×
Ad

ನಕಲಿ ಸಹಿ ಆರೋಪ: ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕನ ವಿರುದ್ಧ ಮೊಕದ್ದಮೆ

Update: 2022-05-04 23:07 IST

ಬೆಂಗಳೂರು, ಮೇ 4: ಯೋಜನೆಯೊಂದರ ಬರೋಬ್ಬರಿ 1.83 ಕೋಟಿ ರೂ. ಪಡೆಯಲು ಸಂಚು ರೂಪಿಸಿ ನಕಲಿ ಸಹಿ ಮಾಡಿರುವ ಆರೋಪದ ಮೇಲೆ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ರವಿಕುಮಾರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 506, 504, 509, 380, 465, 468, 471 ಅಡಿ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಿಗಮದ ನಿರ್ದೇಶಕರಾದ ಲೀಲಾವತಿ, ಜಿ.ಎಂ.ನಾಗರಾಜಪ್ಪ ಅವರ ಸಹಿಯನ್ನು ರವಿಕುಮಾರ್ ನಕಲು ಸಹಿ ಮಾಡಿ, ಸುಮಾರು 1.83 ಕೋಟಿ ರೂ. ಲಪಟಾಯಿಸಲು ಸಂಚು ಮಾಡಿದ್ದರು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ನಿಗಮಕ್ಕೆ ಸೇರಿದ್ದ ಐಸಿಐಸಿಐ ಬ್ಯಾಂಕ್‍ಗೆ ಸೇರಿದ ಚೆಕ್‍ಗಳು ಕಳೆದ ಮಾರ್ಚ್‍ನಲ್ಲಿ ಕಳುವಾಗಿತ್ತು. ಈ ಬಗ್ಗೆ ಭೋವಿ ಅಭಿವೃದ್ಧಿ ನಿಗಮ ಐಸಿಐಸಿಐ ಬ್ಯಾಂಕ್‍ಗೆ ದೂರು ನೀಡಿತ್ತು. ಕಳುವಾಗಿದ್ದ ಚೆಕ್ ಬಳಸಿ ನಿರ್ದೇಶಕ ರವಿಕುಮಾರ್, ರಾಯಚೂರು ಜಿಲ್ಲೆಗೆ 52 ಲಕ್ಷ ಜಮಾ ಮಾಡಿದ್ದಾರೆ. 52 ಲಕ್ಷ ಅಕ್ರಮವಾಗಿ ಜಮಾ ಮಾಡಿರುವುದಲ್ಲದೇ, 60 ಅಕ್ರಮ ಫಲಾಪೇಕ್ಷಿಗಳ ಹೆಸರಲ್ಲಿ ಒಂದು ಕೋಟಿ 83 ಲಕ್ಷ ಹಣ ಮಂಜೂರಾತಿಗೆ ಸಹಿ ನಕಲಿ ಮಾಡಿದ್ದಾರೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಸದ್ಯ ಎಫ್‍ಐಆರ್ ದಾಖಲಾಗುತ್ತಿದ್ದಂತೆ ರವಿಕುಮಾರ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಉದ್ಯಮಶೀಲತಾ ಯೋಜನೆಯಡಿ ಸಾಲಸೌಲಭ್ಯ ಕೋರಿ ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಬಳ್ಳಾರಿ, ವಿಜಯಪುರ, ಚಿಕ್ಕಬಳ್ಳಾಪುರ, ಕಲಬುರ್ಗಿ ಭಾಗದಿಂದ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದರು. ಆದರೆ, ನಕಲಿ ಜಾತಿ ಪತ್ರ, ಅಂಕಪಟ್ಟಿ ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತವಾಗಿದ್ದವು. 

ಇತ್ತೀಚಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಕ್ರಮ ಬೆಳಕಿಗೆ ಬಂದಿದೆ. ಅಕ್ರಮದ ಬಗ್ಗೆ ಪ್ರಶ್ನಿಸಲು ಮುಂದಾದ ಲೀಲಾವತಿರಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ಆರೋಪವೂ ರವಿಕುಮಾರ್ ಮೇಲೆ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News