ಬೆಂಗಳೂರು: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ
ಬೆಂಗಳೂರು, ಮೇ 1: ರಾಜ್ಯ ರಾಜಧಾನಿಯ ಹಲವು ಕಡೆಗಳಲ್ಲಿ ರವಿವಾರ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆಯಾಯಿತು. ಸಂಜೆ ಪ್ರಾರಂಭವಾದ ಮಳೆ ಧಾರಾಕಾರ ಸುರಿದಿದ್ದರ ಪರಿಣಾಮದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಮಡಿವಾಳ, ಶಾಂತಿನಗರ, ಮೈಸೂರು ಬ್ಯಾಂಕ್ ವೃತ್ತ, ಕೋರಮಂಗಲ, ಮಲ್ಲೇಶ್ವರಂ, ಕಾರ್ಪೊರೇಷನ್ ವೃತ್ತ, ಮೆಜೆಸ್ಟಿಕ್, ಸರ್ಜಾಪುರ, ಬನ್ನೇರುಘಟ್ಟ ರಸ್ತೆಯಲ್ಲಿ ಆಲಿಕಲ್ಲು ಮಳೆಯಾಗಿದ್ದು, ಇದರಿಂದ ವಾಹನ ಸವಾರರು ಮತ್ತು ರಸ್ತೆ ಬದಿ ವ್ಯಾಪಾರಿಗಳು ಪರದಾಡುವಂತಾಯಿತು. ಗಾಂಧಿನಗರ, ಶಿವಾನಂದ ವೃತ್ತ, ಕುಮಾರ ಪಾರ್ಕ್, ರಾಜಾಜಿನಗರ, ಸುಬ್ರಮಣ್ಯ ನಗರ, ಜಕ್ಕೂರು, ಯಲಹಂಕ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಮಳೆಯ ಕಾರಣಕ್ಕೆ ಸಂಚಾರ ದಟ್ಟಣೆ ಉಂಟಾಗಿತ್ತು.
ಗುಂಡಿ ಬಿದ್ದಿದ್ದ ರಸ್ತೆಗಳು ಮಳೆನೀರಿನಿಂದ ತುಂಬಿದ್ದರಿಂದ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಎದುರಿಸಿದರು. ನಗರದ ಹಲವೆಡೆ ನೆಲದಡಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇದಕ್ಕಾಗಿ ಅಗೆಯಲಾಗಿದ್ದ ಗುಂಡಿಗಳಲ್ಲೂ ಮಳೆ ನೀರು ಸಂಗ್ರಹವಾಗಿತ್ತು. ಅಲ್ಲಲ್ಲಿ ರಾಶಿ ಹಾಕಿದ್ದ ಮಣ್ಣು ಮಳೆಗೆ ಕೊಚ್ಚಿಕೊಂಡು ರಸ್ತೆ ಮೇಲೆ ಹರಡಿಕೊಂಡಿತ್ತು. ಆ ಮಾರ್ಗದಲ್ಲಿ ಸಾಗುವವರಿಗೆ ಕೆಸರಿನ ಸಿಂಚನವಾಯಿತು.
ಬ್ರಿಗೇಡ್ ರಸ್ತೆ ಹಾಗೂ ಚರ್ಚ್‍ಸ್ಟ್ರೀಟ್‍ನಲ್ಲಿ ಹಲವರು ಮಳೆಯಲ್ಲಿ ನೆನೆದು ಸಂಭ್ರಮಿಸಿದರು. ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದ ದೃಶ್ಯಗಳೂ ಕಂಡುಬಂದವು. ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದ್ದು, ಎಲ್ಲ ಜಿಲ್ಲೆಗಳಲ್ಲಿಯೂ ವರುಣನ ಆರ್ಭಟ ಹೆಚ್ಚಾಗಲಿದೆ. ಕರ್ನಾಟಕದ ಹೆಚ್ಚಿನ ಪ್ರದೇಶಗಳಲ್ಲಿ ಮಳೆಗಿಂತ ಗುಡುಗು, ಸಿಡಿಲುಗಳ ಆರ್ಭಟವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.