​ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ವತಿಯಿಂದ ‘ಆಝಾದಿ ಕಾ ಅಮೃತ್ ಮಹೋತ್ಸವ್’ ಆಚರಣೆ

Update: 2022-05-06 11:50 GMT

ಕೊಣಾಜೆ: ಈಶಾನ್ಯ ರಾಜ್ಯಗಳ ಶ್ರೇಯಸ್ಸಿಗೆ ಆದ್ಯತೆ ನೀಡಿದಲ್ಲಿ ಅಲ್ಲಿನ ರಾಜ್ಯಗಳ ನಾಗರಿಕರು ಅಭಿವೃದ್ಧಿ ಪಥಕ್ಕೆ ಸೇರಲು ಸಾಧ್ಯವಾಗುವುದು ಎಂದು ನಾಗಾಲ್ಯಾಂಡ್‌ನ ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ ಸಲಹೆ ನೀಡಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಘಟಕ ಹಾಗೂ ನಮಸ್ತೆ ಕೇಂದ್ರವು ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ‘ಆಝಾದಿ ಕಾ ಅಮೃತ್ ಮಹೋತ್ಸವ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಈಶಾನ್ಯ ರಾಜ್ಯಗಳು ಭಾರತದಲ್ಲಿ ಅತಿ ಕಡಿಮೆ ಅಭಿವೃದ್ಧಿ ಕಂಡಿವೆ. ಈ ರಾಜ್ಯಗಳನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳದೇ ಇದ್ದದ್ದೇ ಇದಕ್ಕೆ ಮುಖ್ಯವಾದ ಕಾರಣ. ಇಲ್ಲಿನ ನಾಗರಿಕರನ್ನು ಸಮಾನವಾಗಿ ಪರಿಗಣಿಸದೇ ಅವರನ್ನು ದೂರ ಇಡಲಾಗಿತ್ತು. ನಿರಂತರ ಪ್ರಯತ್ನ ಹಾಗೂ ಕಾಳಜಿಯ ಫಲವಾಗಿ ಈಗ ಅಭಿವೃದ್ಧಿ ಕಾಣಿಸಿಕೊಳ್ಳಲು ಶುರುವಾಗಿದೆ. ನಾನು ನಾಗಾಲ್ಯಾಂಡ್‌ ರಾಜ್ಯಪಾಲನಾಗಿದ್ದಾಗ ಈಶಾನ್ಯ ರಾಜ್ಯಗಳ ಶ್ರೇಯಸ್ಸಿಗಾಗಿ ಶ್ರಮಿಸಿದೆ. ಪ್ರತಿಷ್ಠಿತ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವನ್ನು ಜೊತೆ ಸೇರಿಸಿಕೊಂಡು ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಮೀಜೋರಾಂ, ಮಣಿಪುರ, ಅರುಣಾಚಲ ಪ್ರದೇಶ, ಸಿಕ್ಕಿಂ ಹಾಗೂ ತ್ರಿಪುರ ರಾಜ್ಯಗಳ ಶ್ರೇಯಸ್ಸಿಗಾಗಿ ‘ನಮಸ್ತೆ’ ಕೇಂದ್ರವನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲಾಯಿತು. ಇದರ ಫಲವಾಗಿ ಸಾಕಷ್ಟು ಶೈಕ್ಷಣಿಕ ಅಭಿವೃದ್ಧಿಯನ್ನು ಸ್ಥಾಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಈಶಾನ್ಯ ರಾಜ್ಯಗಳ ಶೈಕ್ಷಣಿಕ ಪ್ರಗತಿಗಾಗಿ ಶುರುಮಾಡಿದ ‘ನಮಸ್ತೆ’ ಕೇಂದ್ರದಲ್ಲಿ ಈವರೆಗೆ ನೂರಾರು ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಉಚಿತವಾಗಿ ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ಹಾಗೂ ಇತರ ಕೋರ್ಸ್‌ಗಳನ್ನು ನೀಡುತ್ತಿದೆ. ಕಳೆದ ಶೈಕ್ಷಣಿಕ ವರ್ಷವೊಂದರದಲ್ಲೇ 14 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈಶಾನ್ಯ ರಾಜ್ಯಗಳ ಜನರಿಗೆ ಆಧುನಿಕ ಜಗತ್ತಿನ ಪರಿಚಯದ ಅಗತ್ಯವಿದೆ. ಶಿಕ್ಷಣ, ಉದ್ಯೋಗದಂತಹ ಅವಕಾಶ ಗಳು ಸಿಕ್ಕಲ್ಲಿ ಅವರು ನಾಗರಿಕ ಸಮಾಜದೊಂದಿಗೆ ಗುರುತಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗುವುದು ಸಾಧ್ಯವಾಗುತ್ತದೆ. ಇತ್ತೀಚಿಗೆ ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿಯ ಗಾಳಿ ಬೀಸಿದೆ. ತ್ರಿಪುರಾ ರಾಜ್ಯದಲ್ಲಿ ಸಾಕಷ್ಟು ಆರ್ಥಿಕ ಚಟುವಟಿಕೆಗಳು ಚಿಗುರೊಡೆದಿವೆ ಎಂದು ಉದಾಹರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಸತೀಶ ಕುಮಾರ ಭಂಡಾರಿ ಅವರು, ಭಾರತವು ಪ್ರಪಂಚದ ಅತ್ಯುತ್ತಮ ಪ್ರಜಾಪ್ರಭತ್ವ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಆದರೆ, ಈಚಿನ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಆಂತರಿಕ ಹಾಗೂ ಬಾಹ್ಯ ಕಂಟಕಗಳು ಎದುರಾಗಿವೆ. ಇದಕ್ಕೆ ಪರಿಹಾರವಾಗಿ ಭಾರತದ ಯುವಕರು ಒಗ್ಗಟ್ಟಾಗುವ ಅಗತ್ಯವಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಅರ್ಥೈಸಿಕೊಂಡು ದೇಶವನ್ನು ಕಟ್ಟಿ, ಬೆಳೆಸುವ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ದೇಶದ ಎಲ್ಲ ಜನರ, ಎಲ್ಲ ರಾಜ್ಯಗಳ ಅಭಿವೃದ್ಧಿಯಾದರೆ ಮಾತ್ರ ಒಟ್ಟಾರೆಯಾಗಿ ದೇಶದ ಪ್ರಗತಿ ಸಾಧ್ಯವಾಗುವುದು. ಈಶಾನ್ಯ ರಾಜ್ಯಗಳನ್ನು ಅಭಿವೃದ್ಧಿ ಕಾರ್ಯದಲ್ಲಿ ಒಳಗೊಳ್ಳಬೇಕು. ಈಶಾನ್ಯ ರಾಜ್ಯಗಳ ಪ್ರಗತಿಗಾಗಿ ದುಡಿದಿರುವ ಪಿ.ಬಿ.ಆಚಾರ್ಯ ಅವರ ಶ್ರಮವನ್ನು ನಾವೆಲ್ಲರೂ ಗುರುತಿಸಬೇಕಾದ ಅಗತ್ಯವಿದೆ ಎಂದು ಅವರು ಸ್ಮರಿಸಿದರು.

