ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್: ಭಾರತೀಯ ಟ್ವಿಟರ್ ಮೇಲಿನ ಬಿಜೆಪಿಯ ಹಿಡಿತ ಕಡಿಮೆಯಾಗುತ್ತದೆಯೇ?

Update: 2022-05-10 06:07 GMT

‘ಟೈಮ್’ ಮ್ಯಾಗಝಿನ್‌ನ ವರದಿಯೊಂದು ಹೇಳುವಂತೆ, ಮಸ್ಕ್ ಭಾರತದಲ್ಲಿ ತನ್ನ ವ್ಯಾಪಾರವನ್ನು ವೃದ್ಧಿಗೊಳಿಸಲು ಬಯಸಿದ್ದಾರೆ ಹಾಗೂ ಅನುಕೂಲಕರ ನೀತಿ ವಿನಾಯಿತಿಗಾಗಿ ಮೋದಿ ಸರಕಾರದ ಜೊತೆಗೆ ಲಾಬಿ ಮಾಡುತ್ತಿದ್ದಾರೆ. ಟ್ವಿಟರ್ ಮೇಲೆ ನಿಯಂತ್ರಣ ಹೊಂದುವಲ್ಲಿ ಬಿಜೆಪಿಯ ಹಿತಾಸಕ್ತಿಯಿದೆ. ಹಾಗಾಗಿ, ಮಸ್ಕ್ ಮತ್ತು ಬಿಜೆಪಿಯ ಹಿತಾಸಕ್ತಿಗಳು ಹೇಗೆ ಪರಸ್ಪರ ವ್ಯವಹರಿಸಬಹುದು ಎನ್ನುವುದನ್ನು ಯಾರು ಬೇಕಾದರೂ ಗ್ರಹಿಸಬಹುದು.

ಜಗತ್ತಿನ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್ ಟ್ವಿಟರ್‌ನ ಮಾಲಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬುದಾಗಿ ಎಪ್ರಿಲ್ 25ರಂದು ಜನಪ್ರಿಯ ಸಾಮಾಜಿಕ ಜಾಲ ತಾಣವು ಘೋಷಿಸಿತು. ಈ ಸುದ್ದಿಯು ಅಮೆರಿಕವನ್ನು ತಲ್ಲಣಗೊಳಿಸಿತು. ಯಾಕೆಂದರೆ ಅಮೆರಿಕದ ದೇಶಿ ರಾಜಕಾರಣದಲ್ಲಿ ಈ ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಅಗಾಧ ಪಾತ್ರವನ್ನು ವಹಿಸಿಕೊಂಡು ಬಂದಿದೆ. ಎಷ್ಟೆಂದರೆ, 2021ರ ಜನವರಿಯಲ್ಲಿ ಅದು ಅಂದಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನೇ ನಿಷೇಧಿಸಿತ್ತು. ಟ್ರಂಪ್‌ರ ಬೆಂಬಲಿಗರು ಅಮೆರಿಕದ ಸಂಸತ್ತಿಗೆ ನುಗ್ಗಿ ದಾಂಧಲೆ ನಡೆಸಿದ ಬಳಿಕ ಟ್ವಿಟರ್ ಈ ಅಭೂತಪೂರ್ವ ಕ್ರಮವನ್ನು ತೆಗೆದುಕೊಂಡಿತ್ತು. ಟ್ರಂಪ್ ಬೆಂಬಲಿಗರು ನಡೆಸಿದ ದಾಂಧಲೆಯು ಕ್ಷಿಪ್ರಕ್ರಾಂತಿ ಯತ್ನವಾಗಿತ್ತು ಎಂಬುದಾಗಿ ಹೆಚ್ಚಿನ ಅಮೆರಿಕನ್ನರು ಭಾವಿಸಿದ್ದಾರೆ.

