ಹನಿಗವನಗಳಿಂದ ಜಗತ್‍ಪ್ರಸಿದ್ಧಿಯಾದ ಜರಗನಹಳ್ಳಿ: ಡಾ. ಮನು ಬಳಿಗಾರ್
ಬೆಂಗಳೂರು, ಮೇ 5: ತಮ್ಮ ಹನಿಗವನಗಳ ಮೂಲಕ ಜಗತ್ಪ್ರಸಿದ್ಧಿ ಹೊಂದಿದ್ದ ಜರಗನಹಳ್ಳಿ ಶಿವಶಂಕರ್ ಅವರು, ಹನಿಗವನಗಳಲ್ಲಿ ಜನರ ಬದುಕು, ಪರಿಸರ ಹಾಗೂ ಸೇವೆಯನ್ನು ಸೆರೆ ಹಿಡಿಯುತ್ತಿದ್ದರು ಎಂದು ಡಾ. ಮನು ಬಳಿಗಾರ್ ಅಭಿಪ್ರಾಯಪಟ್ಟರು.
ಗುರುವಾರ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಕರ್ನಾಟಕ ವಿಕಾಸರಂಗದ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜರಗನಹಳ್ಳಿ ದೊಡ್ಡ ವಿಚಾರಗಳನ್ನು ತಮ್ಮ ಹನಿಗವನಗಳಲ್ಲಿ ಕಟ್ಟಿಡುತ್ತಿದ್ದರು. ಸಂದೇಶಗಳನ್ನು ಸರಳವಾಗಿ ರೂಪಿಸುತ್ತಿದ್ದರು. ಹಾಗೆಯೇ ಏನನ್ನೂ ಬಯಸದೆ ಬೇರೆಯವರ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ಹೇಳಿದರು.
ಸಾಹಿತಿ ರಾ.ನಂ. ಚಂದ್ರಶೇಖರ್ ಮಾತನಾಡಿ, ಜರಗನಹಳ್ಳಿ ಕವಿಗಳಲ್ಲೇ ವಿಶಿಷ್ಟ ಕವಿಯಾಗಿದ್ದಾರೆ. ಅವರು ಸಾಧನೆಯನ್ನು ಪರಿಗಣಿಸಿ, ಸರಕಾರವು ಜರಗನಹಳ್ಳಿ ವೃತ್ತಕ್ಕೆ ಜರಗನಹಳ್ಳಿ ಶಿವಶಂಕರ್ ವೃತ್ತ ಎಂದು ಹೆಸರನ್ನಿಡಬೇಕು. ಜರಗನಹಳ್ಳಿ ಉದ್ಯಾನದಲ್ಲಿ ಅವರು ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಜರಗನಹಳ್ಳಿ ಶಿವಶಂಕರ್ ಹೆಸರಿನಲ್ಲಿ ನೀಡುವ ಹನಿಗವನ ಪ್ರಶಸ್ತಿಯನ್ನು ಕವಿ ಮಕರಂದ ಮನೋಜ್ ಅವರಿಗೆ ನೀಡಲಾಯಿತು.