ಮಂಗಳೂರಿನಲ್ಲಿ ಅಪ್ಪು ಸೆಲೆಬ್ರೇಶನ್: ಡಾ. ಶಿವರಾಜ್ ಕುಮಾರ್
ಮಂಗಳೂರು : ಹುಟ್ಟುವಾಗಲೇ ಸೂಪರ್ ಸ್ಟಾರ್ ಆಗಿದ್ದ ಪುನೀತ್ ಎಂದೆಂದಿಗೂ ಸೂಪರ್ ಸ್ಟಾರ್. ಆತ ಎಂದೆಂದಿಗೂ ನಮ್ಮ ಜತೆಗಿರಲಿದ್ದಾನೆ. ಹಾಗಿದ್ದರೂ ಆರು ತಿಂಗಳಾದರೂ ಆತ ನಮ್ಮಿಂದ ದೂರವಾದ ನೋವು ಮರೆಯಲು ಸಾಧ್ಯವಾಗಿಲ್ಲ. ಮಾನವೀಯತೆ ಎನ್ನುವ ಪದಕ್ಕೆ ಆತ ಉದಾಹರಣೆ ಎಂದು ಹ್ಯಾಟ್ರಿಕ್ ಹೀರೋ ಖ್ಯಾತಿಯ, ನಟ ಡಾ. ಶಿವರಾಜ್ ಕುಮಾರ್‌ರವರು ಮಂಗಳೂರಿನಲ್ಲಿ ಅಪ್ಪುವನ್ನು ಇಂದು ನೆನಪಿಸಿಕೊಂಡರು.
ಮಂಗಳೂರು ನಗರ ಪೊಲೀಸ್ ಘಟಕದ ಅಧಿಕಾರಿ ಸಿಬ್ಬಂದಿ ಜತೆಗಿನ ಸಂವಾದ ಕಾರ್ಯಕ್ರಮ ದಲ್ಲಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಬಳಿಕ ಅವರು ಮಾತನಾಡಿದರು.
ಹುಟ್ಟುತ್ತಲೇ ಪ್ರೇಮದ ಕಾಣಿಕೆ ಚಿತ್ರ ಮಾಡಿ ಸೂಪರ್ ಸ್ಟಾರ್ ಆಗಿಬಿಟ್ಟಿದ್ದ. ಬಳಿಕ ಕೆಲ ಸಮಯ ನಾವು ಹೀರೋ ಆಗಿದ್ದರೂ ಮತ್ತೆ ಆತನೇ ಹೀರೋ ಆಗಿ ಬಿಟ್ಟಿದ್ದ. ಆತ ಮಾಡಿದ ಮಾನವೀಯ ಕೆಲಸ ಕಾರ್ಯಗಳ ಬಗ್ಗೆ ನನಗೂ ತಿಳಿದಿರಲಿಲ್ಲ. ಹಾಗಾಗಿಯೇ ಆತನ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಹಾಗಾಗಿ ಆತನ ನೋವನ್ನು ನೆನಪಿಸುವುದಕ್ಕಿಂತಲೂ ಆತನನ್ನು ನಾವು ಸಂಭ್ರಮಿಸಬೇಕಾಗಿದೆ. ಅದಕ್ಕಾಗಿ ಅಪ್ಪು ಸಂಭ್ರಮ ಮಂಗಳೂರಿನಲ್ಲಿಯೇ ಮಾಡೋಣ ಎಂದು ಡಾ. ಶಿವರಾಜ್ ಕುಮಾರ್ ಹೇಳಿದರು.
ಮಂಗಳೂರು ನನಗೆ ಇಷ್ಟವಾದ ಊರು ಎಂದ ಡಾ. ಶಿವರಾಜ್ ಕುಮಾರ್, ಅಪ್ಪಾಜಿಯನ್ನು ಬಿಟ್ಟರೆ ನಮ್ಮ ಕುಟುಂಬದಲ್ಲಿ ನಾನು ಸಾಕಷ್ಟು ಸಿನೆಮಾ ಶೂಟಿಂಗ್ ಮಾಡಿದ್ದೇನೆ. ನನಗೂ ಪೊಲೀಸ್ ಇಲಾಖೆಗೆ ಬಹಳ ನಿಕಟ ನಂಟು ಇದೆ. ನಾನು ಪೊಲೀಸ್ ಪಾತ್ರದಲ್ಲಿ ನಟಿಸಿದ ಚಿತ್ರಗಳು ಯಶಸ್ಸು ಪಡೆದಿವೆ. ಪೊಲೀಸ್ ಅಂದರೇನೇ ಪವರ್ ಎಂದು ಪೊಲೀಸರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ತುಳು ಬೇರೆ ಅಲ್ಲ, ಕನ್ನಡ ಬೇರೆ ಅಲ್ಲ. ತುಳುವಿನಲ್ಲಿ ಟಾಕೀಸ್ ಆ್ಯಪ್ ಆರಂಭಿಸಿರುವುದು ಖುಷಿ ನೀಡಿದೆ ಎಂದವರು ಹೇಳಿದರು.
