×
Ad

ದ.ಕ. ಜಿಲ್ಲೆಯಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

Update: 2022-05-03 09:10 IST

ಮಂಗಳೂರು: ಪವಿತ್ರ ರಮಝಾನ್‌ನ 30 ವೃತಗಳನ್ನು ಅನುಷ್ಠಾನಗೊಳಿಸಿದ ದ.ಕ.ಜಿಲ್ಲೆಯಲ್ಲಿ ಇಂದು (ಮಂಗಳವಾರ) ಬೆಳಗ್ಗಿನಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಲಾಗುತ್ತಿದೆ.

ಕಳೆದ ಎರಡು ವರ್ಷ ಕೋವಿಡ್-19 ಸೋಂಕು ತಡೆಗಟ್ಟುವ ಸಲುವಾಗಿ ಸರಕಾರ ರೂಪಿಸಿದ್ದ ನಿಯಮಾವಳಿಯನ್ನು ಪಾಲಿಸುವ ನಿಟ್ಟಿನಲ್ಲಿ ಈದುಲ್ ಫಿತ್ರ್‌ನ್ನು ಅತ್ಯಂತ ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ಸರಕಾರ ಯಾವುದೇ ನಿಯಮಾವಳಿ ರೂಪಿಸದ ಕಾರಣ ದ.ಕ. ಜಿಲ್ಲೆಯಲ್ಲಿ ಈದುಲ್ ಫಿತ್ರ್ ಸಂಭ್ರಮದ ವಾತಾವರಣ ಕಂಡು ಬಂದಿದೆ.

ಜಿಲ್ಲೆಯ ಎಲ್ಲಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡಲಾಗುತ್ತದೆ.

ನಗರದ ಬಾವುಟಗುಡ್ಡೆ ಈದ್ಗಾ ಮಸ್ಜಿದ್‌ನಲ್ಲಿ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನೆರವೇರಿತು.

ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಖತೀಬ್ ಅನ್ವರ್ ಅಲಿ ದಾರಿಮಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.

ಉಳಿದಂತೆ  ನಗರದ ಪಂಪ್‌ವೆಲ್‌ನ ಮಸ್ಜಿದುತ್ತಖ್ವಾ, ಹಂಪನಕಟ್ಟೆಯ ಮಸ್ಜಿದುನ್ನೂರ್, ಸ್ಟೇಟ್‌ಬ್ಯಾಂಕ್‌ನ ಇಬ್ರಾಹೀಂ ಖಲೀಲ್ ಮಸ್ಜಿದ್, ಕಂಕನಾಡಿ ರಹ್ಮಾನಿಯಾ ಜುಮಾ ಮಸ್ಜಿದ್, ನಗರದ ವಾಸ್‌ಲೇನ್ ಇಹ್ಸಾನ್ ಮಸ್ಜಿದ್, ಪಾಂಡೇಶ್ವರದ ಪೊಲೀಸ್‌‌ ಲೇನ್ ಫೌಝಿಯಾ ಜುಮಾ ಮಸ್ಜಿದ್, ಬಂದರ್ ಕಚ್ಚೀ ಮೇಮನ್ ಜುಮಾ ಮಸ್ಜಿದ್, ಬಂದರ್ ಕಂದುಕ ಬದ್ರಿಯಾ ಜುಮಾ ಮಸ್ಜಿದ್, ಬೋಳಾರ ಮುಹಿಯುದ್ದೀನ್ ಜುಮಾ ಮಸ್ಜಿದ್, ಕುದ್ರೋಳಿ ಜಾಮೀಯಾ ಜುಮಾ ಮಸ್ಜಿದ್, ಬಿಕರ್ನಕಟ್ಟೆ ಅಹಸನುಲ್ ಮಸಾಜೀದ್, ಕುದ್ರೋಳಿ ಸಲಫಿ ಮಸೀದಿಯ ಈದ್ಗಾ ಸಹಿತ ಜಿಲ್ಲೆಯ ಎಲ್ಲಾ ಜುಮಾ ಮಸ್ಜಿದ್ ಮತ್ತು ಈದ್ಗಾಗಳಲ್ಲಿ ನಮಾಝ್ ಹಾಗೂ ಖುತ್ಬಾ ನೆರವೇರಿಸಲಾಯಿತು.

ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಉಪವಾಸಿಗರು ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು. ಈದ್ ನಮಾಝ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರಿಗಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.

ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News