ಸಂಘಟಿತ ಕಾರ್ಮಿಕರ ಆದ್ಯತೆಗಳು ಮತ್ತು ಜವಾಬ್ದಾರಿ

Update: 2022-05-02 04:24 GMT

ಭಾಗ-02

ಸ್ವತಂತ್ರ ಭಾರತದ ಕಾರ್ಮಿಕ ಚಳವಳಿಗಳನ್ನು ಎರಡು ಮಜಲುಗಳಲ್ಲಿ ಕಾಣಬಹುದು. ಮೊದಲನೆಯದು ಸರಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳು, ವಾಣಿಜ್ಯ ಕೇಂದ್ರಗಳು, ಉತ್ಪಾದನಾ ವಲಯದ ಸಾರ್ವಜನಿಕ ಉದ್ದಿಮೆಗಳು ಮತ್ತು ಶೈಕ್ಷಣಿಕ ವಲಯದ ಸಂಸ್ಥೆಗಳು. ಎರಡನೆಯದು ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಕೂಲಿಕಾರರು, ಕಾರ್ಮಿಕರು ಮತ್ತು ಗ್ರಾಮೀಣ ದುಡಿಮೆಗಾರರು. ಈ ಎರಡೂ ವಲಯಗಳಲ್ಲಿನ ದುಡಿಮೆಗಾರರನ್ನು ಸ್ವಾತಂತ್ರ ಪೂರ್ವದಿಂದಲೂ ಸಂಘಟಿಸುತ್ತಲೇ ಅವರ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿರುವ ಸಂಘಟನೆಗಳು ಹಲವು. ಸಮಾಜವಾದಿ ಅರ್ಥವ್ಯವಸ್ಥೆಯನ್ನು ಸಾಧಿಸಿ ಕಾರ್ಮಿಕರಲ್ಲಿ ವರ್ಗಪ್ರಜ್ಞೆಯನ್ನು ಬೆಳೆಸುವ ಮೂಲಕ ಸಮತಾ ಸಮಾಜವನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಎಡಪಂಥೀಯ ಕಾರ್ಮಿಕ ಸಂಘಟನೆಗಳಷ್ಟೇ ಪ್ರಬಲವಾಗಿ, ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನೇ ಪೋಷಿಸಿ, ಕೇವಲ ಸಾಮಾಜಿಕ ನ್ಯಾಯದ ಮೂಲಕ ಸಮತೋಲನ ಕಾಪಾಡಲಿಚಿಸುವ ಕಾಂಗ್ರೆಸ್‌ನಂತಹ ಮಧ್ಯಪಂಥೀಯ ಸಂಘಟನೆಗಳು ಇವೆ. ಮತ್ತೊಂದೆಡೆ ವರ್ಗಪ್ರಜ್ಞೆಯ ಪರಿಕಲ್ಪನೆಯನ್ನೇ ಒಪ್ಪದೆ, ಮತಧರ್ಮಗಳ ಆಧಾರದಲ್ಲಿ ರಾಷ್ಟ್ರ ನಿರ್ಮಾಣ ಮಾಡುವ ಮತ್ತು ವರ್ಣಾಶ್ರಮ ಧರ್ಮದ ಜಾತಿ ವ್ಯವಸ್ಥೆಯನ್ನೂ ಯಥಾಸ್ಥಿತಿಯಲ್ಲಿ ಕಾಪಾಡುವ ಧೋರಣೆ ಹೊಂದಿದ ಬಲಪಂಥೀಯ ಸಂಘಟನೆಗಳೂ ಇವೆ. ರೈಲು, ರಸ್ತೆ, ವಿಮಾನಯಾನ ಮತ್ತು ಕಡಲಸಾರಿಗೆ, ಬಂದರುಗಳು, ಹಣಕಾಸು ವಲಯ, ಉತ್ಪಾದನಾ ವಲಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಈ ಸಂಘಟನೆಗಳು ಭಾರತದ 31 ದಶಲಕ್ಷ ಕಾರ್ಮಿಕರನ್ನು ಪ್ರತಿನಿಧಿಸುತ್ತವೆ. ಇವರ ಪೈಕಿ 17.3 ದಶಲಕ್ಷ ಕಾರ್ಮಿಕರು ಸರಕಾರಿ ಇಲಾಖೆಗಳಲ್ಲಿ ಅಥವಾ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕಂಡುಬರುತ್ತಾರೆ. ಪ್ರಧಾನವಾಗಿ ಎಐಟಿಯುಸಿ, ಸಿಐಟಿಯು, ಎಐಸಿಸಿಟಿಯು, ಯುಟಿಯುಸಿ, ಎಚ್‌ಎಂಎಸ್ ಮತ್ತಿತರ ಸಂಘಟನೆಗಳು ಎಡಪಂಥೀಯ ಧೋರಣೆಯನ್ನು ಅನುಸರಿಸಿದರೆ ಸಂಘಪರಿವಾರದ ಗುಂಪಿಗೆ ಸೇರಿದ ಬಿಎಂಎಸ್ ಬಲಪಂಥೀಯ ಧೋರಣೆಯನ್ನೇ ಅನುಸರಿಸುತ್ತದೆ. ಐಎನ್‌ಟಿಯುಸಿ ಕಾಂಗ್ರೆಸ್ ಪಕ್ಷದ ಕಾರ್ಮಿಕ ಅಂಗವಾಗಿದ್ದು, ಪಕ್ಷದ ಹಿತಾಸಕ್ತಿಯನ್ನೇ ಪ್ರಧಾನವಾಗಿ ಪರಿಗಣಿಸುತ್ತಲೇ ಕಾರ್ಮಿಕರ ರಕ್ಷಣೆಗಾಗಿ ಹೋರಾಡುತ್ತದೆ. ಕಾರ್ಮಿಕರ ದುಡಿಮೆಯ ಹಕ್ಕುಗಳ ರಕ್ಷಣೆ, ನೌಕರಿ ಭದ್ರತೆ, ನಿವೃತ್ತಿ ನಂತರದ ಸೌಲಭ್ಯಗಳು ಮತ್ತು ಸೇವಾ ಕ್ಷೇತ್ರದ ಸವಲತ್ತುಗಳ ಬಗ್ಗೆ ಎಲ್ಲ ಕಾರ್ಮಿಕ ಸಂಘಟನೆಗಳೂ ಬಹುಪಾಲಿಗೆ ಒಂದೇ ಧೋರಣೆ ಹೊಂದಿರುವಂತೆ ಕಂಡರೂ, ಬಲಪಂಥೀಯ ಬಿಎಂಎಸ್ ಉದ್ಯಮಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ, ಕಾರ್ಮಿಕರ ಹಿತಾಸಕ್ತಿಯನ್ನು ಔದ್ಯಮಿಕ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಕಾಪಾಡಲು ಪ್ರಯತ್ನಿಸುತ್ತದೆ. ಆಡಳಿತಾರೂಢ ಸರಕಾರಗಳೊಂದಿಗೆ, ಪ್ರಭುತ್ವದ ಜನವಿರೋಧಿ ನೀತಿಗಳೊಂದಿಗೆ ಮತ್ತು ಉದ್ಯಮಿಗಳೊಂದಿಗೆ ರಾಜಿ ಮಾಡಿಕೊಳ್ಳುವುದರ ಮೂಲಕ ತಮ್ಮ ಸಂಘಟನಾತ್ಮಕ ಅಸ್ತಿತ್ವವನ್ನು ಕಾಪಾಡಿಕೊಂಡು, ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯದಂತೆ ಎಚ್ಚರವಹಿಸುವ ಬಿಜೆಪಿಯ ಬಿಎಂಎಸ್ ಮತ್ತು ಕಾಂಗ್ರೆಸ್ ಪಕ್ಷದ ಇಂಟಕ್ ದೇಶದ ಅತಿ ದೊಡ್ಡ ಕಾರ್ಮಿಕ ಸಂಘಟನೆಗಳಾಗಿವೆ. ಕಾರ್ಮಿಕರಲ್ಲಿ ವರ್ಗಪ್ರಜ್ಞೆ ಮೂಡಿಸುವುದರೊಂದಿಗೆ, ರಾಜಕೀಯ ಪ್ರಜ್ಞೆಯನ್ನೂ ಬೆಳೆಸಿ ಸಮ ಸಮಾಜದ ಕನಸುಗಳನ್ನು ಸಾಕಾರಗೊಳಿಸಲು, ದುಡಿಯುವ ವರ್ಗಗಳನ್ನು ಮುಂಚೂಣಿ ಕಾಲಾಳುಗಳಾಗಿ ತಯಾರು ಮಾಡುವ ಸದುದ್ದೇಶ ಹೊಂದಿರುವ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಸಂಖ್ಯಾಬಲದಲ್ಲಿ ಕಡಿಮೆ ಇದ್ದರೂ, ಇಂದಿಗೂ ಸಹ ಹಲವು ಉದ್ದಿಮೆಗಳಲ್ಲಿ ಕಾರ್ಮಿಕರ ಪರ ದಿಟ್ಟ ಹೋರಾಟಗಳನ್ನು ನಡೆಸುತ್ತಿವೆ. ಅಷ್ಟೇ ಅಲ್ಲದೆ ಬೃಹತ್ ಕೈಗಾರಿಕೆಗಳಿಗಾಗಿ, ಉದ್ದಿಮೆಗಳಿಗಾಗಿ, ಹೆದ್ದಾರಿಗಳಿಗಾಗಿ ಭೂಮಿಯನ್ನು ಕಳೆದುಕೊಂಡು ಬೀದಿ ಪಾಲಾಗಿರುವ ಗ್ರಾಮೀಣ ಕೃಷಿಕರ ಪರವಾಗಿಯೂ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಹೋರಾಟಗಳನ್ನು ರೂಪಿಸುತ್ತಿವೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಕೃಷಿ ಕಾರ್ಮಿಕರು ಕಾರ್ಮಿಕ ಸಂಘಟನೆಗಳ ಒಂದು ಭಾಗವಾಗಿ ಇಂದು ತಮ್ಮ ಹಕ್ಕೊತ್ತಾಯಗಳಿಗಾಗಿ ಹೋರಾಡುತ್ತಿದ್ದಾರೆ. ಮತ್ತೊಂದೆಡೆ ಹಣಕಾಸು ವಲಯದಲ್ಲಿ, ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದಲ್ಲಿ ಎಡಪಂಥೀಯ ಸಂಘಟನೆಗಳು ತಮ್ಮದೇ ಅದ ಪ್ರಾಬಲ್ಯ ಹೊಂದಿದ್ದು, ಬ್ಯಾಂಕ್ ಖಾಸಗೀಕರಣದ ವಿರುದ್ಧ, ಎಲ್‌ಐಸಿ ಷೇರು ವಿಕ್ರಯದ ವಿರುದ್ಧ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ನಗದೀಕರಣದ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರಗಳನ್ನು ನಡೆಸಿವೆ. ಮಾರ್ಚ್ 28ರಂದು ನಡೆದ ದೇಶವ್ಯಾಪಿ ಕಾರ್ಮಿಕ ಮುಷ್ಕರ ಚಾರಿತ್ರಿಕ ಎನಿಸಿಕೊಂಡಿದೆ. ಆದರೆ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಜಾರಿಗೊಳಿಸುತ್ತಿರುವ ನರೇಂದ್ರ ಮೋದಿ ಸರಕಾರ, ಲಾಭದಾಯಕ ಸಾರ್ವಜನಿಕ ಉದ್ದಿಮೆಗಳನ್ನೂ ಸಹ ನಗದೀಕರಣಗೊಳಿಸುವ ಮೂಲಕ, ಖಾಸಗಿ ಕಾರ್ಪೊರೇಟ್ ಬಂಡವಾಳಿಗರಿಗೆ ಒಪ್ಪಿಸಲು ಸಜ್ಜಾಗುತ್ತಿದೆ. ರಸ್ತೆಗಳು, ರೈಲು ಮಾರ್ಗಗಳು, ವಿದ್ಯುತ್ ಪ್ರಸರಣ, ನೈಸರ್ಗಿಕ ಅನಿಲ ಪ್ರಸರಣ, ದೂರ ಸಂಪರ್ಕ, ಉಗ್ರಾಣಗಳು, ಗಣಿಗಾರಿಕೆ, ವಿಮಾನಯಾನ, ಬಂದರುಗಳು, ಮೀನುಗಾರಿಕೆ ಮತ್ತು ಕ್ರೀಡಾಂಗಣಗಳ ನಿರ್ವಹಣೆಯನ್ನು ನಗದೀಕರಿಸುವ ಮೂಲಕ ಆರು ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಲು ಕೇಂದ್ರ ಸರಕಾರ ಮೂರು ವರ್ಷಗಳ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ಇದರೊಂದಿಗೆ 70 ವರ್ಷಗಳ ಕಾಲ ದೇಶದ ಪ್ರಗತಿಗೆ ಪೂರಕವಾಗಿದ್ದ ಸಾರ್ವಜನಿಕ ಉದ್ದಿಮೆಗಳನ್ನೂ ಸಹ ಕಾರ್ಪೊರೇಟೀಕರಣ ಪ್ರಕ್ರಿಯೆಗೊಳಪಡಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ಬಿಇಎಂಎಲ್, ಬಿಇಎಲ್, ಬಿಎಚ್‌ಇಎಲ್, ಎಚ್‌ಎಎಲ್, ಎನ್‌ಎಎಲ್, ಬಿಎಸ್‌ಎನ್‌ಎಲ್ ಮುಂತಾದ ಸಾರ್ವಜನಿಕ ಉದ್ದಿಮೆಗಳು ಕ್ರಮೇಣ ಅದಾನಿ, ಅಂಬಾನಿ, ಮಿತ್ತಲ್ ಅವರ ಸಾಮ್ರಾಜ್ಯದ ಒಂದು ಭಾಗವಾಗಲಿವೆ. ಸಾರ್ವಜನಿಕ ಉದ್ಯೋಗ ಸೃಷ್ಟಿಸುವುದು ಪ್ರಭುತ್ವದ ಆದ್ಯತೆ ಮತ್ತು ಕರ್ತವ್ಯವೇ ಆದರೂ, ನವ ಉದಾರವಾದ ಮತ್ತು ಜಾಗತೀಕರಣ ನೀತಿಗಳು ವ್ಯತಿರಿಕ್ತವಾಗಿಯೇ ಜಾರಿಯಾಗುತ್ತವೆ. ಉದ್ಯೋಗ ಸೃಷ್ಟಿಸುವುದಾಗಲೀ, ಶಿಕ್ಷಣ ಆರೋಗ್ಯ ಮುಂತಾದ ಸಾರ್ವಜನಿಕ ಸೇವೆಗಳನ್ನು ಒದಗಿಸುವುದಾಗಲೀ ಸರಕಾರದ ಕರ್ತವ್ಯ ಅಲ್ಲ ಎಂದು ಕೇಂದ್ರ ಸರಕಾರ ಅಧಿಕೃತವಾಗಿಯೇ ಘೋಷಿಸಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ಮೂರು ದಶಕಗಳ ಮುನ್ನವೇ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ತಂತ್ರಜ್ಞಾನದ ಅಳವಡಿಕೆಗಳನ್ನೂ, ಆಡಳಿತ ನೀತಿಗಳನ್ನೂ ಮತ್ತು ನಿರ್ವಹಣೆಯ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಬ್ಯಾಂಕ್ ಖಾಸಗೀಕರಣದ ವಿರುದ್ಧ ಎರಡು ದಶಕದ ಹಿಂದೆಯೇ ರೂಪುಗೊಳ್ಳಬೇಕಿದ್ದ ಕಾರ್ಮಿಕ ಸಂಘಟನೆಗಳ ಹೋರಾಟಗಳು ಕೇವಲ ಮುಷ್ಕರಗಳಿಗೆ ಸೀಮಿತವಾಗಿದ್ದು ದುರಂತ. ಬ್ಯಾಂಕ್ ರಾಷ್ಟ್ರೀಕರಣದ ಫಲಾನುಭವಿಗಳಾದ ರೈತರು, ಗ್ರಾಮೀಣ ಕುಶಲಕರ್ಮಿಗಳು, ಗ್ರಾಮೀಣ ಆರ್ಥ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರ ವಹಿಸುವ ನಿರುದ್ಯೋಗಿ ಯುವ ಜನತೆ , ಆರ್ಥಿಕವಾಗಿ ಹಿಂದುಳಿದ ಕೆಳ ಮಧ್ಯಮ ವರ್ಗಗಳು ಮತ್ತು ನಗರಪ್ರದೇಶಗಳ ಸಣ್ಣ ವ್ಯಾಪಾರಿಗಳು, ಈ ವರ್ಗಗಳಿಂದ ಬ್ಯಾಂಕ್ ಖಾಸಗೀಕರಣದ ವಿರುದ್ಧ ಪ್ರಬಲ ವಿರೋಧ ವ್ಯಕ್ತವಾಗಬೇಕಿತ್ತು. ಆದರೆ ಬಂಡವಾಳಶಾಹಿ ಅಭಿವೃದ್ಧಿ ಪಥದ ಫಲಾನುಭವಿಗಳಾಗಿ ಹಿತವಲಯದಲ್ಲಿರುವ ಈ ಜನತೆ ಇಂದು ಖಾಸಗೀಕರಣ ಮತ್ತು ಕಾರ್ಪೊರೇಟೀಕರಣದ ಆರಾಧಕರಾಗಿದ್ದಾರೆ. ಈ ಜನಸಮುದಾಯಗಳನ್ನು ತಲುಪುವ ಜವಾಬ್ದಾರಿ ಬ್ಯಾಂಕ್ ಮತ್ತು ವಿಮಾ ಕ್ಷೇತ್ರದ ಹಾಗೂ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕ ಸಂಘಟನೆಗಳ ಮೇಲಿತ್ತು. ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಜಾಗತೀಕರಣದಿಂದ ಹಾನಿಗೊಳಗಾಗುತ್ತಿರುವ ಜೀವನೋಪಾಯದ ಮಾರ್ಗಗಳನ್ನು ಗುರುತಿಸಿ, ಬಾಧಿತ ತಳಸಮುದಾಯದ ಜನರನ್ನು ತಲುಪುವ ದೂರದೃಷ್ಟಿ ಸಂಘಟಿತ ಕಾರ್ಮಿಕರಲ್ಲಿ ಇರಬೇಕಿತ್ತು. ಮಾರ್ಕ್ಸ್‌ವಾದದಿಂದ ಪ್ರಭಾವಿತವಾದ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಕಾರ್ಖಾನೆ ಕಾರ್ಮಿಕರಲ್ಲಿ ಮತ್ತು ಬ್ಯಾಂಕಿಂಗ್, ವಿಮಾ ಕ್ಷೇತ್ರದ ಕಾರ್ಮಿಕರಲ್ಲಿ ವರ್ಗಪ್ರಜ್ಞೆಯನ್ನು ಬೆಳೆಸುವುದರಲ್ಲಿ ವಿಫಲವಾಗಿರುವುದೇ ಅಲ್ಲದೆ, ಕಾರ್ಮಿಕ ಹೋರಾಟಗಳನ್ನು ಆರ್ಥಿಕತೆಗೆ ಸೀಮಿತಗೊಳಿಸಿರುವುದರ ಪರಿಣಾಮವನ್ನು ಇಂದು ನಾವು ಎದುರಿಸುತ್ತಿದ್ದೇವೆ. ಬ್ಯಾಂಕ್ ರಾಷ್ಟ್ರೀಕರಣದ ಫಲಾನುಭವಿಗಳಾಗಿ, ಹಿತವಲಯದಲ್ಲಿ ನೆಲೆಗೊಂಡಿರುವ ಬ್ಯಾಂಕ್ ನೌಕರರಲ್ಲೂ ಸಹ ಕಾರ್ಪೊರೇಟ್ ಮಾರುಕಟ್ಟೆ ಪರ ಧೋರಣೆ ಇರುವುದನ್ನು ಗಮನಿಸಬಹುದು. ಹಾಗಾಗಿಯೇ ಕೆಂಬಾವುಟದಡಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಈ ನೌಕರರು, ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಅಥವಾ ಇತರ ಬಂಡವಾಳಿಗ ಪಕ್ಷಗಳೊಡನೆ ಗುರುತಿಸಿಕೊಳ್ಳುತ್ತಾರೆ. ಈ ವಾತಾವರಣಕ್ಕೆ ವ್ಯಕ್ತಿಗತ ನಿಲುವುಗಳಿಗಿಂತಲೂ, ಸಂಘಟನಾತ್ಮಕ ವೈಫಲ್ಯ ಕಾರಣ ಎಂಬ ಆತ್ಮಾವಲೋಕನ ಇಂದು ಅತ್ಯವಶ್ಯವಾಗಿದೆ. ಹಣಕಾಸು ವಲಯದಲ್ಲೂ ಸಹ ಸರಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಹೊರಗುತ್ತಿಗೆ ನೌಕರರು ಹೆಚ್ಚಾಗಿದ್ದು, ಬ್ಯಾಂಕಿಂಗ್ ವಲಯದಲ್ಲೇ 41,177 ಹುದ್ದೆಗಳು ಖಾಲಿ ಉಳಿದಿವೆ. ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ಚುರುಕಾಗುತ್ತಿರುವಂತೆಲ್ಲಾ ಬ್ಯಾಂಕುಗಳ ವಿಲೀನವೂ ಮುಂದುವರಿಯಲಿದ್ದು, ಸಾವಿರಾರು ಬ್ಯಾಂಕ್ ಶಾಖೆಗಳನ್ನು ಮುಚ್ಚಲಾಗುತ್ತಿದೆ. ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ವಹಿವಾಟುಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಬ್ಯಾಂಕಿಂಗ್ ವಲಯದಲ್ಲಿ ಭೌತಿಕ ಶ್ರಮದ ಅವಶ್ಯಕತೆಯನ್ನೂ ಕಡಿಮೆ ಮಾಡಲಾಗುತ್ತಿದೆ. 