ಅಧಿಕಾರದಲ್ಲಿರುವವರಿಗೆ, ಶ್ರೀಮಂತರಿಗೆ ಗೌರವ ಹೆಚ್ಚು: ಎಸ್. ಸಂತೋಷ್ ಹೆಗ್ಡೆ

Update: 2022-05-02 12:49 GMT
ಎಸ್. ಸಂತೋಷ್ ಹೆಗ್ಡೆ

ಬೆಂಗಳೂರು, ಮೇ 2: ಅಧಿಕಾರದಲ್ಲಿ ಇರುವವರಿಗೆ ಮತ್ತು ಅತೀ ಶ್ರೀಮಂತರಿಗೆ ಗೌರವ ಹೆಚ್ಚಾಗಿರುತ್ತದೆ. ಆದರೆ ಸಮಾಜ ಸೇವೆ ಮಾಡಿದ ದಿ. ಡಾ. ಆರ್.ಎನ್. ಶೆಟ್ಟಿ ಅವರ ಪ್ರತಿಮೆ ಅನಾವರಣಗೊಳಿಸಿರುವುದು ಶ್ಲಾಘನೀಯ ಎಂದು ನಿವೃತ್ತ ಲೋಕಾಯುಕ್ತ ಎಸ್. ಸಂತೋಷ್ ಹೆಗ್ಡೆ ಹೇಳಿದ್ದಾರೆ. 

ಬಂಟರ ಸಂಘದ ಆವರಣದಲ್ಲಿ ದಿ. ಡಾ. ಆರ್.ಎನ್.ಶೆಟ್ಟಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಆರ್.ಎನ್. ಶೆಟ್ಟಿ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದೆ. ಹೆಚ್ಚು ಓದಿಲ್ಲದಿದ್ದರೂ ತಮ್ಮ ಅನುಭವಗಳಿಂದ ಯಶಸ್ಸನ್ನು ಸಾಧಿಸಿದ್ದರು. ಜೊತೆಗೆ ದಾನ-ಧರ್ಮಗಳ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದರು. ಅವರ ಸಾಧನೆ, ಸಮಾಜ ಸೇವೆಯನ್ನು ಗುರುತಿಸಿ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಇಂತಹ ಸಮಾಜ ಸೇವಕರನ್ನು ಗುರುತಿಸುವ ಕಾರ್ಯ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.  

ಇದೇ ವೇಳೆ, ದಿ. ಡಾ. ಆರ್.ಎನ್. ಎಸ್. ಶೆಟ್ಟಿ ಸ್ಮಾರಕ ಔದ್ಯಮಿಕ ಸಾಧಕ ಪ್ರಶಸ್ತಿಯನ್ನು ಮುಂಬೈನ ಹೇರಂಬ ಇಂಡಸ್ಟ್ರೀಸ್‍ನ ಚೇರ್‍ಮೆನ್ ಸದಾಶಿವ ಕೆ.ಶೆಟ್ಟಿ ಮತ್ತು ದಿ. ಸುಶೀಲಾ ಪಿ.ಶೆಟ್ಟಿ ಸ್ಮಾರಕ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಕರ್ನಾಟಕ ಮಹಿಳಾ ದಕ್ಷತ ಸಮಿತಿಯ ಅಧ್ಯಕ್ಷೆ ಶರಣ್ಯ ಎಸ್. ಹೆಗ್ಗೆ ಅವರಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಜಸ್ಟೀಸ್ ಎಸ್. ವಿಶ್ವಜಿತ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಗೌರವ ಕಾರ್ಯದರ್ಶಿ ಮಧುಕರ ಎಮ್. ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News