×
Ad

ಪಿಎಸ್ಸೈ ನೇಮಕಾತಿ ಹಗರಣ: ಮಾಜಿ ಸಿಎಂ ಪುತ್ರ ಸೇರಿದಂತೆ ಹಲವು ಪ್ರಭಾವಿಗಳು ಭಾಗಿಯಾಗಿದ್ದಾರೆಂದು ಆರೋಪಿಸಿದ ವಕೀಲರು

Update: 2022-05-04 21:00 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 4: ಪಿಎಸ್ಸೈ ನೇಮಕಾತಿ ಪ್ರಕರಣ ಸಂಬಂಧ ಪ್ರಭಾವಿಗಳ ಕೈವಾಡವೂ ಸಾಬೀತು ಆಗುತ್ತಿದ್ದು, ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕೆಂದು ಸಿಐಡಿಗೆ ವಕೀಲರ ನಿಯೋಗ ಮನವಿ ಸಲ್ಲಿಸಿತು.

ಬುಧವಾರ ಇಲ್ಲಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿಗೆ ಆಗಮಿಸಿದ ಹಿರಿಯ ನ್ಯಾಯವಾದಿಗಳಾದ ಎ.ಪಿ.ರಂಗನಾಥ್, ಬಾಲನ್, ಜಗದೀಶ್ ಕೆ.ಎನ್.ಮಹಾದೇವ್ ಸೇರಿದಂತೆ ಹಲವರು ಸಿಐಡಿಗೆ ಮನವಿ ಸಲ್ಲಿಸಿದರು.

ಬಳಿಕ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಪಿ.ರಂಗನಾಥ್, ಪಿಎಸ್ಸೈ ನೇಮಕಾತಿ ಪರೀಕ್ಷಾ ಹಗರಣದಲ್ಲಿ ಸಚಿವರ ಹಾಗೂ ಐಪಿಎಸ್ ಅಧಿಕಾರಿಗಳ ಹೆಸರು ಕೇಳಿ ಬರುತ್ತಿದ್ದು, ಈ ಜಾಲದಲ್ಲಿ ದೊಡ್ಡವರ ಕೈವಾಡವಿರುವ ಅನುಮಾನ ದಟ್ಟವಾಗಿದೆ. ಹಾಗಾಗಿ, ಕೂಡಲೇ ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಪಿಎಸ್ಸೈ, ಸಹಾಯಕ ಪ್ರಾಧ್ಯಾಪಕ ಪರೀಕ್ಷಾ ಅಕ್ರಮ ಪ್ರಕರಣಗಳ ಹಿಂದೆ ಬಂಧಿಸಿರುವ ಆರೋಪಿಗಳು ಪ್ರಮುಖ ರೂವಾರಿಗಳಲ್ಲ, ಇವರು ಕೇವಲ ಮಧ್ಯವರ್ತಿಗಳು ಮಾತ್ರ. ಇವರ ಹಿಂದೆ ಹಾಲಿ ಸಚಿವರು, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಭಾಗಿಯಾಗಿದ್ದಾರೆ. ಅಲ್ಲದೇ, ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರ ಸಹ ಈ ದಂಧೆಯಲ್ಲಿ ಭಾಗಿಯಾಗಿರುವ ಮಾಹಿತಿಯಿದೆ ಎಂದು ದೂರಿದರು.

ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಅಕ್ರಮಕ್ಕೆ ಸಹಕಾರ ನೀಡಲಾಗಿದೆ. ಒಎಂಆರ್ ಶೀಟ್ ಬದಲಾಯಿಸಿ ಹಣ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಹೀಗಾಗಿ ಪ್ರಕರಣದ ರೂವಾರಿ ಎನ್ನಿಸಿಕೊಂಡಿರುವ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಅವರು ಆಗ್ರಹಿಸಿದರು.

ವಕೀಲರು-ಪೊಲೀಸರ ನಡುವೆ ವಾಗ್ವಾದ

ಸಿಐಡಿ ಕಚೇರಿ ಪ್ರವೇಶ ವಿಚಾರದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ತಿಳಿಗೊಂಡ ಬಳಿಕ ಸಿಐಡಿ ಅಧಿಕಾರಿಯೊಬ್ಬರು ಬಂದು ಪ್ರವೇಶದ್ವಾರದಲ್ಲೇ ದೂರು ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News