2025ರ ವೇಳೆಗೆ ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಆ ವೇಳೆಗೆ ರೈಲ್ವೆ ಇಲಾಖೆಯಲ್ಲೂ ಹಲವು ವಿಭಾಗಗಳನ್ನು ಕಾರ್ಪೊರೇಟೀಕರಣಕ್ಕೊಳಪಡಿಸುವ ಸಾಧ್ಯತೆಗಳಿವೆ. ರಸ್ತೆ ಮತ್ತು ರೈಲು ಸಾರಿಗೆ, ಕಡಲ ಸಾರಿಗೆ, ದೂರಸಂಪರ್ಕ, ಬ್ಯಾಂಕ್ ಮತ್ತು ವಿಮಾ ಕ್ಷೇತ್ರಗಳು ಸಂಪೂರ್ಣವಾಗಿ ಖಾಸಗೀಕರಣಗೊಂಡರೆ ಸಹಜವಾಗಿಯೇ ಉದ್ಯೋಗಾವಕಾಶಗಳು ಕ್ಷೀಣಿಸಲಿದ್ದು, ಸಂವಿಧಾನದತ್ತವಾಗಿ ಲಭ್ಯವಾಗಬೇಕಾದ ಮೀಸಲಾತಿ ಸೌಲಭ್ಯಗಳೂ ಇಲ್ಲವಾಗುತ್ತವೆ. ಇದು ತಳಸಮುದಾಯಗಳ ಪಾಲಿಗೆ ಆಘಾತಕಾರಿಯಾಗಲಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಯನ್ನು ಕಳೆದುಕೊಂಡು ನಗರಕ್ಕೆ ಬರುವ ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುವುದು ಅನೌಪಚಾರಿಕ ವಲಯದಲ್ಲಿ. ಸೇವಾ ಭದ್ರತೆ ಇಲ್ಲದೆ, ನಿವೃತ್ತಿ ಸೌಲಭ್ಯಗಳಿಲ್ಲದೆ, ಖಾಯಂ ನೌಕರಿಯ ಭರವಸೆ ಇಲ್ಲದೆ ತಮ್ಮ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಈ ಜನಸಮುದಾಯಗಳಿಗೆ ಎದುರಾಗುತ್ತದೆ. ಕಾರ್ಖಾನೆಗಳಲ್ಲಿ, ಉತ್ಪಾದನಾ ವಲಯದಲ್ಲಿ ನೌಕರಿ ಪಡೆಯುವ ಈ ಜನತೆಯ ಬದುಕು ಸಹ ಅನಿಶ್ಚಿತವಾಗಿಯೇ ಮುಂದುವರಿಯುತ್ತದೆ. ಏಕೆಂದರೆ ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಮುಷ್ಕರದ ಹಕ್ಕನ್ನೂ, ಸಂಘಟನೆಯ ಹಕ್ಕನ್ನೂ ಕಸಿದುಕೊಳ್ಳಲಿವೆ. ಉದ್ಯಮಿಗಳಿಗೆ ತಮ್ಮ ಸ್ವೇಚ್ಚಾನುಸಾರ ಕಾರ್ಮಿಕರನ್ನು ನೇಮಿಸುವ-ವಜಾ ಮಾಡುವ ಹಕ್ಕು ನೀಡಲಗುತ್ತದೆ. ಈ ಅನಿಶ್ಚಿತತೆಯ ನಡುವೆಯೇ ಕಾರ್ಮಿಕರು ಸಂಘಟಿತರಾಗಿ ಹೋರಾಡಬೇಕಿದೆ. ಅನೌಪಚಾರಿಕ ವಲಯದ ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಸಾರ್ವಜನಿಕ ಕಾಮಗಾರಿ ನೌಕರರು ಬಹುಪಾಲು ಗುತ್ತಿಗೆದಾರರ ಹಿಡಿತದಲ್ಲಿರುವುದರಿಂದ ಈ ಕಾರ್ಮಿಕರನ್ನು ಸಂಘಟಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ. ಬಹುರಾಷ್ಟ್ರೀಯ ಕಂಪೆನಿಗಳ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರನ್ನು ವಿನಾಕಾರಣ ವಜಾ ಮಾಡುವ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಈ ಕಾರ್ಮಿಕರ ನೌಕರಿಯ ಹಕ್ಕುಗಳಿಗಾಗಿ ಹೋರಾಡಬೇಕಿದೆ.