75 ವಸಂತಗಳನ್ನು ಪೂರೈಸಿರುವ ಸ್ವತಂತ್ರ ಭಾರತವು ‘ಆಝಾದಿ ಕಾ ಅಮೃತ್ ಮಹೋತ್ಸವ್’ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ನಾವು ದೇಶಕಟ್ಟುವ ಸಂಕಲ್ಪವನ್ನು ತೊಡಬೇಕು. ವಿಶ್ವದ ಮುಂಚೂಣಿ ರಾಷ್ಟ್ರವನ್ನಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪಿ.ಬಿ.ಆಚಾರ್ಯ ಅವರು ಈಶಾನ್ಯ ರಾಜ್ಯಗಳನ್ನು ಪರಿಚಯಿಸುವ 5 ಕೃತಿಗಳನ್ನು ವಿಶ್ವವಿದ್ಯಾನಿಲಯಕ್ಕೆ ಕೊಡುಗೆ ನೀಡಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಸಚಿವೆ ಪ್ರೊ.ಅಲ್ಕಾ ಕುಲಕರ್ಣಿ ಅತಿಥಿಗಳನ್ನು ಸ್ವಾಗತಿಸಿದರು. ನಿಟ್ಟೆ ವಿಶ್ವವಿದ್ಯಾನಿಲಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಅನಿರ್ಬಾನ್‌ ಚಕ್ರವರ್ತಿ  ಪ್ರಾಸ್ತಾವಿವಾಗಿ ಮಾತನಾಡಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಘಟಕದ ಮುಖ್ಯಸ್ಥ ಶಶಿಕುಮಾರ ಶೆಟ್ಟಿ ಅವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News