ಟ್ರಂಪ್‌ರನ್ನು ನಿಷೇಧಿಸುವುದನ್ನು ಮಸ್ಕ್ ವಿರೋಧಿಸಿದ್ದರು ಎಂಬ ವರದಿಗಳೂ ಇವೆ. ಈ ಎಲ್ಲ ಹಿನ್ನೆಲೆಯಲ್ಲಿ, ಟ್ವಿಟರ್ ಮಾರಾಟಕ್ಕೆ ಸಂಬಂಧಿಸಿದ ಹೆಚ್ಚಿನ ಚರ್ಚೆಯು ಅಮೆರಿಕದಲ್ಲಿ ರಾಜಕೀಯ ಪಕ್ಷಗಳ ನಿಲುವುಗಳಿಗೆ ಅನುಗುಣವಾಗಿ ನಡೆಯುತ್ತಿದೆ. ಈ ಬೆಳವಣಿಗೆಯ ವಿರುದ್ಧ ಅಮೆರಿಕದ ಎಡಪಂಥೀಯರು ಸಿಡಿದುಬಿದ್ದರೆ, ಬಲಪಂಥೀಯರು ಅದನ್ನು ಸ್ವಾಗತಿಸಿದ್ದಾರೆ.

ಭಾರತೀಯ ರಾಜಕಾರಣದ ಮೇಲಿನ ಪರಿಣಾಮವೇನು?

ಭಾರತೀಯ ಒಕ್ಕೂಟವು ಖಂಡಿತವಾಗಿಯೂ ಅಮೆರಿಕ ಸಂಯುಕ್ತ ಸಂಸ್ಥಾನ (ಯುಎಸ್‌ಎ)ಕ್ಕಿಂತ ತುಂಬಾ ಭಿನ್ನವಾಗಿದೆ. ಇಲ್ಲಿ (ಭಾರತದಲ್ಲಿ) ವಾಕ್ ಸ್ವಾತಂತ್ರವನ್ನು ಹಲವಾರು ಕಾನೂನುಗಳ ಮೂಲಕ ಗರಿಷ್ಠ ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅಮೆರಿಕದಲ್ಲಿ ಬಹುತೇಕ ಸಮಾನವಾಗಿರುವ ಎರಡು ಪಕ್ಷಗಳ ರಾಜಕಾರಣವಿದ್ದರೆ, ಭಾರತೀಯ ರಾಜಕೀಯದಲ್ಲಿ ಹಿಂದೂ ರಾಷ್ಟ್ರೀಯವಾದಿ ಸಿದ್ಧಾಂತವನ್ನು ಪ್ರತಿಪಾದಿಸುತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂಬ ಏಕ ಪಕ್ಷದ ಪ್ರಾಬಲ್ಯವಿದೆ. ತನ್ನ ನೈಜ ಸಾಮರ್ಥ್ಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತೋರ್ಪಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಭಾರತದಲ್ಲೇ ಅತ್ಯಂತ ಹೆಚ್ಚು ಸಂಪನ್ಮೂಲ ಹೊಂದಿರುವ ಹಾಗೂ ಉತ್ತಮ ಸಂಘಟನೆ ಹೊಂದಿರುವ ಬಿಜೆಪಿಯು, ಇಂಟರ್‌ನೆಟ್ ಮೂಲಕ ರಾಜಕೀಯವಾಗಿ ಜನರನ್ನು ತಲುಪಿದ ಮೊದಲ ಪಕ್ಷವಾಗಿದೆ. ಆರಂಭದಲ್ಲಿ ಅದು ನೀತಿ ಸೆಂಟ್ರಲ್ ಮುಂತಾದ ವೆಬ್‌ಸೈಟ್‌ಗಳ ಮೂಲಕ ತನ್ನ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಿತು. 2014ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಅದು ಈ ಪ್ರಯೋಗಗಳನ್ನು ನಡೆಸಿತು. ಅಂದಿನ ನೀತಿ ಸೆಂಟ್ರಲ್‌ನ ಮುಖ್ಯಸ್ಥ ಈಗ ಭಾರತದ ರಾಷ್ಟ್ರೀಯ ಪ್ರಸಾರ ಸಂಸ್ಥೆ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಬಳಿಕ, ಬಿಜೆಪಿಯು ಟ್ವಿಟರ್‌ನಲ್ಲಿ ಬಲಿಷ್ಠ ಜಾಲವೊಂದನ್ನು ನಿರ್ಮಿಸಿತು. ಬಿಜೆಪಿ ಪರವಾಗಿರುವ ಬೆಳವಣಿಗೆಗಳನ್ನು ವೈಭವೀಕರಿಸಲು ಮತ್ತು ಪಕ್ಷದ ಟೀಕಾಕಾರರ ಮೇಲೆ ಆಕ್ರಮಣ ನಡೆಸಲು ಅದು ಕುಖ್ಯಾತ ‘ಐಟಿ ಸೆಲ್’ನ್ನು ಸ್ಥಾಪಿಸಿತು.

