ಸರ್ವ ಕ್ಷೇತ್ರಗಳ ಸಾಧಕ ಡಾ.ಹರಿಕೃಷ್ಣ ಪುನರೂರು ಸರ್ವರಿಗೂ ಆದರ್ಶ: ಸಚ್ಚಿದಾನಂದ ಭಾರತಿ ಶ್ರೀ
ಕಿನ್ನಿಗೋಳಿ, ಮೇ 2: ಸಾಹಿತ್ಯ, ಸಾಮಾಜಿಕ, ಧಾರ್ಮಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿರುವ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರು ಸರ್ವರಿಗೂ ಆದರ್ಶಪ್ರಾಯರು ಎಂದು ಶ್ರೀ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಅವರು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ವಠಾರದಲ್ಲಿ ರವಿವಾರ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರಿಗೆ ಅಭಿಮಾನಿ ಬಳಗದ ವತಿಯಿಂದ 'ಹುಟ್ಟೂರ ಅಭಿನಂದನೆ' ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸಾಹಿತ್ಯ ಕ್ಷೇತ್ರದ ಸಂಸ್ಥೆಗಳನ್ನು ಕವಿ, ಸಾಹಿತಿಯಾದವರೇ ಮುನ್ನಡೆಸಬೇನ್ನುವ ಜನರ ಮನಸ್ಥಿತಿಯನ್ನು ಬದಲಾಯಿಸಿದ ಅವರು, ಸಾಹಿತ್ಯಾಸಕ್ತರೂ ಸಂಸ್ಥೆಗಳನ್ನು ಉತ್ತಮ ರೀತಿಯಲ್ಲಿ ಮುನ್ನೆಡೆಸಬಲ್ಲರು ಎಂದು ತೋರಿಸಿ ಕೊಟ್ಟವರು ಡಾ. ಹರಿಕೃಷ್ಣ ಪುನರೂರು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ ಶುಭ ಹಾರೈಸಿದರು.
ಕಟೀಲು ಕ್ಷೇತ್ರದ ಅರ್ಚಕ ವೇ.ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ ಶುಭಾಶಂಸನೆಗೈದರು. ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಭಿನಂದನಾ ಭಾಷಣಗೈದರು.
ಮುಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪಟೇಲ್ ವಾಸುದೇವ ರಾವ್, ದೇವಪ್ರಸಾದ್ ಪುನರೂರು, ಶೀಪತಿ ಭಟ್ ಮೂಡುಬಿದಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುರಂದರ ಶೆಟ್ಟಿಗಾರ್ ಸ್ವಾಗತಿಸಿದರು. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಧನಂಜಯ ಶೆಟ್ಟಿಗಾರ್ ವಂದಿಸಿದರು. ಶರತ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.
ಅಭಿನಂದನಾ ಕಾರ್ಯಕ್ರಮಕ್ಕೂ ಮುನ್ನ ಡಾ.ಹರಿಕೃಷ್ಣ ಪುನರೂರು ಅವರನ್ನು ಅವರ ನಿವಾಸದಿಂದ ಅದ್ಧೂರಿ ಮೆರವಣಿಗೆಯ ಮೂಲಕ ಕಾರ್ಯಕ್ರಮದ ವೇದಿಕೆಗೆ ಕರೆತರಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರು ಶ್ರೀದೇವಿ ನೃತ್ಯ ಕೇಂದ್ರದ ಡಾ.ಆರತಿ ಶೆಟ್ಟಿ ನಿರ್ದೇಶನದ 'ಸಂಗೀತ ನೃತ್ಯ ವೈವಿಧ್ಯ' ನಡೆಯಿತು.