ಕಿನ್ಯಾ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ
ಮಂಗಳೂರು : ದಲಿತರ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಅವರ ಬದುಕನ್ನು ನಿರ್ಲಕ್ಷಿಸಿದ ಕಿನ್ಯಾ ಗ್ರಾಮ ಪಂಚಾಯತ್‌ನ ದಲಿತ ವಿರೋಧಿ ಧೋರಣೆಯ ವಿರುದ್ಧ ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಗುರುವಾರ ಕಿನ್ಯಾ ಗ್ರಾಪಂ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ.ಕೃಷ್ಣಪ್ಪ ಕೊಂಚಾಡಿ ವಾಸಿಸಲು ಮನೆ, ಶೌಚಾಲಯ, ಸಮರ್ಪಕ ಕುಡಿಯುವ ನೀರು, ದಾರಿದೀಪ, ಸಂಪರ್ಕ ರಸ್ತೆ,ಚರಂಡಿ ವ್ಯವಸ್ಥೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ನೀಡದೆ ಸತಾಯಿಸಿರುವ ಕಿನ್ಯಾ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಕ್ಷಮ್ಯ ಅಪರಾಧವೆಸಗಿದ್ದಾರೆ. ಸರಕಾರದ ಡಿಸಿ ಮನ್ನಾ ಜಾಗ ಮಂಜೂರು ಆಗಿದ್ದರೂ ಅದಕ್ಕೆ ಸಂಬಂಧಿಸಿದ ಸಮರ್ಪಕ ಭೂದಾಖಲೆಗಳು ಇನ್ನೂ ದಲಿತರ ಕೈ ಸೇರಿಲ್ಲ. ಈ ಬಗ್ಗೆ ಹಲವಾರು ಬಾರಿ ಮನವಿ ಅರ್ಪಿಸಿದರೂ ಯಾವುದೇ ಸ್ಪಂದನವಿಲ್ಲ. ಆದ್ದರಿಂದ ದಲಿತರ ಭೂಮಿ ದಾಖಲೆಗಳನ್ನು ಸರಿಪಡಿಸಲು ಕಂದಾಯ ಅದಾಲತ್ ನಡೆಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದಲಿತ ಹಕ್ಕುಗಳ ಸಮಿತಿಯ ಗೌರವ ಸಲಹೆಗಾರ ಯೋಗೀಶ್ ಜಪ್ಪಿನಮೊಗರು, ನ್ಯಾಯವಾದಿ ಮನೋಜ್ ವಾಮಂಜೂರು ಮಾತನಾಡಿದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಮಂಗಳೂರು ನಗರ ಅಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಡಿಎಚ್‌ಎಸ್ ಕಿನ್ಯಾ ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ರೋಹಿದಾಸ್, ಕೊರಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.