ಇದರ ಒಂದು ಫಲಿತಾಂಶವೆಂದರೆ, ಕೈಗಾರೀಕರಣಗೊಂಡಿರುವ ಪಾಶ್ಚಾತ್ಯ ದೇಶಗಳನ್ನು ಹೊರತುಪಡಿಸಿ, ದೇಶಗಳ ರಾಜಕೀಯದಲ್ಲಿ ಟ್ವಿಟರ್ ಪ್ರಭಾವ ಹೊಂದಿರುವ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದಾಗಿದೆ.

ಕೇಂದ್ರೀಕೃತ ವ್ಯವಸ್ಥೆ

ಮೊದಲ ನೋಟದಲ್ಲೇ ಹೇಳುವುದಾದರೆ, ಭಾರತೀಯ ರಾಜಕಾರಣದಲ್ಲಿ ಟ್ವಿಟರ್‌ನ ಮಹತ್ವವು ಅಚ್ಚರಿಹುಟ್ಟಿಸುತ್ತದೆ. ಯಾಕೆಂದರೆ, ಭಾರತದಲ್ಲಿ ಟ್ವಿಟರ್‌ನ ಉಪಸ್ಥಿತಿಯ ಮಟ್ಟ ಚಿಕ್ಕದು. ಅದು ದೇಶದಲ್ಲಿ ಕೇವಲ 1.5 ಕೋಟಿ ಬಳಕೆದಾರರನ್ನು ಹೊಂದಿದೆ. ಅಂದರೆ ಭಾರತೀಯ ಜನಸಂಖ್ಯೆಯ ಸುಮಾರು ಒಂದು ಶೇ.. ಆದರೂ, ಮೋದಿ ನೇತೃತ್ವದ ಬಿಜೆಪಿಯ ಉತ್ಕರ್ಷದಲ್ಲಿ ಅದು ವಹಿಸಿದ ಪಾತ್ರ ಮಹತ್ವದ್ದು. ಬಿಜೆಪಿಯ ರಾಜಕೀಯ ಸಂವಹನಗಳಿಗೆ ಟ್ವಿಟರ್ ಕೇಂದ್ರ ಬಿಂದುವಾಗಿ ವ್ಯವಹರಿಸುತ್ತದೆ. ತನ್ನ ಪರವಾಗಿರುವ ಟಿವಿ ಚಾನೆಲ್‌ಗಳು ಮತ್ತು ತನ್ನ ವಾಟ್ಸ್‌ಆ್ಯಪ್ ಸೈನಿಕರಿಗೆ ವಿಷಯಗಳನ್ನು ನೀಡಲು ಪಕ್ಷವು ಟ್ವಿಟರನ್ನು ಬಳಸಿಕೊಳ್ಳುತ್ತದೆ.

ಟ್ವಿಟರ್‌ನ ವಿಶಿಷ್ಟ ರಚನೆಯಿಂದಾಗಿ ಈ ಕೆಲಸಕ್ಕೆ ಅದು ಅತ್ಯಂತ ಸೂಕ್ತವಾಗಿದೆ. ಅಮೆರಿಕದ ಲೇಖಕ ನೋಹ್ ಸ್ಮಿತ್ ಹೇಳುವಂತೆ, ‘‘ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಹಲವಾರು ಸಾಮಾಜಿಕ ಜಾಲತಾಣಗಳಿವೆ. ಆದರೆ, ಸಾರ್ವಜನಿಕ ವ್ಯವಹಾರಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳನ್ನು ಮಾಡಬಲ್ಲ ಜಾಲ ತಾಣ ಒಂದೇ ಇದೆ’’.

ಹಾಗಾಗಿ, ಟ್ವಿಟರ್‌ನಲ್ಲಿ ಸಕ್ರಿಯವಾಗಿರುವುದು ಬಿಜೆಪಿಯಲ್ಲಿ ಮೇಲಕ್ಕೇರುವ ಉತ್ತಮ ವಿಧಾನವಾಗಿದೆ. ತನ್ನ ಟೀಕಾಕಾರರನ್ನು ಆನ್‌ಲೈನ್‌ನಲ್ಲಿ ನಿಂದಿಸುವ ಸಾಮರ್ಥ್ಯವುಳ್ಳವರನ್ನು ಬಿಜೆಪಿಯು ತನ್ನ ಐಟಿ ಸೆಲ್‌ನ ಹಿರಿಯ ಹುದ್ದೆಗಳಿಗೆ ನೇಮಕ ಮಾಡುತ್ತದೆ. ಇತ್ತೀಚೆಗೆ ಬಿಜೆಪಿಯು ‘ಕಾಶ್ಮೀರ್ ಫೈಲ್ಸ್’ ಮೂಲಕ ಜನರ ಭಾವನೆಗಳ ಮೇಲೆ ಸವಾರಿ ಮಾಡಿ ಅವರನ್ನು ತನ್ನತ್ತ ಒಲಿಸಿಕೊಳ್ಳುವ ಪ್ರಯತ್ನವೊಂದನ್ನು ದೊಡ್ಡ ಪ್ರಮಾಣದಲ್ಲಿ ಮಾಡಿತು. ಆ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೊದಲು ಟ್ವಿಟರ್‌ನಲ್ಲಿ ಹಿಂದುತ್ವದ ಪರವಾಗಿ ಪ್ರಚಾರ ಮಾಡಿ ಪ್ರಸಿದ್ಧಿಗೆ ಬಂದವರು. ಬಳಿಕ, ಹಿಂದುತ್ವದ ಸಿದ್ಧಾಂತಗಳನ್ನು ಪ್ರತಿಪಾದಿಸುವ ಚಿತ್ರಗಳನ್ನು ಮಾಡಲು ಭಡ್ತಿ ಪಡೆದರು.

ಅದೇ ರೀತಿ, ಬಿಜೆಪಿಯ ಬೆಂಬಲಿಗರು ಮತ್ತು ಐಟಿ ಸೆಲ್ ಸದಸ್ಯರು ಸಾಮಾನ್ಯವಾಗಿ ಟ್ವಿಟರ್‌ನಲ್ಲಿ ಮೊದಲು ಬಿಜೆಪಿಯ ಪ್ರಮುಖ ನೀತಿಗಳನ್ನು ಪ್ರಚಾರ ಮಾಡುತ್ತಾರೆ. ಬಳಿಕ ಹಂತ ಹಂತವಾಗಿ ಕಾನೂನು, ನೀತಿ ಮತ್ತು ಜನ ಸಂಘಟನೆಯತ್ತ ಗಮನ ಹರಿಸುತ್ತಾರೆ. ಇದಕ್ಕೆ ಇತ್ತೀಚಿನ ದಿನಗಳ ಒಂದು ಪ್ರಮುಖ ಉದಾಹರಣೆ ಎಂದರೆ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಆತ್ಮಹತ್ಯೆ. ಆತ್ಮಹತ್ಯೆಯು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಆತಂಕವನ್ನು ಸೃಷ್ಟಿಸಿತು. ಬಳಿಕ ನಿಧಾನವಾಗಿ, ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರಕಾರದ ಮೇಲೆ ಸವಾರಿ ಮಾಡಲು ಬಿಜೆಪಿಗೆ ಅದೊಂದು ಅಸ್ತ್ರವಾಯಿತು.

ವಾಕ್ ಸ್ವಾತಂತ್ರವೇ?

