'ಬೆಂಗಳೂರಿನಲ್ಲಿ ಕೋಮು ಗಲಭೆ ಸೃಷ್ಟಿಗೆ ಯತ್ನ' ಸುಳ್ಳು ಸುದ್ದಿ: ಡಿಸಿಪಿ ಭೀಮಾ ಶಂಕರ್ ಗುಳೇದ್ ಸ್ಪಷ್ಟನೆ
ಬೆಂಗಳೂರು: 'ಬೆಂಗಳೂರಿನಲ್ಲಿ ಕೋಮು ಗಲಭೆ ಸೃಷ್ಟಿಸುವ ಯತ್ನ ನಡೆದಿದೆ ಎಂಬುದು ಸುಳ್ಳು' ಎಂದು ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೊಲೆಗೆ ಸಂಚು ಮಾಡಿದ್ದಾರೆ ಮತ್ತು ಯಾವುದೋ ದೇವಸ್ತಾನವನ್ನು ಧ್ವಂಸ ಮಾಡಲು ಸಂಚು ಮಾಡಿದ್ದಾರೆ ಎಂಬ ಸುದ್ದಿ ಬೆಳಗ್ಗೆಯಿಂದ ಕೆಲವೊಂದು ಮಾಧ್ಯಮಗಳಲ್ಲಿ ಬರುತ್ತಿತ್ತು. ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಯಾವುದೇ ಹಿಂದೂ ಮುಖಂಡನನ್ನು ಟಾರ್ಗೆಟ್ ಮಾಡಿರಲಿಲ್ಲ. ಸಾರಾಯಿ ಪಾಳ್ಯದಲ್ಲಿ ಗಲಭೆ ಸೃಷ್ಟಿಸುವ ಯತ್ನ ಇರಲಿಲ್ಲ' ಎಂದು ತಿಳಿಸಿದರು.
ಫಯಾಝ್ ಉಲ್ಲಾ ಎಂಬುವರು 35 ಲಕ್ಷಕ್ಕೆ ಮನೆ ಮಾರಿದ್ದರು, ಅಝೀಮುಲ್ಲಾ ಮನೆ ಮಾರಾಟ ಮಾಡಿಸಿದ್ದ. ಬಳಿಕ ಫಯಾಝ್ ಉಲ್ಲಾ 40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ, ಹೀಗಾಗಿ ಇಬ್ಬರ ನಡುವೆ ದ್ವೇಷ ಸೃಷ್ಟಿಯಾಗಿತ್ತು. ಆ ನಂತರ ಫಯಾಝ್ ಉಲ್ಲಾ ಸಂಚು ಮಾಡಿ ಅಝೀಮುಲ್ಲಾನನ್ನು ಸಿಲುಕಿಸಲು ಯತ್ನಿಸಿದ್ದ, ಇದು ಇಬ್ಬರ ನಡುವಿನ ವೈಯಕ್ತಿಕ ದ್ವೇಷದ ವಿಚಾರ ಅಷ್ಟೇ. ಈ ಪ್ರಕರಣಕ್ಕೆ ಸಂಬಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಆಝಾನ್ ವಿರುದ್ಧ ಸೋಮವಾರ ಶ್ರೀ ರಾಂ ಸೇನೆ ಸೇರಿ ಸಂಘಪರಿವಾರದ ಕಾರ್ಯಕರ್ತರು ಭಜನೆ ಇತ್ಯಾದಿ ಅಭಿಯಾನಗಳು ನಡೆಸುತ್ತಿದ್ದು, ಈ ಮಧ್ಯೆ ಕೆಲವೊಂದು ಮಾಧ್ಯಮಗಳಲ್ಲಿ ಬೆಳಗ್ಗೆಯಿಂದ ''ದೇವಾಲಯ ಟಾರ್ಗೆಟ್ ಮಾಡಿ ಹತ್ಯೆಗೆ ಸ್ಕೆಚ್?" ಹಾಗೂ ''ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಅರೆಸ್ಟ್'' ಎಂಬ ಸುದ್ದಿ ಪ್ರಸಾರಗೊಂಡಿತ್ತು. ಇದೀಗ ಅಂಥ ಸುದ್ದಿ ಸುಳ್ಳು ಎಂದು ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ.