ಶ್ರೀಮಂತರಿಂದ ಸರಕಾರದ ನಿಯಂತ್ರಣ: ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಮೇ 8: ಇಡೀ ದೇಶದ ಜನರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾಗ ದೇಶದಲ್ಲಿರುವ 100 ಮಂದಿ ಶ್ರೀಮಂತರು 13 ಲಕ್ಷ ಕೋಟಿ ರೂ.ಗಳ ಒಡೆಯರಾದರು ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಕಬ್ಬನ್ ಪಾರ್ಕ್‍ನಲ್ಲಿರುವ ಎನ್‍ಜಿಓ ಭವನದಲ್ಲಿ ಆರ್‍ಪಿಐ ಆಯೋಜಿಸಿದ್ದ ಪದಾಧಿಕಾರಿಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೊರೋನ ಸಂದರ್ಭದಲ್ಲಿ ಒಂದು ಕೋಟಿಗೂ ಅಧಿಕ ಜನರು ಉದ್ಯೋಗವನ್ನು ಕಳೆದುಕೊಂಡು ಬೀದಿಗೆ ಬಂದಿದ್ದರು. ಅನೇಕ ಜನರು ಸತ್ತಿದ್ದಾರೆ. ಆದರೆ ಶ್ರೀಮಂತರ ಆಸ್ತಿ ಹೆಚ್ಚಾಯಿತು. ಇಂದು ಅವರು ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ’ ಎಂದು ದೂರಿದರು.
‘ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಯೇ ಸಾಮಾಜಿಕ ಪ್ರಜಾಪ್ರಭುತ್ವವಾಗಿದ್ದು, ಇದು ದೇಶದಲ್ಲಿ ಬರಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಸ್ವತಂತ್ರ ಬಂದು ಏಳು ದಶಕಗಳು ಕಳೆದರೂ, ಜನರು ತಲೆ ಮೇಲೆ ಮಲ ಹೊರುತ್ತಿದ್ದಾರೆ. ಸಫಾಯಿ ಕರ್ಮಚಾರಿಗಳು ಶೌಚ ಗುಂಡಿಗೆ ಬಿದ್ದು ಸಾಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ’ ಎಂದು ಅವರು ಹೇಳಿದರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ‘ದಲಿತ ಹೋರಾಟಗಳನ್ನು ಹಿಂತಿರುಗಿ ನೋಡಿದರೆ, ಆರಂಭಿಸಿದ ಸ್ಥಾನದಲ್ಲಿಯೇ ಇದ್ದೇವೆ. ಹಿರಿಯರು ಕಿರಿಯರಿಗೆ ಹೋರಾಟಗಳನ್ನು ಒಪ್ಪಿಸುತ್ತಿದ್ದಾರೆ ವಿನಃ ಏನು ಆಗುತ್ತಿಲ್ಲ. ಜಾತಿ ಅಸಮಾನತೆ ಮಾರ್ಪಾಡಾಗಿದೆ, ಆದರೆ ತೊಲಗಲಿಲ್ಲ. ನಗರದ ಕೈಗಾರಿಕೆ ಹಾಗೂ ಹೋಟೆಲ್‍ಗಳಲ್ಲಿ ಜಾತಿ ಅಸಮಾನತೆ ಇಲ್ಲ, ಆದರೆ ಗ್ರಾಮಗಳಲ್ಲಿ ಇನ್ನು ಇದೆ’ ಎಂದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಆರ್.ಮೋಹನ್‍ರಾಜ್ ಮಾತನಾಡಿ, ‘ಬಿಜೆಪಿ ಶಾಸಕ ರೇಣುಕಾಚಾರ್ಯರಂತವರು ನಕಲಿ ಜಾತಿ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳುವುದು ಸಂವಿಧಾನ ವಿರೋಧಿ ನಡೆ’ ಎಂದು ಕಿಡಿ ಕಾರಿದರು. ಕಾರ್ಯಕ್ರಮದಲ್ಲಿ ಆದಿಲಕ್ಷ್ಮಿ, ರಾಜು ಎಂ.ತಳವಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
‘ಹಿಜಾಬ್ ಧರಿಸಿದರೆ ಯಾರಿಗೂ ಅನ್ಯಾಯ ಆಗುವುದಿಲ್ಲ. ಆದರೆ ಅದನ್ನು ರಾಷ್ಟ್ರವ್ಯಾಪಿ ಸುದ್ದಿ ಮಾಡಿದ್ದಾರೆ. ಆದರೆ ರಾಷ್ಟ್ರ ಸುದ್ದಿ ಆಗಬೇಕಾದವನ್ನು ಮರೆ ಮಾಡಲಾಗುತ್ತಿದೆ. ಹಾಲಾಲ್, ಜಟ್ಕಾಕಟ್ ಎಂಬುದನ್ನು ಮಾಂಸ ತಿನ್ನದೆ ಇರುವವರು, ಮುನ್ನೆಲೆ ತಂದಿದ್ದಾರೆ. ಇದು ಮುಸ್ಲಿಂ ವಿರೋಧಿ ನಡೆ ಹೊರತು ಬೇರೇನು ಅಲ್ಲ'
-ಡಾ.ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