×
Ad

ಕೆಎಸ್ಸಾರ್ಟಿಸಿಯಲ್ಲಿ ಪ್ರಪ್ರಥಮ ಬಾರಿಗೆ 7200 ನೌಕರರ ಶಿಸ್ತು ಪ್ರಕರಣಗಳ ಮನ್ನಾ‌

Update: 2022-05-01 15:42 IST

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ‌ ಎಲ್ಲಾ ವಿಭಾಗಗಳ ವ್ಯಾಪ್ತಿಯಲ್ಲಿ  ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.

ಸಾರಿಗೆ ಸಚಿವರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಹಾಗೂ ಸಮಸ್ತ ನಿಗಮದ ವತಿಯಿಂದ ಕಾರ್ಮಿಕರುಗಳಿಗೆ ವ್ಯವಸ್ಥಾಪಕ ನಿರ್ದೇಶಕರು ಶುಭಾಶಯಗಳನ್ನು ಸಲ್ಲಿಸಿದರು.

ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7,200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ‌ ಮಾಡಲಾಗಿದೆ. ಹತ್ತು ತಿಂಗಳುಗಳ ಅವಧಿಗಿಂತ ಕಡಿಮೆ ಅವಧಿಯ ಒಳಗಿನ ಗೈರುಹಾಜರಿಯನ್ನು ಮನ್ನಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವ ನೌಕರರ ವಿಚಾರಣೆಯನ್ನು ರದ್ದುಗೊಳಿಸಿ, ಬಸ್ಸನ್ನು ನೀಡಿ ಚಾಲನೆಗೆ ಅನುವು ಮಾಡಿಕೊಡಲಾಯಿತು.

ಅದರಂತೆ  ಗೈರುಹಾಜರಾಗಿದ್ದ 110 ನೌಕರರು ಮೂರು ದಿನಗಳಿಂದ ಕರ್ತವ್ಯ ಹಾಜರಾಗಿದ್ದಾರೆ. ನಿಗಮದ ಸಮಸ್ತ ಸಿಬ್ಬಂದಿಗಳು 35 ಸಾವಿರ, ಅದರಲ್ಲಿ ಒಟ್ಟು 8,414  ಶಿಸ್ತು ಪ್ರಕರಣಗಳಿದ್ದು, ಮೂರು ದಿನಗಳಿಂದ 7,200 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತ ದಂಡ ಅಂದರೆ  100ರೂ.,  200ರೂ.,  ಗರಿಷ್ಠ 500 ರೂ. ಅನ್ನು ವಿಧಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಈ ಪ್ರಕರಣಗಳಿಗೆ ಕನಿಷ್ಠವೆಂದರೆ 25ಸಾವಿರ ರೂ. ದಂಡ ವಿಧಿಸಬಹುದಾದ ಪ್ರಕರಣಗಳು‌ ಎಂದು ವಿವರಿಸಲಾಯಿತು.

ವ್ಯವಸ್ಥಾಪಕ ನಿರ್ದೇಶಕರು ಕಾರ್ಮಿಕರನ್ನು‌ ಉದ್ದೇಶಿಸಿ ಮಾತನಾಡುತ್ತಾ, ಕಾರ್ಮಿಕ ದಿನಾಚರಣೆಯ ಇತಿಹಾಸ, ಸಿದ್ಧಾಂತ ,ವಿಶೇಷತೆ ಕುರಿತು ವಿವರಿಸಿ , ನಮ್ಮ ಸಾರಿಗೆ ಸಂಸ್ಥೆಯ ಬೆನ್ನುಲುಬು ನಮ್ಮ ಕಾರ್ಮಿಕರು ಅವರ ಕ್ಷೇಮ‌ ಲಾಭವೇ ನಮ್ಮ‌ ಪ್ರಮುಖ ಆದ್ಯತೆಯಾಗಿರಬೇಕು. ನಮ್ಮ ಸಂಸ್ಥೆ ನಡೆಯುತ್ತಿರುವುದು ಚಾಲಕ,‌ ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳಿಂದನೇ ಹೊರತು ವ್ಯವಸ್ಥಾಪಕ ನಿರ್ದೇಶಕರಿಂದಲ್ಲ. ವ್ಯವಸ್ಥಾಪಕ ನಿರ್ದೇಶಕರು ಬಸ್ಸನ್ನು ಚಾಲನೆ ಮಾಡಲು ಸಾಧ್ಯವಿಲ್ಲ. ಅಧಿಕಾರಿ / ನೌಕರರ ಬಾಂಧವ್ಯ ಚೆನ್ನಾಗಿದ್ದರೆ ಮಾತ್ರ ಸಂಸ್ಥೆ ಚೆನ್ನಾಗಿರುತ್ತದೆ.

ಆಡಳಿತ ವರ್ಗ ಅಂದರೆ ಶಿಕ್ಷೆ ಕೊಡುವುದು ಮಾತ್ರವಲ್ಲ, ನೌಕರರ ಶ್ರೇಯೋಭಿವೃದ್ದಿಯಾಗಿ ದುಡಿಯುವುದು‌ ಕೂಡ ನಮ್ಮ ಕರ್ತವ್ಯವಾಗಿರಬೇಕು. ಆದರೆ ನೌಕರರು ಮತ್ತೊಮ್ಮೆ ಅಪರಾಧ/ ಅಪಘಾತ/ ಗೈರು‌ ಹಾಜರಿ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆಯನ್ನು ಸಹ ನೀಡಿದರು.

ನಿಗಮದ ಪ್ರತಿದಿನದ  ಸರಾಸರಿ ಆದಾಯ 10 ಕೋಟಿ ಇರಬೇಕು. ಆದರೆ ನಮಗೆ ಸರಾಸರಿ 8 ಕೋಟಿ ಮಾತ್ರ ಬರುತ್ತಿದೆ, ಇದರಲ್ಲಿ 70% ಡೀಸೆಲ್ ಪಾವತಿಗೆ ಸಂದಾಯ ಮಾಡಬೇಕಾಗಿದೆ. ಆದ್ದರಿಂದ ನಿಗಮದ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾದ ಸ್ಥಿತಿಯಲ್ಲಿದೆ ಎಂದರು.

ಇದೇ ಸಂದರ್ಭದಲ್ಲಿ  MBBS, M.Tech ಇತರೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ ನೌಕರರ  ಮಕ್ಕಳನ್ನು ಸನ್ಮಾನಿಸಿ,‌ ಮುಂದೆ ನೀವುಗಳು ಕೂಡ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಈ ಸಂಸ್ಥೆಯನ್ನು ಮುನ್ನಡೆಸುವ ಶುಭ ಕಾಲ ಬರಲಿ, ಶಿಕ್ಷಣ ಒಂದೇ ಆಯುಧ. ಅದನ್ನು ನಮ್ಮ‌ ನೌಕರರು ತಮ್ಮ ಮಕ್ಕಳಿಗೆ ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಈ‌‌ ಸಂದರ್ಭ ಮುಖ್ಯ ಯಾಂತ್ರಿಕ ಶಿಲ್ಪಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ), ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ವಿಭಾಗೀಯ ‌ನಿಯಂತ್ರಣಾಧಿಕಾರಿ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News