ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಎಸ್‌ಡಿಪಿಐ ಆಗ್ರಹ
ಮಂಗಳೂರು : ವಿಟ್ಲ ಸಮೀಪದ ಕನ್ಯಾನದ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಸಮಗ್ರ ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಬೇಕು ಎಂದು ಎಸ್‌ಡಿಪಿಐ ಬಂಟ್ವಾಳ ವಿದಾನಸಭಾ ಕ್ಷೇತ್ರಾಧ್ಯಕ್ಷ ಶಾಹುಲ್ ಹಮೀದ್ ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂಘಪರಿವಾರವು ಜಿಲ್ಲೆಯ ಶಾಂತಿಯನ್ನು ಕದಡಲು ಯತ್ನಿಸುತ್ತಿದೆ. ಜಿಲ್ಲೆಯಲ್ಲಿ ನೂರಾರು ಹಿಂದೂ ಹುಡುಗಿಯರು ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಅನೇಕ ಪ್ರಕರಣಗಳಿವೆ. ಅಲ್ಲಿಗೆ ಭೇಟಿ ಕೊಡದ ಹಾಗೂ ನ್ಯಾಯಕ್ಕಾಗಿ ಆಗ್ರಹಿಸದ ಶರಣ್ ಪಂಪ್‌ವೆಲ್ ಎಂಬಾತ ವಿಟ್ಲ ಕನ್ಯಾದ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣದಲ್ಲಿ ಮುಸ್ಲಿಂ ಯುವಕನ ಮೇಲೆ ಆರೋಪ ಬಂದ ಕೂಡಲೇ ಭೇಟಿ ಕೊಟ್ಟು ಸುದ್ದಿಗೋಷ್ಠಿ ನಡೆಸಿ ಕಪೋಲಕಲ್ಪಿತ ಲವ್ ಜಿಹಾದ್ ಎಂದು ಆರೋಪ ಮಾಡವುದರ ಹಿಂದೆ ಮುಸ್ಲಿಮರ ವಿರುದ್ಧವಿರುವ ದ್ವೇಷವೇ ಹೊರತು ಸಂತ್ರಸ್ತ ಹಿಂದೂ ಕುಟುಂಬದವರೊಂದಿಗೆ ಇರುವ ಪ್ರೀತಿಯಲ್ಲ. ಹಾಗಾಗಿ ಸಂಘಪರಿವಾರದ ಷಡ್ಯಂತ್ರಕ್ಕೆ ಹಿಂದೂ ಸಮುದಾಯ ಬಲಿಯಾಗದಂತೆ ಎಚ್ಚರವಹಿಸಬೇಕು. ಈ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಜಿಲ್ಲೆಯ ಶಾಂತಿ ಕದಡಲು ಯತ್ನಿಸುತ್ತಿರುವ ಸಂಘಪರಿವಾರ ನಾಯಕರ ಮೇಲೆ ನಿಗಾ ಇರಿಸಬೇಕು. ಆತ್ಮಹತ್ಯೆ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.