ತವರಿಗೆ ಬಾ ತಂಗಿ, ಅಣ್ಣ ತಂಗಿಯಂತಹ ಮತ್ತೊಂದು ಚಿತ್ರ ಬರಲಿದೆಯೇ ಎಂದು ಪೊಲೀಸ್ ಸಿಬ್ಬಂದಿಯ ಪ್ರಶ್ನೆಗೆ, ಇನ್ನೊಂದು ಸಬ್ಜೆಕ್ಟ್ ಇದೆ. ಅದರಲ್ಲಿ ಮೂರು ಕತೆ ಇದೆ. ಚಿತ್ರಕ್ಕೆ ತಂಗಿಗಾಗಿ ಹುಡುಕುತ್ತಿದ್ದೇನೆ ಎಂದು ನಗುತ್ತಾ ಡಾ. ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದರು.
ಇತ್ತೀಚಿನ ದಿನಗಳಲ್ಲಿ ಚಿತ್ರಗಳಲ್ಲಿ ರೌಡಿಸಂ ಪಾತ್ರ ವೈಭವೀಕರಣ ಪಡೆಯುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ಇದು ಚಿತ್ರದ ಭಾಗವಷ್ಟೆ. ರೌಡಿಸಂ ಇದ್ದರೆ ನಿಮಗೆ ಕೆಲಸ ಎಂದು ನಗೆ ಚಟಾಕಿ ಹಾರಿಸಿದರು ಡಾ. ಶಿವರಾಜ್.
ಜನುಮದ ಜೋಡಿ, ಚಿಗುರಿದ ಕನಸು ಅಂತಹ ಸಿನೆಮಾಗಳನ್ನು ಮಾಡಿ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಮನವಿ ಮಾಡಿದಾಗ, ನನಗು ವೈಯಕ್ತಿಕವಾಗಿ ಇಷ್ಟವಾದ ಚಿತ್ರ ಚಿಗುರಿದ ಕನಸು. ಮಂಗಳೂರಿನಲ್ಲಿ ಅದರ 45 ದಿನಗಳ ಶೂಟಿಂಗ್ ನಡೆದಿತ್ತು. ಧರ್ಮಸ್ಥಳದಲ್ಲಿ ಉಳಿದುಕೊಂಡಿದ್ದೆ. ನನಗೆ ಮಂಗಳೂರಿಗೆ ಬರಲು ಕಾರಣವೇ ಬೇಡ. ಇದೊಂದು ಅದ್ಭುತ ಜಾಗ ಎಂದು ಉದ್ಗರಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸರ ವತಿಯಿಂದ ಡಾ. ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ವಾಗತಿಸಿದರು. ವೇದಿಕೆಯಲ್ಲಿ ಗೀತಾ ಶಿವರಾಜ್ ಕುಮಾರ್, ಡಿಸಿಪಿ ಹರಿರಾಂ ಶಂಕರ್, ರಾಜೇಶ್ ಭಟ್, ಮೇಘರಾಜ್ ರಾಜೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಶೀಘ್ರವೇ ಬೈರಾಗಿ ಚಿತ್ರ ತೆರೆಗೆ
ಕಾರ್ಯ್ರಮದ ಬಳಿಕ ಸುದ್ದಿಗಾರರ ಜತೆ ಮಾತಾಡುತ್ತಾ, ಇಂದಿನ ಕಾರ್ಯಕ್ರಮ ಖುಷಿ ನೀಡಿದೆ. ಪೊಲೀಸರ ಸಮವಸ್ತ್ರ ನೋಡುವಾಗಲೇ ಗೌರವ ಬರುತ್ತೆ. ಮಂಗಳೂರಿನಲ್ಲಿ ಪೊಲೀಸರ ಈ ಗತ್ತು ನೋಡಿ ಖುಷಿಯಾಯಿತು.ಅಪ್ಪಾಜಿಯವರು ಪೊಲೀಸರ ಜತೆ ಮಾಡಿದಷ್ಟು ಕಾರ್ಯಕ್ರಮ ನಾವು ಮಾಡಿಲ್ಲ. ದೆಹಲಿಯಲ್ಲಿ ಪೊಲೀಸರ ಜತೆಗೂ ಅವರು ಕಾರ್ಯಕ್ರಮ ಮಾಡಿದ್ದಾರೆ. ಕನ್ನಡ ಚಿತ್ರರಂಗದ ನೇತೃತ್ವದಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಮಂಗಳೂರು ಪೊಲೀಸರು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಶಶಿಕುಮಾರ್ ಅವರ ಧ್ವನಿ ಚೆನ್ನಾಗಿದೆ. ಟಗರು ಹಾಡು ಹೈ ಬೀಟ್ ಇದೆ. ಆದರೂ ಅವರ ಧ್ವನಿ ಕೇಳಿ ಅಚ್ಚರಿಯಾಯಿತು. ತುಂಬಾ ಚೆನ್ನಾಗಿ ಹಾಡಿದ್ದಾರೆ. ಬೈರಾಗಿ ಶೀಘ್ರದಲ್ಲೇ ರಿಲೀಸ್ ಆಗಲಿದೆ. ವೇದ ಶೂಟಿಂಗ್ ನಡೆಯುತ್ತಿದೆ. ಇನ್ನೊಂದು ಯೋಗರಾಜ್ ಭಟ್ ಅವರ ನಾನು, ಪ್ರಭುದೇವ ನಟಿಸಿದ ಪ್ರಥಮ ಚಿತ್ರ ಶೂಟಿಂಗ್ ಆರಂಭವಾಗಲಿದೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಟಾಕೀಸ್ ಆ್ಯಪ್ ಚಿತ್ರರಂಗಕ್ಕೆ ಅದು ಪ್ರಯೋಜನವಾಗಲಿದೆ. ಅವಕಾಶಗಳು ಸಿಗದಿರುವವರಿಗೆ ಶೇ. 100 ಅವಕಾಶ ಸಿಗಲಿದೆ. ಶಾರ್ಟ್ ಫಿಲಂಗಳು, ವೆಬ್‌ಸೀರೀಸ್‌ಗಳು ಪ್ರಸಾರವಾಗಲಿವೆ. ತುಳುವಿನ ಜತೆಗೆ ಕನ್ನಡಕ್ಕೂ ಇದು ಪ್ರಯೋಜನವಾಗಲಿದೆ. ತುಳುವನ್ನು ಪ್ರಧಾನವಾಗಿಟ್ಟು ಕೊಂಡು ಕನ್ನಡದಲ್ಲಿಯೂ ಈ ಆ್ಯಪ್ ಮಾಡುತ್ತಿರುವುದು ಚಿತ್ರರಂಗಕ್ಕೆ ಸಂತಸದ ವಿಚಾರ ಎಂದವರು ಹೇಳಿದರು.
ಟಗರು- 2 ಚಿತ್ರದ ಸೂಚನೆ ನೀಡಿದ ಶಿವರಾಜ್ ಕುಮಾರ್
ಇನ್ಸ್‌ಪೆಕ್ಟರ್ ವಿಕ್ರಂನಿಂದ ರುಸ್ತುಂವರೆಗೆ ಪಾತ್ರಗಳನ್ನು ನಿರ್ವಹಿಸಿದ್ದೀರಿ ಮತ್ತೆ ಅಂತಹ ಪಾತ್ರಗಳನ್ನು ನಿರೀಕ್ಷಿಸಬಹುದೇ ಎಂದು ಸಂವಾದದ ವೇಳೆ ಪೊಲೀಸ್ ಅಧಿಕಾರಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ಶಿವರಾಜ್ ಕುಮಾರ್ ಟಗರು 2 ಚಿತ್ರ ಆಗಿರಬಹುದು ಎಂದು ಹೇಳಿದರು.
ಮಾತ್ರವಲ್ಲದೆ ವೇದಿಕೆಯಲ್ಲಿ ಟಗರು ಚಿತ್ರದ ಡಯಲಾಗ್ ಹೇಳಿದರಲ್ಲದೆ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಟಗರು ಚಿತ್ರದ ಹಾಡಿಗೆ ಡಾ. ಶಿವರಾಜ್ ಕುಮಾರ್ ಹೆಜ್ಜೆ ಹಾಕಿದರು.
ಅಪ್ಪುಗಾಗಿ ಹಾಡಿದ ಶಿವರಾಜ್...
ಸರಳ ಉಡುಗೆ ತೊಡುಗೆಯೊಂದಿಗೆ ಪತ್ನಿ ಗೀತಾ ಜತೆ ಆಗಮಿಸಿದ್ದ ಡಾ. ಶಿವರಾಜ್ ಕುಮಾರ್ ಎಂದಿನಂತೆ ತಮ್ಮ ಸರಳ ನಡೆನುಡಿಯ ಮೂಲಕ ಗಮನ ಸೆಳೆದರು. ಅಪ್ಪುವನ್ನು ನೆನಪಿಸುತ್ತಾ ಅಪ್ಪುಗಾಗಿ ಸಾಂಗ್ ಎಂದು ಹೇಳುತ್ತಾ, ‘‘ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ....’’ ಹಾಡಿನ ಕೆಲ ಸಾಲುಗಳನ್ನು ಹಾಡುವ ಮೂಲಕ ಸಭಿಕರನ್ನು ರಂಜಿಸಿದರು.