ಕಾರ್ಕಳ: ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಆರೋಪ; ಕೃಷ್ಣಮೂರ್ತಿ, ಸಾವಿತ್ರಿ ಪೊಲೀಸ್ ಕಸ್ಟಡಿಗೆ
ಕಾರ್ಕಳ : ನಕ್ಸಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ ಹಾಗು ಸಾವಿತ್ರಿ ಅವರನ್ನು ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಗಾಗಿ ಕಾರ್ಕಳ ಕೋರ್ಟ್‌ಗೆ ಬುಧವಾರ ಹಾಜರುಪಡಿಸಲಾಯಿತು.
ಕಾರ್ಕಳ, ಹೆಬ್ರಿ, ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 11 ಪ್ರಕರಣಗಳಿಗೆ ಸಂಬಂಧಿಸಿದಂತೆ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ವಿಚಾರಣೆಗೊಳಪಡಿಸುವ ಸಲುವಾಗಿ ಇಂದು ಬೆಳಗ್ಗೆ ಭದ್ರತೆಯಲ್ಲಿ ಕರೆತರಲಾಗಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳುವಂತೆ ತಿಳಿಸಿದರು.
ಶೃಂಗೇರಿ ಮೂಲದ ಬಿ.ಜಿ. ಕೃಷ್ಣಮೂರ್ತಿ (ಎಲ್‌ಎಲ್‌ಬಿ ಪದವೀಧರ) (48), ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸದ ಸಾವಿತ್ರಿ (ಹೆಬ್ರಿ ನಾಡ್ಪಾಲು ಗ್ರಾಮದ ನಕ್ಸಲ್ ಆರೋಪಿ ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ ಪತ್ನಿ) (33) ಅವರನ್ನು ನವೆಂಬರ್ 2021ರಲ್ಲಿ ಕೇರಳ ಎಸ್‌ಟಿಎಫ್ ಪೊಲೀಸರು ಬಂಧಿಸಿದ್ದರು.
2008ನೇ ಮೇ 15ರಂದು ಸೀತಾನದಿಯ ನಾಡ್ಪಾಲಿನಲ್ಲಿ ಶಿಕ್ಷಕ ಭೋಜಶೆಟ್ಟಿ ಮತ್ತು ಅವನ ಚಿಕ್ಕಮ್ಮನ ಮಗ ಸುರೇಶ್ ಶೆಟ್ಟಿ ನಕ್ಸಲರಿಂದ ಹತ್ಯೆಗೊಳಗಾಗಿದ್ದರು. 2008ರ ಡಿಸೆಂಬರ್ 7 ರಂದು ಕುಂದಾಪುರ ಹಳ್ಳಿಹೊಳೆಯ ಕೃಷಿಕ ಕೇಶವ ನಕ್ಸಲಿಗೆ ಬಲಿ, 2011ರ ಡಿಸೆಂಬರ್ 19ರಂದು ಕಬ್ಬಿನಾಲೆ ತಿಂಗಳಮಕ್ಕಿ ಬಳಿ ಸದಾಶಿವ ಶೆಟ್ಟಿ ಹತ್ಯೆ, ಮುಟ್ಲುಪಾಡಿಯ ಕುಟ್ಟಿ ಶೆಟ್ಟಿಯವರಿಗೆ ಬೆದರಿಕೆ, ಹೆಬ್ರಿಯ ಮತ್ತಾವಿನ ಬಳಿ ಪೊಲೀಸ್ ಜೀಪ್ ಸ್ಫೋಟ ಮುಂತಾದ ಹಲವಾರು ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಯಲಿದೆ.
ಕಾರ್ಕಳ ತಾಲೂಕಿನ ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಸಂಬಂಧಿಸಿ ಈರ್ವರನ್ನು ಕರೆದು ತರಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಮಗಳೂರು ಕೋರ್ಟ್ ನಿಂದ ಕರೆ ತರಲು ಮೇ 3ರಂದು ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಪೊಲೀಸರು, ಡಿಎಆರ್, ಎಎನ್‌ಎಫ್ ನ ಒಟ್ಟು 25ಕ್ಕೂ ಅಧಿಕ ಸಿಬ್ಬಂದಿ ಚಿಕ್ಕಮಗಳೂರು ತೆರಳಿದ್ದರು.