ಕೆಎಸ್‍ಆರ್ ಟಿಸಿ ನಿರ್ವಾಹಕ ಮಂಜುನಾಥ್ ವಿಶ್ವಾಸಾರ್ಹ ಸೇವೆಗೆ ಶ್ಲಾಘನೆ

Update: 2022-05-04 16:47 GMT

ಬೆಂಗಳೂರು, ಮೇ 4: ಅನುಮಾನಾಸ್ಪದ ಪ್ರಯಾಣಿಕ ವ್ಯಕ್ತಿಯ ಬ್ಯಾಗ್‍ನಲ್ಲಿರುವ ವಸ್ತುಗಳ ತಪಾಸಣೆ ಕೈಗೊಂಡು, 7 ಲ್ಯಾಪ್‍ಟಾಪ್ ಮತ್ತು 7 ಮೊಬೈಲ್‍ಗಳನ್ನು ಬಿಟ್ಟು ಪರಾರಿ ಆದ  ವ್ಯಕ್ತಿಯ ವಸ್ತುಗಳನ್ನು ಸಂಸ್ಥೆಯ ಗಮನಕ್ಕೆ ತಂದು, ಪೊಲೀಸ್ ಠಾಣೆಗೆ ಒಪ್ಪಿಸಿದ ಕೆಎಸ್‍ಆರ್ ಟಿಸಿ ನಿರ್ವಾಹಕ ಮಂಜುನಾಥ್‍ರ ವಿಶ್ವಾಸಾರ್ಹ ಸೇವೆಗೆ ಶ್ಲಾಘನೆ ವ್ಯಕ್ತವಾಗಿದೆ. 

ಮೇ 3ರಂದು ಬೆಂಗಳೂರು-ವೇಲೂರು ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿರ್ವಾಹಕ ಮಂಜುನಾಥ್, ಅನುಮಾನಾಸ್ಪದವಾಗಿ ಕಂಡುಬಂದ ಪ್ರಯಾಣಿಕರ ಲಗೇಜ್ ಬ್ಯಾಗನ್ನು ಪರಿಶೀಲಿಸಲು ಮುಂದಾದಾಗ, ಆತ ಲಗೇಜ್ ಬಿಟ್ಟು ಪರಾರಿಯಾಗಿದ್ದರು. 

ನಂತರ ಬ್ಯಾಗ್ ಪರಿಶೀಲಿಸಿ 7 ವಿವಿಧ ಕಂಪನಿಯ ಲ್ಯಾಪ್‍ಟಾಪ್ ಮತ್ತು 7 ಮೊಬೈಲ್‍ಗಳು ಇರುವುದು ಕಂಡುಬಂದಿದ್ದು, ನಿರ್ವಾಹಕ ಮಂಜುನಾಥ ಬೆಂಗಳೂರು ಕೇಂದ್ರೀಯ ವಿಭಾಗಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿರುತ್ತಾರೆ. ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಬಸವನಗುಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಸದರಿ ವಸ್ತುಗಳನ್ನು ಮುಂದಿನ ಸೂಕ್ತ ಕಾನೂನು ಕ್ರಮಕ್ಕಾಗಿ ಹಸ್ತಾಂತರ ಮಾಡಿಸಿರುತ್ತಾರೆ. 

ನಿರ್ವಾಹಕ ಮಂಜುನಾಥ್‍ರ ಕರ್ತವ್ಯನಿಷ್ಠೆ ಮತ್ತು ದಕ್ಷತೆಯನ್ನು ಕೆಎಸ್‍ಆರ್‍ಟಿಸಿ  ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್ ತುಂಬು ಹೃದಯದಿಂದ ಶ್ಲಾಘಿಸಿದರು. ಅಭಿನಂದನಾ ಪತ್ರ ನೀಡುವುದರ ಜೊತೆಗೆ ಇವರ ಸೇವೆಯು ಇತರರಿಗೆ ಮಾದರಿಯಾಗಲಿ ಮತ್ತು ಇಂತಹ ಪ್ರಾಮಾಣಿಕ ಸಿಬ್ಬಂದಿಗಳಿಂದಲೇ ಸಂಸ್ಥೆಯು ಸಾರ್ವಜನಿಕ ಮಟ್ಟದಲ್ಲಿ ವಿಶ್ವಾಸಾರ್ಹ ಸೇವೆಗೆ ಪಾತ್ರವಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News