ಟ್ವಿಟರ್‌ನಲ್ಲಿ ‘‘ಸಂಪೂರ್ಣ ವಾಕ್ ಸ್ವಾತಂತ್ರ’’ದ ಕಲ್ಪನೆಯನ್ನು ಅನುಷ್ಠಾನಗೊಳಿಸುವ ಎಲಾನ್ ಮಸ್ಕ್ ರ ಯೋಜನೆಗಳು ಕಾರ್ಯಗತಗೊಂಡರೆ ಭಾರತದಲ್ಲಿ ಏನಾಗಬಹುದು? ಇದರ ಒಂದು ಮಾದರಿಯನ್ನು 2021ರಲ್ಲಿ ಟ್ವಿಟರ್ ಮೇಲೆ ಮೋದಿ ಸರಕಾರ ಮುಗಿಬಿದ್ದ ರೀತಿಯಿಂದ ಗ್ರಹಿಸಬಹುದಾಗಿದೆ. ವಿಷಯಗಳ ಪರಿಷ್ಕರಣೆಗೆ ಸಂಬಂಧಿಸಿದ ನೂತನ ಹಾಗೂ ವಿಶಾಲ ವ್ಯಾಪ್ತಿಯ ನಿಯಮಗಳನ್ನು ಜಾರಿಗೊಳಿಸುವಾಗ ಟ್ವಿಟರ್ ಭಾರತದಲ್ಲಿ ಸರಕಾರದಿಂದ ಭಾರೀ ವಿರೋಧವನ್ನು ಎದುರಿಸಿತು. ದೇಶಾದ್ಯಂತ ಟ್ವಿಟರ್ ಕಚೇರಿಗಳಿಗೆ ಪೊಲೀಸರು ಭೇಟಿ ನೀಡಿದರು. ಅದರ ಕಚೇರಿಗಳ ಮೇಲೆ ದಾಳಿ ನಡೆಯಿತು. ಪೊಲೀಸ್ ವಿಚಾರಣೆಗೆ ಬರುವಂತೆ ಭಾರತೀಯ ಟ್ವಿಟರ್‌ನ ಮುಖ್ಯಸ್ಥರಿಗೆ ನೋಟಿಸ್ ಜಾರಿಗೊಳಿಸಲಾಯಿತು. ರಾಜಕೀಯವಾಗಿ ತನಗೆ ಮಹತ್ವದ್ದಾಗಿರುವ ಟ್ವಿಟರ್ ತನ್ನ ನಿಯಂತ್ರಣದಿಂದ ಜಾರಿ ಹೋಗುವುದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಇಷ್ಟ ಪಡಲಿಲ್ಲ ಎನ್ನುವುದು ಸ್ಪಷ್ಟ.

ಬಾಟ್ (ಪೂರ್ವ ನಿರ್ಧರಿತ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರಂತರವಾಗಿ ಮಾಡುವ ಸಾಫ್ಟ್‌ವೇರ್)ಗಳನ್ನು ನಿರ್ಮೂಲಗೊಳಿಸಲು ಮತ್ತು ‘ನೈಜ ಮಾನವರನ್ನು ದೃಢೀಕರಿಸಲು’ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮಸ್ಕ್ ನೀಡಿರುವ ಭರವಸೆ ಈಗ ಬಿಜೆಪಿಯ ಪಾಲಿಗೆ ಇನ್ನೊಂದು ಆತಂಕವನ್ನು ಸೃಷ್ಟಿಸಿದೆ. ಇದಕ್ಕೊಂದು ಉದಾಹರಣೆಯನ್ನು ಹೀಗೆ ಕೊಡಬಹುದಾಗಿದೆ. 2019ರಲ್ಲಿ ಅಟ್ಲಾಂಟಿಕ್ ಕೌನ್ಸಿಲ್‌ನ ಡಿಜಿಟಲ್ ಫಾರೆನ್ಸಿಕ್ ರಿಸರ್ಚ್ ಲ್ಯಾಬ್ ಟ್ವಿಟರ್‌ನಲ್ಲಿನ ಮೋದಿ ಪರ ಒಲವಿನ ಬಗ್ಗೆ ಅಧ್ಯಯನ ನಡೆಸಿತು. ಅತಿ ಹೆಚ್ಚಿನ ಹಸ್ತಕ್ಷೇಪ ಮಾಡುವ ಸಾಮರ್ಥ್ಯವನ್ನೊಳಗೊಂಡ ಸಾಫ್ಟ್ ವೇರ್ ಬಳಸಿಕೊಂಡು ಮೋದಿ ಪರ ಅಲೆಯನ್ನು ಸೃಷ್ಟಿಸಲಾಗುತ್ತಿದೆ ಎನ್ನುವುದನ್ನು ಅಧ್ಯಯನ ಕಂಡುಕೊಂಡಿತು. ಫಾರೆನ್ಸಿಕ್ ರಿಸರ್ಚ್ ಲ್ಯಾಬ್ ನಡೆಸಿದ ವಿಶ್ಲೇಷಣೆ ಪ್ರಕಾರ, ಈ ಮಟ್ಟದ ಮೋದಿ ಪರ ಅಲೆಗೆ ಕಾರಣವಾಗುವಷ್ಟು ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ (ಸಂದೇಶಗಳ ಚಲನೆ) ಹರಿವು ಕಂಡುಬಂದಿಲ್ಲ. ಇದಕ್ಕೂ ಮೊದಲು, 2018ರಲ್ಲಿ, ನರೇಂದ್ರ ಮೋದಿಯ ಶೇ. 60 ಫಾಲೋವರ್‌ಗಳು ನಕಲಿ ಎನ್ನುವುದನ್ನು ಇನ್ನೊಂದು ಅಧ್ಯಯನ ಕಂಡುಕೊಂಡಿತ್ತು.

