ವೆಬ್‍ಸೈಟ್‍ನಲ್ಲಿ ಅಪಾಯದಂಚಿನ ಮರಗಳ ಪಟ್ಟಿ ಪ್ರಕಟಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ

Update: 2022-05-09 14:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 9: ಬಿಬಿಎಂಪಿಯ ಅರಣ್ಯ ಇಲಾಖೆಯು ನಗರದಲ್ಲಿ ಅಪಾಯಕಾರಿ ಮರಗಳ ಸರ್ವೇ ನಡೆಸಿ, ಪಟ್ಟಿಯನ್ನು ಪಾಲಿಕೆಯ ವೆಬ್‍ಸೈಟ್‍ನಲ್ಲಿ ಹಾಕಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸುರಿದ ಮಳೆಗೆ ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಮರಗಳು ಧರೆಗೆ ಉರುಳಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅಪಾಯದಂಚಿನ ಮರಗಳನ್ನು ಪಟ್ಟಿ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಸ್ಥಳೀಯರು ಬೀಳುವ ಮರದ ಕುರಿತು ಮಾಹಿತಿ ನೀಡಿದರೆ, ಕ್ರಮ ತೆಗೆದುಕೊಳ್ಳಲಾಗುವುದು.ಸಾರ್ವಜನಿಕರಿಂದ ಮರ ತೆರವಿನ ಬಗ್ಗೆ ದೂರು ಬಂದರೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು. ಜೀವಂತವಾಗಿರುವ ಮರವನ್ನು ತೆರವುಗೊಳಿಸಬೇಕಾದರೆ ಕಾನೂನು ವ್ಯಾಪ್ತಿಯಲ್ಲಿ ಚಿಂತನೆ ನಡೆಸಲಾಗುವುದು ಎಂದರು.

ನಗರದಲ್ಲಿರುವ ರಸ್ತೆಗುಂಡಿಗಳ ಕುರಿತು ಮತ್ತೊಮ್ಮೆ ಸರ್ವೇ(ರಿಸರ್ವೇ) ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. 

ಮಲ್ಲೇಶ್ವರಂ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಒಂದು ವರ್ಷದ ಗಡುವು ನೀಡಲಾಗಿತ್ತು. ಈಗ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಯನ್ನು ಮುಕ್ತಾಯ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. 

ಕಂದಾಯ ವಿಭಾಗದ ಸಹಯೋಗದಲ್ಲಿ ಅನಧಿಕೃತ ಕಟ್ಟಡಗಳನ್ನು ಸರ್ವೇ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿ ಶನಿವಾರ ಸರ್ವೇ ಮಾಡಿ ಕೆಲವು ಕಟ್ಟಡಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗಿದೆ. ಕೆಲವು ಕಟ್ಟಡಗಳು ದೊಡ್ಡ ಕಟ್ಟಡಗಳಾಗಿದ್ದು, ಅವನ್ನು ತೆರವು ಚಿಂತನೆ ಮಾಡಲಾಗುತ್ತಿದೆ ಎಂದ ಅವರು, ಶಿಥಿಲಾವಸ್ಥೆಯ ಕಟ್ಟಡಗಳ ಪಟ್ಟಿಯನ್ನು ಪಡೆದು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News