×
Ad

ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

Update: 2022-05-08 21:43 IST

ಬೆಂಗಳೂರು, ಮೇ 8: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ರವಿವಾರ ಪರಿಶೀಲನೆ ನಡೆಸಿದರು.

ಯಲಹಂಕ ಪೊಲೀಸ್ ಸ್ಟೇಷನ್ ಜಂಕ್ಷನ್ ನಿಂದ ಯಲಹಂಕ ನ್ಯೂ ಟೌನ್ ಜಲಮಂಡಳಿಯ ಜಂಕ್ಷನ್ ವರಗೆ 175 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 1.8 ಕಿ.ಮೀ ಉದ್ದದ ಇಂಟಿಗ್ರೇಟೆಡ್ ಎಲಿವೇಟೆಡ್ ಕಾರಿಡಾರ್ ಪ್ರಗತಿ ಕಾಮಗಾರಿಯನ್ನು ಪರೀಶಿಲಿಸಿ, ‘ದೊಡ್ಡಬಳ್ಳಾಪುರ ಮುಖ್ಯ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪೊಲೀಸ್ ಸ್ಟೇಷನ್ ವೃತ್ತ, ಎನ್.ಇ.ಎಸ್ ಜಂಕ್ಷನ್, ಶೇಷಾದ್ರಿಪುರಂ ಜಂಕ್ಷನ್ ಹಾಗೂ ಬಿಡಬ್ಲ್ಯೂಎಸ್‍ಎಸ್‍ಬಿ ಜಂಕ್ಷನ್ ಬರಲಿದ್ದು, ಇಂಟಿಗ್ರೇಟೆಡ್ ಎಲಿವೇಟೆಡ್ ಕಾರಿಡಾರ್ ನಿಂದ ಈ ಭಾಗದ ಬಹುತೇಕ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾಮಗಾರಿಯನ್ನು ನಡೆಸಬೇಕು’ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂತ್ರಿ ಮಾಲ್ ಬಳಿಯಿಂದ ಯಶವಂತಪುರ ಜಂಕ್ಷನ್ ವರೆಗೆ ಕೈಗೆತ್ತಿಕೊಂಡಿರುವ ವೈಟ್ ಟಾಂಪಿಂಗ್ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ‘ಸದರಿ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ, ಜಲಮಂಡಳಿಯ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ, ಬೆಸ್ಕಾಂ, ಓ.ಎಫ್.ಸಿ ಕೇಬಲ್ ಅಳವಡಿಕೆಗೆ ಡಕ್ಟ್ ಅಳವಡಿಕೆ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳ ಅಳವಡಿಕೆಯ ಸಣ್ಣ-ಪುಟ್ಟ ಕಾಮಗಾರಿಗಳಿಗೆ ವೇಗನೀಡಿ ತ್ವರಿತವಾಗಿ ಕೆಲಸ ಪೂರ್ಣಗೊಳಿಸಬೇಕು. ಅಲ್ಲದೆ ಶೀಘ್ರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಅವರು ತಿಳಿಸಿದರು.

ಭಾಷ್ಯಂ ವೃತ್ತದಿಂದ ಮಲ್ಲೇಶ್ವರ 18ನೇ ಕ್ರಾಸ್ ನವರೆಗಿನ ಸ್ಯಾಂಕಿ ಬಂಡ್ ರಸ್ತೆ 900 ಮೀಟರ್ ಉದ್ದದ ರಸ್ತೆಯನ್ನು 60 ಕೋಟಿ ರೂ. ವೆಚ್ಚದಲ್ಲಿ 15 ಮೀಟರ್ ರಸ್ತೆ ಅಗಲೀಕರಣ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಅದಕ್ಕೆ ಈಗಾಗಲೇ ಸರಕಾರದಿಂದ ಅನುಮೋದನೆ ಸಿಕ್ಕಿದ್ದು, ಕೆಲಸ ಪ್ರಾರಂಭಿಸಲು ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡದ ಅವರು, ಸ್ಯಾಂಕಿ ಬಂಡ್ ರಸ್ತೆ ಬದಿಯ ಪಾದಚಾರಿ ಮಾರ್ಗ ಆಳಾಗಿದ್ದು, ಕೂಡಲೆ ದುರಸ್ತಿಪಡಿಸಿ ಪಾದಚಾರಿಗಳು ಸುಗಮವಾಗಿ ಸಂಚರಿಸುವಂತೆ ನಿರ್ಮಾಣ ಮಾಡಲು ಸೂಚಿಸಿದರು. 