ಇದರೊಂದಿಗೆ ತಮ್ಮ ಭೂಮಿಯನ್ನೂ ಕಳೆದುಕೊಂಡು, ಸೂಕ್ತ ಪರಿಹಾರವನ್ನೂ ಪಡೆಯದೆ, ಉದ್ಯಮಿಗಳು ಭರವಸೆ ನೀಡಿದಂತೆ ನೌಕರಿಯನ್ನೂ ಗಳಿಸಲಾಗದೆ ಬೀದಿ ಪಾಲಾಗಿರುವ ಲಕ್ಷಾಂತರ ಗ್ರಾಮೀಣ ಜನರು ಇಂದು ದಾರಿಗಾಣದಂತಾಗಿದ್ದಾರೆ. ಪ್ರತಿರೋಧ, ಪ್ರತಿಭಟನೆ ಮತ್ತು ಮುಷ್ಕರಗಳತ್ತ ಕಣ್ಣೆತ್ತಿಯೂ ನೋಡದ ನಿರ್ದಾಕ್ಷೀಣ್ಯತೆ ಆಡಳಿತಾರೂಢ ಪಕ್ಷಗಳನ್ನು ಆವರಿಸಿದೆ. ಮುಷ್ಕರ ನಿರತ ಕಾರ್ಮಿಕರ, ರೈತರ ಅಹವಾಲುಗಳನ್ನು, ಅವರ ಕುಂದು ಕೊರತೆಗಳನ್ನು ಆಲಿಸಲೂ ಮುಂದಾಗದಂತಹ ನಿಷ್ಕ್ರಿಯ ಜನಪ್ರತಿನಿಧಿಗಳ ನಡುವೆ ಕಾರ್ಮಿಕರು, ಶ್ರಮಜೀವಿಗಳು ಸಿಲುಕಿದ್ದಾರೆ. ಭೂಹೀನ ಕೃಷಿಕರಿಂದ ಹಿಡಿದು ಅತಿಥಿ ಉಪನ್ಯಾಸಕರವರೆಗೆ ಲಕ್ಷಾಂತರ ಶ್ರಮಿಕರು ಇಂದು ತಮ್ಮ ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ. ಉನ್ನತ ಪದವಿ ಪಡೆದವರೂ ಸಹ ಪೌರ ಕಾರ್ಮಿಕ ಹುದ್ದೆಗೆ, ಕೆಳದರ್ಜೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವುದು ಈ ಪರಿಸ್ಥಿತಿಯ ದ್ಯೋತಕವಾಗಿದೆ. ಬಂಡವಾಳಿಗರೇ ಸೃಷ್ಟಿಸುವ ಗುತ್ತಿಗೆದಾರರ ಸಾಮ್ರಾಜ್ಯದಲ್ಲಿ ಸಿಲುಕಿ ತಮ್ಮ ಜೀವನ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆಯನ್ನು ಕೆಳಸ್ತರದ ಶ್ರಮಜೀವಿಗಳು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಘಟಿತ ಕಾರ್ಮಿಕರ ಜವಾಬ್ದಾರಿ ಏನು? ಖಾಸಗಿ ಮತ್ತು ಸಾರ್ವಜನಿಕ ಉದ್ದಿಮೆಗಳಿಂದ ಬ್ಯಾಂಕಿಂಗ್ ವಿಮಾ ವಲಯದವರೆಗೆ ಚಾಚಿಕೊಂಡಿರುವ ಸಂಘಟಿತ ಕಾರ್ಮಿಕ ವರ್ಗ ಇಂದು ತನ್ನದೇ ಆದ ಹಿತವಲಯವನ್ನು ಸೃಷ್ಟಿಸಿಕೊಂಡಿದೆ. ಏಳು ದಶಕಗಳ ಅಭಿವೃದ್ಧಿಯ ಫಲಾನುಭವಿಗಳಾಗಿ, ಮಧ್ಯಮ ವರ್ಗಗಳಾಗಿ ರೂಪುಗೊಂಡಿರುವ ಈ ವರ್ಗದ ಒಂದು ಭಾಗವಾದರೂ ಇಂದು ತಮ್ಮ ಬೇರುಗಳನ್ನು ಮರುಶೋಧಿಸಬೇಕಿದೆ. ಶಿಕ್ಷಣ, ವಿದ್ಯಾರ್ಹತೆ ಮತ್ತು ಸುಭದ್ರ ಬದುಕಿನ ಅಡಿಪಾಯ ಹೊಂದಿರುವ ಒಂದು ಬೃಹತ್ ಕಾರ್ಮಿಕ ವಲಯ ಇಂದು ಅವಕಾಶವಂಚಿತ ಸಮುದಾಯಗಳತ್ತ ನೋಡಲೂ ಹಿಂಜರಿಯುತ್ತಿರುವುದು ಈ ಕಾಲದ ದುರಂತ. ತಮ್ಮ ಕಣ್ಣೆದುರಿನಲ್ಲೇ ನೆಲೆ ಕಳೆದುಕೊಳ್ಳುತ್ತಿರುವ ಶ್ರಮಿಕ ವರ್ಗಗಳತ್ತ ಗಮನಹರಿಸದೆ, ಕೇವಲ ತಮ್ಮ ಆರ್ಥಿಕ ಹಿತಾಸಕ್ತಿಗಳಿಗಾಗಿಯೇ ಹೋರಾಡುವ ಮನೋಭಾವದಿಂದ ಸುಶಿಕ್ಷಿತ, ಸುಸಂಘಟಿತ ಕಾರ್ಮಿಕರು ಹೊರಬರಬೇಕಿದೆ. ನಾವು ಸೃಷ್ಟಿಸಿಕೊಂಡಿರುವ ಹಿತವಲಯದ ಭೋಗ ಜೀವನದ ಹಿಂದೆ ಅಸಂಖ್ಯಾತ ಶ್ರಮಿಕರ ಬೆವರು ಹರಿದಿದೆ, ಇಂದಿಗೂ ಹರಿಯುತ್ತಿದೆ ಎಂಬ ಸಾಮಾನ್ಯ ಪ್ರಜ್ಞೆ ಸಂಘಟಿತ ಕಾರ್ಮಿಕರಲ್ಲಿ ಮೂಡಬೇಕಿದೆ. ತಳವರ್ಗಗಳ ನಿತ್ಯ ಬದುಕಿನ ಜಂಜಾಟವನ್ನು ಗಮನಿಸಿಯೂ ಗಮನಿಸದಂತೆ, ಅಧಿಕಾರ ರಾಜಕಾರಣದ ಹಿಂದೆ ಹೋಗುವ ಪ್ರವೃತ್ತಿಯಿಂದ ಸಂಘಟಿತ ಕಾರ್ಮಿಕ ವಲಯ ಹೊರಬರಬೇಕಿದೆ.