ಸ್ವಯಂಚಾಲಿತವಾಗಿ ವ್ಯವಹರಿಸುವ ಸಾಫ್ಟ್‌ವೇರ್ (ಬಾಟ್)ಗೆ ಅವಕಾಶ ಇಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಟ್ವಿಟರ್‌ನಲ್ಲಿ ಬಿಜೆಪಿಯ ಐಟಿ ಸೆಲ್ ಹೊಂದಿರುವ ಪ್ರಭಾವಿ ಉಪಸ್ಥಿತಿ ಗಣನೀಯವಾಗಿ ತಗ್ಗುತ್ತದೆ.

ಆರಂಭಿಕ ಸಂಭ್ರಮ ಮಾತ್ರವೇ?

ತಾನು ಟ್ವಿಟರನ್ನು ಹೇಗೆ ನಡೆಸಲು ಉದ್ದೇಶಿಸಿದ್ದೇನೆ ಎಂಬುದಾಗಿ ಮಸ್ಕ್ ಮಾಡಿರುವ ಟ್ವೀಟ್‌ಗಳು ಸದ್ಯ ಟ್ವೀಟ್‌ಗಳಾಗಿಯೇ ಉಳಿದಿವೆ. ಪ್ರಚಾರಕ್ಕಾಗಿ ಕಾತರಿಸುವ ಈ ಬಿಲಿಯಾಧೀಶನ ಎಷ್ಟು ಘೋಷಣೆಗಳು ಕಾರ್ಪೊರೇಟ್ ನೀತಿಯಾಗಿ ಪರಿವರ್ತನೆಯಾಗುತ್ತವೆ ಅಥವಾ ಅವುಗಳು ಪರಿವರ್ತನೆಯಾಗುತ್ತವೆಯೇ ಎನ್ನುವುದು ಸದ್ಯಕ್ಕೆ ಅಸ್ಪಷ್ಟ.

ಅದೂ ಅಲ್ಲದೆ, ಇದರಲ್ಲಿ ಮಸ್ಕ್‌ರ ತೀವ್ರ ಹಿತಾಸಕ್ತಿ ಸಂಘರ್ಷವೂ ಇದೆ. ಇದು ಮೋದಿ ಸರಕಾರಕ್ಕೆ ಮೊದಲಿದ್ದ ಟ್ವಿಟರ್‌ಗಿಂತಲೂ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಿಕೊಡಬಹುದಾಗಿದೆ. ‘ಟೈಮ್’ ಮ್ಯಾಗಝಿನ್‌ನ ವರದಿಯೊಂದು ಹೇಳುವಂತೆ, ಮಸ್ಕ್ ಭಾರತದಲ್ಲಿ ತನ್ನ ವ್ಯಾಪಾರವನ್ನು ವೃದ್ಧಿಗೊಳಿಸಲು ಬಯಸಿದ್ದಾರೆ ಹಾಗೂ ಅನುಕೂಲಕರ ನೀತಿ ವಿನಾಯಿತಿಗಾಗಿ ಮೋದಿ ಸರಕಾರದ ಜೊತೆಗೆ ಲಾಬಿ ಮಾಡುತ್ತಿದ್ದಾರೆ. ಟ್ವಿಟರ್ ಮೇಲೆ ನಿಯಂತ್ರಣ ಹೊಂದುವಲ್ಲಿ ಬಿಜೆಪಿಯ ಹಿತಾಸಕ್ತಿಯಿದೆ. ಹಾಗಾಗಿ, ಮಸ್ಕ್ ಮತ್ತು ಬಿಜೆಪಿಯ ಹಿತಾಸಕ್ತಿಗಳು ಹೇಗೆ ಪರಸ್ಪರ ವ್ಯವಹರಿಸಬಹುದು ಎನ್ನುವುದನ್ನು ಯಾರು ಬೇಕಾದರೂ ಗ್ರಹಿಸಬಹುದು. ಅಮೆಝಾನ್ ಸ್ಥಾಪಕ ಜೆಫ್ ಬೆರೆಸ್ ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ (ಹೌದು ಟ್ವಿಟರ್‌ನಲ್ಲೇ, ಬೇರೆಲ್ಲಿ!): ಇಂಥದೇ ತಂತ್ರಗಾರಿಕೆ ಚೀನಾದೊಂದಿಗೂ ಈಗಾಗಲೇ ನಡೆಯುತ್ತಿರಬಹುದು. ಚೀನಾದಲ್ಲಿ ಮಸ್ಕ್ ಅಗಾಧ ವ್ಯಾಪಾರ ಹಿತಾಸಕ್ತಿ ಹೊಂದಿದ್ದಾರೆ.

