‘ಷರತ್ತು ಉಲ್ಲಂಘಿಸಿ' ಬೌರಿಂಗ್ ಆಸ್ಪತ್ರೆಯ ಮೂವರು ಪ್ರಾಧ್ಯಾಪಕರ ವರ್ಗಾವಣೆಗೆ ಆಕ್ಷೇಪ
ಬೆಂಗಳೂರು, ಮೇ 6: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ವರ್ಗಾವಣೆಗೊಂಡು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಖಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂರು ಮಂದಿ ಪ್ರಾಧ್ಯಾಪಕರನ್ನು ಏಕಾಏಕಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಪುನಃ ಬಿಎಂಸಿಆರ್‍ಐಗೆ ವರ್ಗಾವಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಬೌರಿಂಗ್ ಮತ್ತು ಲೇಡಿ ಕರ್ತವ್ಯ ಆಸ್ಪತ್ರೆಯ ವೈದ್ಯಕೀಯ(ಪ್ರಭಾರ) ಅಧೀಕ್ಷಕಿ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಜಿ.ಎನ್., ಅಂಗರಚನಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಪಾರ್ಥಸಾರಥಿ ಹಾಗೂ ಶರೀರ ಕ್ರಿಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀನಿವಾಸಲು ನಾಯ್ಡು ಅವರನ್ನು ಪುನಃ ಬಿಎಂಸಿಆರ್ ಐಗೆ ಕಳುಹಿಸಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
2019ರ ಮಾರ್ಚ್ 8ಕ್ಕೆ ಮೇಲ್ಕಂಡ ಮೂರು ಮಂದಿ ಪ್ರಾಧ್ಯಾಪಕರನ್ನು ಬಿಎಂಸಿಆರ್‍ಐಯಿಂದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ವರ್ಗಾವಣೆ ಮಾಡಿದ್ದು, ಮೂರು ಮಂದಿಯೂ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲೇ ಖಾಯಂ ಆಗಿ ಇರಬೇಕು. ಯಾವುದೇ ಕಾರಣಕ್ಕೂ ಪುನಃ ಬಿಎಂಸಿಆರ್‍ಐಗೆ ವರ್ಗಾವಣೆಗೆ ಅವಕಾಶವಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಆದರೆ, ಇದೀಗ ಅದನ್ನು ಉಲ್ಲಂಘಿಸಿ ಪುನಃ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಮಹಾ ವಿದ್ಯಾಲಯ ಸ್ಥಾಪಿಸಲು ಮಂಜೂರಾತಿ ದೊರಕಿದ್ದು, ಹೊಸದಾಗಿ 150 ಸೀಟುಗಳ ಎಂಬಿಬಿಎಸ್ ಪ್ರವೇಶಾತಿಯೊಂದಿಗೆ ಪ್ರಾರಂಭಿಸಲು ಕೇಂದ್ರ ಹಾಗೂ ಎಂಸಿಐ ಅನುಮತಿಯನ್ನು ನೀಡಿದೆ. ಇದೀಗ ವೈದ್ಯಕೀಯ ಕಾಲೇಜಿಗೆ 200ಕ್ಕೂ ಹೆಚ್ಚು ವೈದ್ಯರು ಸೇರಿದಂತೆ ಸಿಬ್ಬಂದಿ ನೇಮಕ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಪ್ರಭಾರ ಅಧೀಕ್ಷಕಿ ಡಾ.ವಿಜಯಲಕ್ಷ್ಮಿ ಸೇರಿದಂತೆ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಖಾಯಂ ನೌಕರರ ಬದಲಿಗೆ ಅಧೀಕ್ಷಕ ಹುದ್ದೆಗೆ ನಿಯೋಜನೆ ಅಥವಾ ಗುತ್ತಿಗೆ ಆಧಾರದ ಮೇಲೆ ಬಂದ ನೌಕರರನ್ನು ನೇಮಕ ಮಾಡುವ ಉದ್ದೇಶದಿಂದ ಕಾನೂನು ಉಲ್ಲಂಘಿಸಿ ಪುನಃ ವರ್ಗಾವಣೆ ಮಾಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಆಪಾದಿಸಿದ್ದಾರೆ.