ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ಬಿಬಿಎಂಪಿ ಚುನಾವಣೆ ಸಾಧ್ಯತೆ

Update: 2022-05-10 15:18 GMT

ಬೆಂಗಳೂರು, ಮೇ 10: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, ಶೀಘ್ರದಲ್ಲೇ ಬಿಬಿಎಂಪಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಮಧ್ಯಪ್ರದೇಶದಲ್ಲಿ ನಾನಾ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿರಲಿಲ್ಲ. ಈ ಬಗ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸ್ಥಳೀಯ ಸಂಸ್ಥೆಗಳಿಗೆ ಎರಡು ವಾರಗಳಲ್ಲಿ ಚುನಾವಣೆ ನಡೆಸಬೇಕು ಎಂದು ಮಹತ್ವದ ತೀರ್ಪು ನೀಡಿದೆ. ಅಲ್ಲದೆ ಈ ತೀರ್ಪು ಎಲ್ಲ ರಾಜ್ಯಗಳಲ್ಲಿ ಬಾಕಿ ಉಳಿದಿರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಅನ್ವಯ ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಮಧ್ಯಪ್ರದೇಶ ಪ್ರಕರಣದಲ್ಲಿ ಮೂರು ಪೀಠದ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದಾರೆ. ಬಿಬಿಎಂಪಿ ಚುನಾವಣೆ ಸಂಬಂಧ ಪ್ರತ್ಯೇಕ ಪ್ರಕರಣವಿತ್ತು. ಲಿಸ್ಟ್ ಆಗಲು ಮೂರು ತಿಂಗಳು ಇತ್ತು. ಮಧ್ಯಪ್ರದೇಶಕ್ಕೆ ನೀಡಿದ ಆದೇಶವಾದರೂ ಅದು ಎಲ್ಲ ರಾಜ್ಯಕ್ಕೂ ಅನ್ವಯ ಅಂತ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದಿದ್ದಾರೆ.

ಚುನಾವಣೆಗೆ ಸರಕಾರ ಸಿದ್ಧ: ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರಕಾರ ಬಿಬಿಎಂಪಿ ಚುನಾವಣೆ ನಡೆಸಲು ತಯಾರಿದೆ. ಚುನಾವಣೆ ಯಾವಾಗ ಬಂದರೂ ಎದುರಿಸಲು ಸಿದ್ಧ. ಬಿಜೆಪಿ ಕೂಡ ತಯಾರಿದೆ. ಬಿಜೆಪಿ ಬೂತ್ ಮಟ್ಟದ ಕಾರ್ಯಕ್ರಮ, ಸಮಾವೇಶ ಮುಗಿದಿದೆ. ಅಭ್ಯರ್ಥಿಗಳ ಆಯ್ಕೆ ಮಾತ್ರ ಬಾಕಿ ಇದೆ. ಎರಡು ವಾರದಲ್ಲಿ ಚುನಾವಣೆ ಘೋಷಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದರು.

ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಬೇಕಾಗಿದೆ. ಸುಪ್ರೀಂ ಆದೇಶ ಪಾಲನೆ ಮಾಡಬೇಕು. 198 ವಾರ್ಡ್‍ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಮೀಸಲಾತಿ ವಿಚಾರದ ಬಗ್ಗೆ ಅಡ್ವೋಕೆಟ್ ಜನರಲ್ ಜೊತೆ ಮಾತನಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಸಿಎಂ ಜತೆ ಮಾತುಕತೆ: ಆರ್.ಅಶೋಕ್

ಎಲ್ಲ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಕಳೆದ ಬಾರಿ ನಡೆದ ಚುನಾವಣೆ ಪ್ರಕಾರವೇ ಚುನಾವಣೆ ನಡೆಸಲು ಸೂಚಿಸಿದೆ. ಹೀಗಾಗಿ, 198 ವಾರ್ಡ್ ಪ್ರಕಾರವೇ ಬಿಬಿಎಂಪಿ ಚುನಾವಣೆ ನಡೆಯಬೇಕಿದೆ. ಮೀಸಲಾತಿ ಪ್ರಕಾರ ಚುನಾವಣೆ ನಡೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಮಾತಾನಾಡುತ್ತೇನೆ ಎಂದು ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News