲ್ಲಿ ಶೇ.75ರಷ್ಟು ಅನ್ಯಧರ್ಮದ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ. ಕೇವಲ ಶೇ.25ರಷ್ಟು ಮಾತ್ರವೇ ಕ್ರೈಸ್ತ ಧರ್ಮದ ಮಕ್ಕಳಿದ್ದಾರೆ. ಆದರೆ, ಅನ್ಯಧರ್ಮದ ಮಕ್ಕಳಿಗೆ ಪ್ರವೇಶವನ್ನೇ ನೀಡುವುದಿಲ್ಲ ಎಂಬುದು ಬಾಲಿಶತನದ ಹೇಳಿಕೆಯಾಗುತ್ತದೆ' ಎಂದು ಕಾಂತರಾಜ್ ದೂರವಾಣಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ಯ ಧರ್ಮದ ಮಕ್ಕಳಿಗೆ ಪ್ರವೇಶ ಇಲ್ಲವೆಂದು ಕ್ಲಾರೆನ್ಸ್ ಶಾಲೆಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಕ್ರೈಸ್ತ ಧರ್ಮದ ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಬಿಷಪ್ ಹೇಳಿಕೆ ನೀಡಿದ್ದಾರೆ. ಹೀಗಾಗಿ ‘ಧರ್ಮದಂಗಲ್ ನಡುವೆ ಕ್ಲಾರೆನ್ಸ್ ಶಾಲೆ ಕಿಚ್ಚು ಹೊತ್ತಿಸಿದಂತಾಗಿದೆ' ಎಂದು ಖಾಸಗಿ ವಾಹಿನಿಯ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಣೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News