ಮೇಕ್ರಿ ವೃತ್ತದ ಕಡೆಯಿಂದ ಜಯಮಹಲ್ ರಸ್ತೆ ಕಡೆ ಬರುವ ರಸ್ತೆಯಲ್ಲಿ ಯುಜಿಡಿ ಪೈಪ್‍ಗಳು ಹಾಗೂ ನೀರಿನ ಕೊಳವೆಗಳಿರುವುದನ್ನು ಕಂಡು ಅದನ್ನು ಬೇರೆಡೆ ಸ್ಥಳಾಂತರಿಸಿ ವಾಹನಗಳ ಸುಗಮಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜಯಮಹಲ್ ರಸ್ತೆ ಅಗಲೀಕರಣಕ್ಕೆ ಪ್ಯಾಲೆಸ್ ನಿಂದ ಸ್ಥಳ ಹಸ್ತಾಂತರಗೊಳ್ಳಬೇಕಿದ್ದು, ಸದ್ಯ ಇರುವ ರಸ್ತೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಯಡಿ 175 ಕೋಟಿ ರೂ. ವೆಚ್ಚದಲ್ಲಿ ಕೋರಮಂಗಲ ರಾಜಕಾಲುವೆ(ಕೆ-100) ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗಿನ 9.6 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಜಲಮಾರ್ಗ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ನಡೆಯುತ್ತಿದೆ. 6 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಹೂಳೆತ್ತಿ ಕಲುಷಿತಗೊಂಡಿರುವ ರಾಜಕಾಲುವೆಯ ತಳಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನೀರು ಇಂಗುವಂತೆ ವಿನ್ಯಾಸಗೊಳಿಸಿ ಅಭಿವೃದ್ಧಿ ಕಾರ್ಯವನ್ನು ಮುಕ್ತಾಯದ ಹಂತದಲ್ಲಿದೆ. ಉಳಿದ 3.6 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಜೆ.ಸಿ.ರಸ್ತೆಯಿಂದ ಶಾಂತಿನಗರ ಬಸ್ ನಿಲ್ದಾಣದ ವರೆಗಿನ 1.5ಕಿ.ಮೀ ಉದ್ದದ ರಾಜಕಾಲುವೆ ಮಾರ್ಗದಲ್ಲಿ ಎರಡೂ ಬದಿಯ ತಡೆಗೋಡೆ, ತಳಮಟ್ಟದ ಸೇತುವೆಗಳನ್ನು ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸುವುದು. ಹಸಿರಿಕರಣ, ರಾತ್ರಿ ಸಮಯದಲ್ಲಿ ಉದ್ಯಾನವನದ ರೀತಿಯಲ್ಲಿ ಅಲಂಕಾರಿಕ ವಿದ್ಯುಧೀಕರಣ ಅಳವಡಿಕೆ ಕಾರ್ಯ, ಗ್ರಾನೈಟ್ ಅಳವಡಿಕೆ, ತೋಟಗಾರಿಕೆ, ಪಾದಚಾರಿ ಮಾರ್ಗ, ಗ್ರಿಲ್ ಅಳವಡಿಕೆ, ಕುಂಬಾರಗುಂಡಿ ಬಳಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲು 5 ಎಂ.ಎಲ್.ಡಿ ಎಸ್.ಟಿ.ಪಿಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ರಾಜಕಾಲುವೆ ಮೇಲೆ ಎರಡೂ ಬದಿ ಸಂಚರಿಸಲು ನಿರ್ಮಿಸುತ್ತಿರುವ 6 ಬ್ರಿಡ್ಜ್ ಗಳು ಪೂರ್ಣಗೊಂಡಿದ್ದು, ಉಳಿದ 3 ಬ್ರಿಡ್ಜ್ ಕೆಲಸ ಪ್ರಗತಿಯಲ್ಲಿದೆ. ವಿದ್ಯುತ್ ಅಳವಡಿಕೆಗಾಗಿ ಅತ್ಯಾಧುನಿಕ ಟ್ರಾನ್ಸ್‍ಫಾರ್ಮ್‍ಗಳನ್ನು ಅಳವಡಿಸಲಾಗಿದೆ. ಜೊತೆಗೆ ರಾಜಕಾಲುವೆಯ ಎರಡೂ ಬದಿಯ ಸರ್ವೀಸ್ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಸವೀರ್ಸ್ ರಸ್ತೆಯಲ್ಲಿ ರಾಜಕಾಲುವೆಗೆ ಮಳೆ ನೀರು ಹರಿದು ಹೋಗದಂತೆ ಪೈಪ್ ಲೈನ್, ಕೇಬಲ್ ಅಳವಡಿಕೆಗೆ ಚೇಂಬರ್‍ಗಳ ಕಾಮಗಾರಿ ಮುಗಿಯುವ ಹಂತದಲ್ಲಿರುತ್ತದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಮುಖ್ಯ ಇಂಜಿನಿಯರ್‍ಗಳು, ಕಾರ್ಯಪಾಲಕ ಇಂಜಿನಿಯರ್‍ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News