ಭಾರತದಲ್ಲಿ ಜಾತಿಯೇ ಒಂದು ವರ್ಗವಾಗಿ ಪರಿಣಮಿಸುತ್ತದೆ. ನಿಕೃಷ್ಟ ಬದುಕು ಸವೆಸುತ್ತಿರುವ ಶ್ರಮಜೀವಿಗಳು ಜಾತಿ ವ್ಯವಸ್ಥೆಯ ಶೋಷಣೆಯೊಂದಿಗೇ ಬಂಡವಾಳಿಗರ ಶೋಷಣೆಯನ್ನೂ ಎದುರಿಸಬೇಕಾಗುತ್ತದೆ. ಈ ಎರಡು ಅಲಗಿನ ಖಡ್ಗ ಇಕ್ಕೆಲಗಳಲ್ಲೂ ಇದ್ದು, ಇನ್ನೂ ಮೊನಚಾಗುತ್ತಿರುವುದಕ್ಕೆ ನವ ಉದಾರವಾದದ ಆರ್ಥಿಕ ನೀತಿಗಳು ಕಾರಣವಾಗಿವೆ. ಜಾತಿ, ಮತ, ಧರ್ಮದ ಅಸ್ಮಿತೆಗಳು ಶ್ರಮಿಕ ವರ್ಗವನ್ನು ಅಡ್ಡಡ್ಡಲಾಗಿ ಸೀಳುತ್ತಿರುವ ಸಂದರ್ಭದಲ್ಲಿ, ಪ್ರಜಾಪ್ರಭುತ್ವ ಮತ್ತು ಸಮಸಮಾಜಕ್ಕಾಗಿ ಹೋರಾಡುತ್ತಿರುವ ಎಡಪಂಥೀಯ, ಪ್ರಗತಿಪರ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ನಡುವೆ ವರ್ಗಪ್ರಜ್ಞೆಯನ್ನು ಬೆಳೆಸಲು ಇನ್ನಾದರೂ ಶ್ರಮಿಸಬೇಕಿದೆ. ತಾವು ನಿರ್ಮಿಸಿಕೊಂಡ ಹಿತವಲಯದ ಚೌಕಟ್ಟಿನಿಂದಾಚೆಗೂ ಒಂದು ದುರಂತ ಪ್ರಪಂಚ ಇದೆ ಎಂಬ ಕನಿಷ್ಠ ಸಾಮಾಜಿಕ ಪ್ರಜ್ಞೆ ಪ್ರತಿಯೊಬ್ಬ ಕಾರ್ಮಿಕನಲ್ಲೂ ಬೆಳೆಸಲು ಸಾಧ್ಯವಾಗುವುದಾದರೆ, ಈ ವರ್ಗಪ್ರಜ್ಞೆಯನ್ನು ಮತ್ತು ಸಮೂಹ ಪ್ರಜ್ಞೆಯನ್ನು ಅಂತರ್ಗತಗೊಳಿಸುವಲ್ಲಿ ಕಾರ್ಮಿಕ ಸಂಘಟನೆಗಳು ಸಕ್ರಿಯ ಪಾತ್ರ ವಹಿಸಿದರೆ, ಅಂತರ್‌ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಾಗಿ ಮೇ ದಿನವನ್ನು ಆಚರಿಸುವುದು ಸಾರ್ಥಕವಾದೀತು.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News