×
Ad

ಕಾರ್ಮಿಕ ವರ್ಗದಿಂದ ಮಾತ್ರ ದೇಶ ಉಳಿಸಲು ಸಾಧ್ಯ: ಸುನಿಲ್ ಕುಮಾರ್ ಬಜಾಲ್

Update: 2022-05-01 17:19 IST

ಮಂಗಳೂರು : ದೇಶದ ಬಂಡವಾಳಶಾಹಿಗಳ ಹಿತ ಕಾಯುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರಂತರವಾಗಿ ಜನವಿರೋಧಿ ನೀತಿಗಳನ್ನು ಜಾರಿಗೊಳಿಸಿ ದೇಶದ ಕಾರ್ಮಿಕ ವರ್ಗಕ್ಕೆ ಹಾಗೂ ಜನಸಾಮಾನ್ಯರಿಗೆ ದ್ರೋಹ ಬಗೆದಿದೆ. ಅಲ್ಲದೆ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ಹಾಗೂ ದೇಶದ ಇತರ ಸಂಪತ್ತನ್ನು ಕಾರ್ಪೊರೇಟ್ ಕಂಪೆನಿಗಳಗೆ ಕೈಯಾರೆ ನೀಡುವ ಮೂಲಕ ದೇಶದ ಅರ್ಥವ್ಯವಸ್ಥೆಯನ್ನು ದಿವಾಳಿಯೆಬ್ಬಿಸಿದೆ. ಸರಕಾರಗಳ ವಿರುದ್ದ ದುಡಿಯುವ ವರ್ಗ ಒಂದಾಗಬಹುದೆಂಬ ಭೀತಿಯಿಂದ ಜಾತಿ ಧರ್ಮದ ಹೆಸರಿನಲ್ಲಿ ದ್ವೇಷ ಹಬ್ಬಿಸಿ ಅನೈಕ್ಯತೆಯನ್ನು ಸೃಷ್ಠಿಸುತ್ತಿದೆ. ಆಳುವ ವರ್ಗದ ಇಂತಹ ಕುತಂತ್ರಗಳ ವಿರುದ್ದ ಕಾರ್ಮಿಕ ವರ್ಗ ಒಂದಾಗಿ ಹೋರಾಡುವ ಮೂಲಕ ದೇಶದ ಸ್ವಾತಂತ್ರ್ಯ, ಸಮಗ್ರತೆ, ಸಾರ್ವಭೌಮತ್ವವನ್ನು ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ವರ್ಗದಿಂದ ಮಾತ್ರವೇ ದೇಶವನ್ನು ಉಳಿಸಲು ಸಾಧ್ಯ ಎಂದು ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.

ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕುಪ್ಪೆಪದವಿನಲ್ಲಿ ರವಿವಾರ ನಡೆದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಪೊಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರದ ಜನವಿರೋಧಿ ನೀತಿಗಳಿಂದ ಜನತೆ ರೋಸಿ ಹೋಗಿದ್ದಾರೆ. ತಮ್ಮ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿ- ಸಂಘಪರಿವಾರವು ಮತ್ತೆ ಹಿಂದುತ್ವ ಅಜೆಂಡಾವನ್ನು ಮುನ್ನಲೆಗೆ ತಂದು ಜನತೆಯ ಬದುಕನ್ನೇ ನಾಶ ಮಾಡಲು ಹೊರಟಿದೆ. ಇಂತಹ ದುಷ್ಕ್ರತ್ಯಗಳ ವಿರುದ್ದ ಜನತೆ ಸಂಘಟಿತರಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದರು.

ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡ ದಿನೇಶ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಯಕ ಚಂದು ಪೂಜಾರಿ ಧ್ವಜಾರೋಹಣಗೈದರು. ಹಿರಿಯ ರೈತ ಕಾರ್ಮಿಕ ಮುಖಂಡ ಸದಾಶಿವದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ನಾಯಕಿ ವಸಂತಿ ಕುಪ್ಪೆಪದವು, ಡಿವೈಎಫ್‌ಐ ನಾಯಕ ಮನೋಜ್ ವಾಮಂಜೂರು ಉಪಸ್ಥಿತರಿದ್ದರು.

ನೂರಾರು ಕಾರ್ಮಿಕರು ಕುಪ್ಪೆಪದವು ಪೇಟೆಯಲ್ಲಿ ಆಕರ್ಷಕ ಮೆರವಣಿಗೆಯಲ್ಲಿ ಮೇ ದಿನ ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News