ಮೀಟರ್ ಡೆಪಾಸಿಟ್ ದರದಲ್ಲಿ ಹೆಚ್ಚಳ: ಗ್ರಾಹಕರಿಂದ ತೀವ್ರ ವಿರೋಧ

Update: 2022-05-09 16:31 GMT

ಬೆಂಗಳೂರು, ಮೇ 9: ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶಿಸಿದ ಬೆನ್ನಲ್ಲೇ ಬೆಸ್ಕಾಂನವರು, ಇದೀಗ ಮತ್ತೆ ಬೆಸ್ಕಾಂ ಡೆಪಾಸಿಟ್ ದರವನ್ನು ಕೂಡಾ ಏರಿಕೆ ಮಾಡುವುದಕ್ಕೆ ಮುಂದಾಗಿದೆ. ಈ ಡೆಪಾಸಿಟ್ ದರ ಏರಿಕೆಗೆ ಗ್ರಾಹಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಬೆಸ್ಕಾಂನಿಂದ ಜನಸಾಮಾನ್ಯರಿಗೆ ಹೊಸ ಡೆಪಾಸಿಟ್ ಆಘಾತ ಎದುರಾಗಿದೆ. ಈ ಡೆಪಾಸಿಟ್ ಹಣವನ್ನು ಪಾವತಿ ಮಾಡದೇ ಇದ್ದರೆ ಅಂಥವರ ಮನೆಯ ಪವರ್ ಕಟ್ ಆಗಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಭದ್ರತಾ ಠೇವಣಿಯನ್ನು ಕೂಡ ಬೆಸ್ಕಾಂ ಹೆಚ್ಚಿಸಿದೆ. ಕೆಇಆರ್‍ಸಿ ಆದೇಶದಂತೆ ಡೆಪಾಸಿಟ್ ಶುಲ್ಕ ಹೆಚ್ಚಿಸಿ ಹಣ ಪಾವತಿಸುವಂತೆ ಸೂಚನೆ ನೀಡಿದೆ. ಕಳೆದ 12 ತಿಂಗಳ ಒಟ್ಟು ವಿದ್ಯುತ್ ಶುಲ್ಕದ ಮಾಸಿಕ ಸರಾಸರಿ ಪಡೆಯಲಾಗುತ್ತದೆ. 

ನಂತರ 2 ತಿಂಗಳ ಸರಾಸರಿ ಶುಲ್ಕವನ್ನು ಭದ್ರತಾ ಠೇವಣಿ ರೀತಿಯಲ್ಲಿ ಸಂಗ್ರಹಿಸಲಾಗುತ್ತದೆ. ಅವಧಿ ಮುಗಿಯುವ ಒಳಗೆ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸದಿದ್ದರೆ ಅಂಥವರ ಮನೆಯ ಪವರ್ ಕಟ್ ಮಾಡುವುದಕ್ಕೆ ಬೆಸ್ಕಾಂ ಆದೇಶ ನೀಡಿದೆ.

ವಿದ್ಯುತ್ ಮೀಟರ್ ಇರುವ ಪ್ರತಿಯೊಂದು ಮನೆಗೂ 30 ದಿನಗಳ ಡೆಡ್‍ಲೈನ್ ನೀಡಿದ್ದು, ಈ ಅವಧಿಯಲ್ಲಿ ಬಿಲ್ ಪಾವತಿಸದೆ ಹೋದರೆ ಮನೆಯ ಪವರ್ ಕಟ್ ಆಗಲಿದೆ. ಉದಾಹರಣೆಗೆ ಒಂದು ಮನೆಯ ವಿದ್ಯುತ್ ಬಿಲ್ 500 ರೂ. ಬಂದರೆ ಅವರು 1000 ಸಾವಿರ ರೂಪಾಯಿ ಠೇವಣಿ ಹಣ ಪಾವತಿಸಬೇಕು. ಇಲ್ಲವಾದರೆ ವಿದ್ಯುತ್ ಸಂಪರ್ಕ ಕಟ್ ಮಾಡುವುದಾಗಿ ಬೆಸ್ಕಾಂ ಹೇಳಿದೆ.

ಜನಸಾಮಾನ್ಯರಿಗೆ ಹೆಚ್ಚಿದ ಹೊರೆ: ಭದ್ರತಾ ಠೇವಣಿ ಹೆಚ್ಚಳ ಸೂಚನೆ ನೀಡಿರುವ ಬೆನ್ನಲ್ಲೇ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಈಗಾಗಲೇ ಅನೇಕ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರ ಮಧ್ಯೆ ಈ ಠೇವಣಿ ಶುಲ್ಕ ಅವಶ್ಯಕತೆ ಇಲ್ಲ ಅಂತಿದ್ದಾರೆ ಜನಸಾಮಾನ್ಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News