ಬೆಂಗಳೂರು: ಆಪ್ ಕಚೇರಿ ಮುಂಭಾಗ ಬಿಜೆಪಿ ಪ್ರತಿಭಟನೆ
ಬೆಂಗಳೂರು, ಮೇ 7: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ತಜೀಂದರ್ ಪಾಲ್ ಸಿಂಗ್ ಬಗ್ಗಾ ಬಂಧನ ಖಂಡಿಸಿ ಬಿಜೆಪಿ ಸದಸ್ಯರು ಬೆಂಗಳೂರಿನ ಆಮ್ ಆದ್ಮಿ ಪಾರ್ಟಿ ಕಚೇರಿ ಮುಂಭಾಗ ಪ್ರತಿಭಟನೆ ನಡಸಿದರು.
ಶನಿವಾರ ಇಲ್ಲಿನ ಎಂಜಿ ರಸ್ತೆಯಲ್ಲಿರುವ ಆಪ್ ಪಕ್ಷದ ಕಚೇರಿ ಮುಂಭಾಗ ಕರ್ನಾಟಕ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅರವಿಂದ್ ಕೇಜ್ರಿವಾಲ್ ಅವರ ಆಡಳಿತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆ, ತುಘಲಕ್ ದರ್ಬಾರ್ ನೆನಪಿಸುವಂತಿದೆ. ಹೊಸದಿಲ್ಲಿಗೆ ಪಂಜಾಬ್ ಪೊಲೀಸ್ ಕಳುಹಿಸಿ ತಜೀಂದರ್ ಪಾಲ್ ಸಿಂಗ್ ಅನ್ನು ಬಂಧಿಸುವ ದುಸ್ಸಾಹಸಕ್ಕೆ ಕೈಹಾಕಿ ಎಎಪಿ ಮುಖಭಂಗ ಅನುಭವಿಸಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಪ್ರತಿಭಟನೆ ಹಿನ್ನೆಲೆ ಆಪ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ವಾಹನದಲ್ಲಿ ಕರೆದೊಯ್ದರು.
ಖಂಡನೆ: ಹೊಸದಿಲ್ಲಿಯಲ್ಲಿ ನಡೆದ ಬೆಳವಣಿಗೆಯನ್ನೆ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಆಪ್ ಕಚೇರಿ ಮುಂಭಾಗ ಜಮಾಯಿಸಿ ಗೂಂಡಾಗಿರಿ ಮಾಡಿದ್ದಾರೆ. ಆಪ್ ಪಕ್ಷದ ಕಾರ್ಯಕ್ರಮ, ಯೋಜನೆಗಳ ಕುರಿತು ಜನ ಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಕಾರಣದಿಂದಾಗಿ ಬಿಜೆಪಿ ಈ ರೀತಿ ವರ್ತನೆ ಮಾಡುತ್ತಿದೆ ಎಂದು ಆಪ್ ನಾಯಕರು ಆರೋಪಿಸಿದರು.