ಶೇ. 40 ಕಮಿಷನ್ ಆರೆಸ್ಸೆಸ್‍ಗೆ ಹೋಗುತ್ತಿದೆ: ಬಿ.ಕೆ ಹರಿಪ್ರಸಾದ್ ಆರೋಪ
ಬೆಂಗಳೂರು ಮೇ 4: ಪಿಎಸ್ಸೈ ನೇಮಕಾತಿ ಪ್ರಕರಣ ಸಂಬಂಧ ಸಚಿವ ಅಶ್ವಥ್ ನಾರಾಯಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಬುಧವಾರ ನಗರದ ಮಲ್ಲೇಶ್ವರಂ ಮೈದಾನದಲ್ಲಿ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ, ಸಚಿವ ಅಶ್ವಥ್ ನಾರಾಯಣ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಪೊಲೀಸರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದುರು.
ಇದಕ್ಕೂ ಮೊದಲು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಬಿಜೆಪಿ ಸರಕಾರ ಶೇ.40ರಷ್ಟು ಕಮಿಷನ್ ಸರಕಾರವಾಗಿದೆ. ಪ್ರತಿಯೊಂದು ಯೋಜನೆಯಲ್ಲಿ ಕಮಿಷನ್ ಹೋಗುತ್ತಿದೆ. ಇದಕ್ಕೆ ಆರೆಸ್ಸೆಸ್ ಕುಮ್ಮಕ್ಕು ಇದೆ. ಇಂದು ಈ ಸಂಘಟನೆಯು ಶ್ರೀಮಂತ ಎನ್‍ಜಿಓ ಆಗಿದ್ದು, ಅಷ್ಟೊಂದು ಹಣ ಹೇಗೆ ಬಂತು ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬ ಸಚಿವರ ಬಳಿ ಆರೆಸ್ಸೆಸ್ ಹಿನ್ನೆಲೆಯುಳ್ಳ ಆಪ್ತ ಕಾರ್ಯದರ್ಶಿಗಳು, ಸಹಾಯಕರು ಇದ್ದಾರೆ. ಇವರ ಮೂಲಕ ಹಾವಿನಪುರದಲ್ಲಿ ಕುಳಿತು ಹಣವನ್ನು ಶೇಖರಣೆ ಮಾಡುತ್ತಾರೆ ಎಂದು ಟೀಕಿಸಿದರು,
ರಾಮಲಿಂಗಾರೆಡ್ಡಿ ಮಾತನಾಡಿ, ನೇಮಕಾತಿ ಪಟ್ಟಿ ರದ್ದು ಮಾಡಿರುವ ಗೃಹಮಂತ್ರಿಗಳು ಈ ಅಕ್ರಮಕ್ಕೆ ಕಾರಣವಾದ ದೊಡ್ಡ ದೊಡ್ಡ ಕುಳಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಏಕೆ? ಅಲ್ಲದೆ, ಅಕ್ರಮದ ಪ್ರಮುಖ ಆರೋಪಿ ದಿವ್ಯ ಹಾಗರಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸೇರಿದವರು. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಎನ್.ನಾರಾಯಣಸ್ವಾಮಿ, ಎಸ್.ಶಿವರಾಜ್, ಉದಯ್ ಶಂಕರ್ ಸೇರಿದಂತೆ ಪ್ರಮುಖರಿದ್ದರು.