ಅಂತಿಮವಾಗಿ, ಆಡಳಿತಾರೂಢ ಪಕ್ಷವಾಗಿ ಬಿಜೆಪಿಗೆ ಕಾನೂನಿನ ಬಲವಿದೆ. ಸಾಮಾಜಿಕ ಮಾಧ್ಯಮಗಳ ವಿಷಯಗಳ ಮೇಲೆ ನಿಗಾ ಇಡಲು ಭಾರತದ ನೂತನ ಕಾನೂನುಗಳು ಸರಕಾರಕ್ಕೆ ಅಗಾಧ ಅಧಿಕಾರಗಳನ್ನು ನೀಡಿವೆ. 2021ರ ಸಂಘರ್ಷವು ತೋರಿಸಿರುವಂತೆ, ಟ್ವಿಟರ್ ಉದ್ಯೋಗಿಗಳನ್ನು ಕಾನೂನು ಕ್ರಮದ ಮೂಲಕ ಹೆದರಿಸಲು ಬಿಜೆಪಿ ಹಿಂಜರಿಯುವುದಿಲ್ಲ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಟ್ವಿಟರ್‌ನ ಕಾರ್ಯನಿರ್ವಹಣೆಯಲ್ಲಿ ಮಹತ್ವದ ಬದಲಾವಣೆಗಳನ್ನು ಅಮೆರಿಕನ್ನರು ನಿರೀಕ್ಷಿಸಬಹುದು. ಆದರೆ, ಅರ್ಧ ಜಗತ್ತಿನಷ್ಟು ದೂರದಲ್ಲಿರುವ ಭಾರತದಲ್ಲಿ ಆ ಬದಲಾವಣೆಗಳು ಘೋಷಿತ ಮಟ್ಟದಲ್ಲಿರಲಾರದು. ಅಥವಾ ಯಾವುದಾದರೂ ಬದಲಾವಣೆ ಇರಬಹುದೇ ಎನ್ನುವುದನ್ನು ಇನ್ನಷ್ಟೇ ನೋಡಬೇಕಾಗಿದೆ.

ರಾಜಕೀಯ ಪ್ರಭಾವ ಬದಲಾಗುವವರೆಗೆ, ಟ್ವಿಟರ್ ಮೇಲಿನ ಬಿಜೆಪಿಯ ಪ್ರಾಬಲ್ಯ ಮತ್ತು ಪಕ್ಷದ ರಾಜಕೀಯ ಸಂವಹನದಲ್ಲಿ ಟ್ವಿಟರ್ ಹೊಂದಿರುವ ಕೇಂದ್ರ ಸ್ಥಾನ ಮುಂದುವರಿಯಬಹುದು.

ಕೃಪೆ : scroll.in

Writer - ಶುಐಬ್ ದಾನಿಯಾಲ್

contributor

Editor - ಶುಐಬ್ ದಾನಿಯಾಲ್

contributor

Similar News