×
Ad

ಸಮಾಜ ಸೇವಕ ಶೇಕಬ್ಬ ಅಡ್ಯಾರ್‌ಗೆ ಶ್ರೀ ವೀರಾಂಜನೇಯ ಸ್ವಾಮಿ ಮಂದಿರದಿಂದ ಸನ್ಮಾನ

Update: 2022-05-08 08:33 IST

ಮಂಗಳೂರು : ಅಡ್ಯಾರಿನ ಪ್ರಸಿದ್ಧ ವೈದ್ಯರಾದ ಡಾ. ಶ್ಯಾಮಪ್ರಸಾದ್‌ ಶೆಟ್ಟಿ ಅವರಲ್ಲಿ ಸಹಾಯಕರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿರುವ ಸಮಾಜ ಸೇವಕ, ಅಡ್ಯಾರ್‌ ಗ್ರಾಮದ ಎ. ಶೇಕಬ್ಬ ಅವರನ್ನು ಶ್ರೀ ವೀರಾಂಜನೇಯ ಸ್ವಾಮಿ ಮಂದಿರ ಅಡ್ಯಾರ್‌ ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಅಡ್ಯಾರು ಗ್ರಾಮದ ಅಬ್ದುಲ್ ರಝಾಕ್ - ನಬಿಸಾ ದಂಪತಿಯ ಪುತ್ರ ಎ. ಶೇಕಬ್ಬ ಅವರು ಜಾತಿ, ಮತ, ಧರ್ಮ ಭೇದವಿಲ್ಲದೇ ಅಶಕ್ತ ರೋಗಿಗಳ ಮನೆಗೆ ಹೋಗಿ ವೈದ್ಯಕೀಯ ಶುಶ್ರೂಷೆ ಮಾಡಿ,  ಪರಿಸರದಲ್ಲಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದು, ಅವರ ಸೇವೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಶ್ರೀ ವೀರಾಂಜನೇಯ ಸ್ವಾಮಿ ಮಂದಿರ ಅಡ್ಯಾರ್‌ ನಲ್ಲಿ ನಡೆದ ಹನುಮ ಜಯಂತಿ ಉತ್ಸವದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ವೀರಾಂಜನೇಯ ಸ್ವಾಮಿ ಮಂದಿರದ ಗೌರವಾಧ್ಯಕ್ಷರಾದ ದಿವಾಕರ ನಾಯ್ಕ್‌, ಅಧ್ಯಕ್ಷರಾದ ರಮೇಶ ತುಂಬೆ, ಪ್ರಧಾನ ಕಾರ್ಯದರ್ಶಿ ಸತೀಶ್‌ ಶೆಟ್ಟಿ, ಶೇಖರ್‌ ಶೆಟ್ಟಿ ಹಾಗು ಇತರರು ಉಪಸ್ಥಿತರಿದ್ದರು.

ಶೇಕಬ್ಬ ಅವರು ಕೊರೋನ ಭೀತಿ ಸಂದರ್ಭದಲ್ಲಿ ಡಾ. ಶ್ಯಾಮ್‌ ಪ್ರಸಾದ್‌ ಶೆಟ್ಟಿ ಅವರ ಜೊತೆ ಸೇರಿ ಕೊರೋನ ಸೋಂಕಿತರ ಮನೆಗೆ ಭೇಟಿ ಕೊಟ್ಟು ಅವರಿಗೆ ಚಿಕಿತ್ಸೆಯನ್ನು ನೀಡುವುದರ ಜೊತೆಗೆ ಡಾ. ಶ್ಯಾಮ್‌ ಪ್ರಸಾದ್‌ ಶೆಟ್ಟಿ ಅವರ ಚಿಕಿತ್ಸಾಲಯದಲ್ಲಿ ಕೂಡ ಕೊರೋನ ಸೋಂಕಿತರ ಸುಶ್ರೂಷೆ ಮಾಡಿ ಜನಮನ ಗೆದ್ದಿದ್ದರು.

ಶೇಕಬ್ಬ ಅವರನ್ನು ಈ ಹಿಂದೆ ಅತ್ತಾವರ ಶ್ರೀ ವೈದ್ಯನಾಥ ದೇವಸ್ಥಾನದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ, ಕಣ್ಣೂರು ಶ್ರೀ ಅಯ್ಯಪ್ಪ ಭಕ್ತ ಮಂದಿರದ ವಾರ್ಷಿಕ ಕಾರ್ಯಕ್ರಮದಲ್ಲಿ ಹಾಗೂ ಹಿಂದೂ ಹಿತರಕ್ಷಣಾ ಸಮಿತಿ ಕೊಡಕ್ಕಲ್, ಅಳಪೆ, ಕಣ್ಣೂರು ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಗೌರವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News