ಮೂನ್ ಕಮಿಟಿಯ ಅಭಿಪ್ರಾಯ ಪಡೆಯದೆ ಒಂದು ದಿನ ಮುಂಚಿತವಾಗಿ ಈದ್ ರಜೆ ಘೋಷಿಸಿದ್ದು ದುರುದ್ದೇಶಪೂರಿತ: ರಮೇಶ್ ಬಾಬು

Update: 2022-05-02 14:51 GMT

ಬೆಂಗಳುರು: ಮೂನ್ ಕಮಿಟಿ (ಚಂದ್ರ ದರ್ಶನ ಸಮಿತಿ)ಯ ಅಭಿಪ್ರಾಯ ಪಡೆಯದೆ ಒಂದು ದಿನ ಮುಂಚಿತವಾಗಿ ಈದ್ ಸಾರ್ವತ್ರಿಕ ರಜೆಯನ್ನು ಅಧಿಸೂಚನೆ ಹೊರಡಿಸಿರುವುದು ದುರುದ್ದೇಶಪೂರಿತ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ. 

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಅಮಾವಾಸ್ಯೆಯ ನಂತರ ಚಂದ್ರನ ಬಿಂಬ ನೋಡಿದ ಮೇಲೆ ಮೂನ್ ಕಮಿಟಿಯು ಯಾವ ದಿನ ರಂಜಾನ್ ಆಚರಣೆ ಮಾಡಬೇಕು ಎಂದು ಘೋಷಿಸುತ್ತದೆ. ಅದರಂತೆ ಮುಸಲ್ಮಾನ್ ಸಮುದಾಯ ಸಂಪ್ರದಾಯಗಳಿಗೆ ಅನುಗುಣವಾಗಿ ರಂಜಾನ್ ಆಚರಣೆ ಮಾಡುತ್ತಾರೆ. ಅಮಾವಾಸ್ಯೆಯ ದಿನ ಚಂದ್ರ ಕಾಣುವುದಿಲ್ಲ ಎಂಬ ಸತ್ಯ ಇಡೀ ಪ್ರಪಂಚಕ್ಕೆ ತಿಳಿದಿದೆ. ಆದರೆ ಸರಕಾರವು ಅಮಾವಾಸ್ಯೆಯ ದಿನ ಅಧಿಸೂಚನೆ ನೀಡಿ ಮೂನ್ ಕಮಿಟಿ ತೀರ್ಮಾನದಂತೆ ಮೇ 2ರಂದು ರಂಜಾನ್ ಹಬ್ಬದ ರಜೆಯನ್ನು ಘೋಷಿಸಿದೆ. ಆದರೆ ಮೂನ್ ಕಮಿಟಿ ಮೇ 1ರಂದು ಪ್ರಕಟಣೆ ನೀಡಿ ಮೇ 3ರಂದು ರಂಜಾನ್ ಹಬ್ಬವನ್ನು ಆಚರಿಸಲು ಕರೆ ನೀಡಿದೆ. ಹಾಗಾಗಿ ಮೂನ್ ಕಮಿಟಿಯ ಅಭಿಪ್ರಾಯವನ್ನು ಪಡೆಯದೆ ಒಂದು ದಿನ ಮುಂಚಿತವಾಗಿ ರಂಜಾನ್ ಹಬ್ಬದ ರಜೆಯನ್ನು ಘೋಷಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯ ಸರಕಾರವು ಮುಸಲ್ಮಾನರ ಹಬ್ಬದ ಆಚರಣೆಯಲ್ಲೂ ಹಸ್ತಕ್ಷೇಪ ಮಾಡಿ, ತಪ್ಪು ಸಂದೇಶ ನೀಡುವ ಪ್ರಯತ್ನ ನಿಜಕ್ಕೂ ಖಂಡನೀಯವಾಗಿದೆ. ಸರಕಾರದ ಇಂತಹ ನಡೆ ಇತಿಹಾಸ ಪುಟಗಳಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಅದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಥಾನಾಯಕರಾಗಿದ್ದು, ಆಡಳಿತದಲ್ಲಿ ಸಮುದಾಯಗಳನ್ನು ಅವಮಾನಗೊಳಿಸುವ ಸಂಸ್ಕೃತಿ ಎದ್ದು ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬಸವಣ್ಣನ ನಾಡಿನಲ್ಲಿ ಬಸವಣ್ಣನ ವಿಚಾರ ಕಿಂಚಿತ್ತಾದರೂ ಅಳವಡಿಸಿಕೊಂಡಿರುವ ನಾವೆಲ್ಲರೂ, ಜಾತಿ ವ್ಯವಸ್ಥೆ ಹಾಗೂ ಅಸ್ಪøಶ್ಯತೆಯ ವಿರುದ್ಧ ಹೋರಾಡಬೇಕಾಗಿದೆ. ಸಮಾಜವಾದಿ ನಾಯಕ, ಬಸವಣ್ಣನ ಅನುಯಾಯಿ ಎಸ್.ಆರ್. ಬೊಮ್ಮಾಯಿ ಅವರ ಪುತ್ರರಾದ ನೀವು ಆ ದಾರಿಯಲ್ಲೇ ಸಾಗುತ್ತೀರಿ ಎಂದು ನಂಬಿಕೆ ಇತ್ತು. ಆದರೆ, ಅದು ಹುಸಿಯಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News