ರಾಜ್ಯಮಟ್ಟದ ವಾಣಿಜ್ಯ, ವ್ಯವಸ್ಥಾಪನಾ ಶಾಸ್ತ್ರ ಅಧ್ಯಾಪಕರ ಸಮಾವೇಶ
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ಅಧ್ಯಾಪಕರ ಸಂಘ (ಮುಕ್ತಾ), ವ್ಯವಸ್ಥಾಪನಾ ಶಾಸ್ತ್ರ ಅಧ್ಯಾಪಕರ ಸಂಘ, ಮಂಗಳೂರು ವಿ.ವಿ ವಾಣಿಜ್ಯಶಾಸ್ತ್ರ ಹಾಗೂ ವ್ಯವಸ್ಥಾಪನಾಶಾಸ್ತ್ರ ಸ್ನಾತಕೋತ್ತರ ವಿಭಾಗಗಳ ಸಹಯೋಗದೊಂದಿಗೆ ಎರಡು ದಿನಗಳ ೧೩ನೇ ರಾಜ್ಯಮಟ್ಟದ ವಾಣಿಜ್ಯ ಮತ್ತು ವ್ಯವಸ್ಥಾಪನಾ ಶಾಸ್ತ್ರ ಅಧ್ಯಾಪಕರ ಸಮಾವೇಶ ಶನಿವಾರ ಉದ್ಘಾಟನೆಗೊಂಡಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ವಿದ್ಯಾರ್ಥಿಗಳಿಗೆ ಭಾವೈಕ್ಯ, ಸಾಮರಸ್ಯದ ತತ್ವಗಳನ್ನು ಒಳಗೊಂಡಿರುವ ಜೀವನದ ಶಿಕ್ಷಣ ಕಲಿಸುವುದು ಅಗತ್ಯವಾಗಿದ್ದು, ಸಂವಿಧಾನದ ಆಶಯಗಳು ಅಧ್ಯಾಪಕರ ಮೂಲಕ ಈಡೇರಬೇಕಾಗಿದೆ ಎಂದರು.
ನೂತನ ಶಿಕ್ಷಣ ನೀತಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಅಧ್ಯಾಪಕರ ಪಾತ್ರ ಮುಖ್ಯ. ಅಧ್ಯಾಪಕರು ವೇತನ ಪರಿಷ್ಕರಣೆಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿದರು.
ರಾಜ್ಯ ವಾಣಿಜ್ಯ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಕೆ.ಉಲ್ಲಾಸ್ ಕಾಮತ್ ದಿಕ್ಸೂಚಿ ಭಾಷಣ ಮಾಡಿದರು.
ಮಂಗಳೂರು ವಿ.ವಿ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ, ಬೆಳಗಾವಿಯ ರಾಣಿ ಚೆನ್ನಮ್ಮ ವಿ.ವಿ ಕುಲಪತಿ ಪ್ರೊ. ಎಂ.ರಾಮಚಂದ್ರ ಗೌಡ, ಎಫ್‌ಟಿಸಿಸಿಎಂಕೆ ಅಧ್ಯಕ್ಷ ಚಂದ್ರಶೇಖರ್ ಆರ್.ಗುಡಸಿ, ಕಾರ್ಯದರ್ಶಿ ಡಾ. ಸಿ.ವಿ.ಕೊಪ್ಪದ್, ಸಮಾವೇಶದ ವೈಸ್ ಚೇರ್‌ಮೆನ್ ಡಾ. ಪರಮೇಶ್ವರ, ಕಾರ್ಯದರ್ಶಿ ಪ್ರೊ.ಲೂಯಿಸ್ ಮನೋಜ್ ಆ್ಯಂಬ್ರೊಸ್, ಕೋಶಾಧಿಕಾರಿ ಪ್ರೊ. ಸ್ಮಿತಾ ಎಂ ಉಪಸ್ಥಿತರಿದ್ದರು.
‘ಮುಕ್ತಾ’ ಅಧ್ಯಕ್ಷ ಪ್ರೊ. ಪಾರ್ಶ್ವನಾಥ ಅಜ್ರಿ ಸ್ವಾಗತಿಸಿದರು. ಸಮಾವೇಶ ಚೇರ್‌ಮೆನ್ ಪ್ರೊ. ಬಾಲಕೃಷ್ಣ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಫ್‌ಟಿಸಿಸಿಎಂಕೆ ಕೋಶಾಧಿಕಾರಿ ಡಾ. ಎಂ.ಜಯಪ್ಪ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.