ಚಿದಾನಂದಮೂರ್ತಿ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ನಾಗಾಭರಣ ಒತ್ತಾಯ

Update: 2022-05-10 15:29 GMT

ಬೆಂಗಳೂರು, ಮೇ 10: ಹಿರಿಯ ಸಂಶೋಧಕ, ಸಾಹಿತಿ, ಕನ್ನಡವನ್ನೇ ಕೇಂದ್ರವಾಗಿಟ್ಟುಕೊಂಡು ತಮ್ಮ ಜೀವನಪಯರ್ಂತ ಬಹು ಆಯಾಮಗಳಲ್ಲಿ ಕನ್ನಡ ನಾಡು ನುಡಿಗಳ ಉತ್ಕರ್ಷಕ್ಕೆ ಶ್ರಮಿಸಿದ ಡಾ.ಎಂ.ಚಿದಾನಂದಮೂರ್ತಿ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಟಿ.ಎಸ್.ನಾಗಾಭರಣ ಅವರು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಕನ್ನಡ ಸಾರಸ್ವತ ಲೋಕದ ಅಸಾಮಾನ್ಯ ಸಾಧಕರಾಗಿದ್ದ ಡಾ.ಎಂ.ಚಿದಾನಂದಮೂರ್ತಿಯವರು ಭಾಷಾ ಶಾಸ್ತ್ರ, ಶಾಸನ ಶೋಧ, ಸಂಸ್ಕೃತಿ ಚಿಂತನೆ, ಛಂದಸ್ಸು, ಗ್ರಂಥ ಸಂಪಾದನೆ, ಜಾನಪದ ಅಧ್ಯಯನ ಹೀಗೆ ಹಲವು ಜ್ಞಾನಶಿಸ್ತುಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಶಾಸನಗಳನ್ನು ಇತಿಹಾಸದ ಆಕರವಾಗಿ ಮಾತ್ರ ಬಳಸುತ್ತಿದ್ದಾಗ ‘ಶಾಸನಗಳು ಒಂದು ಸಾಂಸ್ಕೃತಿಕ ಅಧ್ಯಯನ’ ಕೃತಿಯ ಮೂಲಕ ಶಾಸನಗಳನ್ನು ಸಾಹಿತ್ಯ, ಸಂಸ್ಕೃತಿಗಳ ಅಧ್ಯಯನಕ್ಕೂ ಆಕರವಾಗಿ ಬಳಸಬಹುದು ಎಂದು ಮೊದಲಿಗೆ ತೋರಿಸಿಕೊಟ್ಟವರು.

ಒಂದು ಕಾಲದಲ್ಲಿ ಕರ್ನಾಟಕ ನೀಲಗಿರಿಯಿಂದ ನಾಸಿಕ್‍ವರೆಗೂ ವ್ಯಾಪಿಸಿತ್ತು ಎಂಬುದನ್ನು ಸಂಶೋಧನೆಯ ಮೂಲಕ ಸಾಬಿತುಪಡಿಸಿದವರು. ಗೋಕಾಕ್ ಚಳವಳಿಯ ಸಂದರ್ಭದಲ್ಲಿ ರೂಪುಗೊಂಡ ಸಾಹಿತಿಗಳ ಕಲಾವಿದರ ಬಳಗದ ಪ್ರಧಾನ ಸಂಚಾಲಕರಾಗಿ ಕನ್ನಡ ಹೋರಾಟಕ್ಕೆ ಅಗತ್ಯವಾಗಿದ್ದ ಘನತೆ-ಗಾಂಭೀರ್ಯವನ್ನು ತಂದುಕೊಟ್ಟವರು. ರಾಜ್ಯಮಟ್ಟದ ಮೊದಲ ಕನ್ನಡಪರ ಸಂಘಟನೆ ‘ಕನ್ನಡ ಶಕ್ತಿ ಕೇಂದ್ರ’ವನ್ನು ಸಂಘಟಿಸಿ, ಆ ಮೂಲಕ ನಡೆಸಿದ ಕನ್ನಡ ಚಳವಳಿ ಮೌಲಿಕವಾದದ್ದು. ‘ಸರೋಜಿನಿ ಮಹಿಷಿ ವರದಿ’, ‘ಕನ್ನಡ ವಿಶ್ವವಿದ್ಯಾಲಯ’, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’, ‘ಕಲ್ಯಾಣ ಕರ್ನಾಟಕ’, ಕಿತ್ತೂರು ಕರ್ನಾಟಕʼಗಳ ಹೆಸರು ಮುಂತಾದವು ಅವರ ಚಿಂತನೆಯ ಫಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕರ್ನಾಟಕಕ್ಕೆ ಧಕ್ಕಬೇಕಾದ ಹಲವು ಸೌಲಭ್ಯಗಳಿಗಾಗಿ ದನಿ ಎತ್ತಿ, ಆ ಕನಸುಗಳನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸವನ್ನು ಚಿದಾನಂದಮೂರ್ತಿ ಅವರು ಮಾಡಿದ್ದಾರೆ. ಹೀಗೆ ಬಹು ಆಯಾಮಗಳಲ್ಲಿ ನಾಡು-ನುಡಿಗೆ ಶ್ರಮಿಸಿದ ಅಪ್ರತಿಮ ಹೋರಾಟಗಾರ, ಕನ್ನಡ ಸಂಸ್ಕೃತಿ ಭಾರತೀಯ ಸಂಸ್ಕೃತಿಗಳ ನೈಜ ಆರಾಧಕ ಚಿದಾನಂದಮೂರ್ತಿಯವರ ಸಿದ್ಧಿ-ಸಾಧನೆಯನ್ನು ನಿರಂತರವಾಗಿ ತಿಳಿಸುವ ಕೆಲಸ ಆಗಬೇಕಿದೆ ಎಂದು ನಾಗಾಭರಣ ಅವರು ತಿಳಿಸಿದ್ದಾರೆ.

ಕನ್ನಡವನ್ನೇ ಕೇಂದ್ರವಾಗಿಟ್ಟುಕೊಂಡು ತಮ್ಮ ಜೀವನ ಪರ್ಯಂತ ಬಹು ಆಯಾಮಗಳಲ್ಲಿ ಕನ್ನಡ ನಾಡು-ನುಡಿಗಳ ಉತ್ಕರ್ಷಕ್ಕೆ ಶ್ರಮಿಸಿ ಕನ್ನಡದ ಸ್ವಾತಿಕಶಕ್ತಿಯೆನಿಸಿದ್ದ ಡಾ.ಎಂ.ಚಿದಾನಂದಮೂರ್ತಿಯವರು ಕಣ್ಮರೆಯಾಗಿ 2 ವರ್ಷಗಳು ಕಳೆದಿದೆ. ಅವರ ಹೆಸರನ್ನು ಶಾಶ್ವತಗೊಳಿಸುವ ಅವರ ಕೆಲಸವನ್ನು ಮುಂದುವರೆಸುವ ಕೆಲಸ ಆಗಬೇಕೆಂದು ಕನ್ನಡಾಸಕ್ತರು ಪ್ರಾಧಿಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಕನ್ನಡ ಸಂಸ್ಕೃತಿ ಜಾಗೃತಿಯ ಅಧ್ಯಯನ ಕೆಲಸಗಳಿಗೆ ಮೀಸಲಾದ ಒಂದು ಅಧ್ಯಯನ ಕೇಂದ್ರವನ್ನು ಸ್ಥಾಪಿಸುವಂತೆ ಡಾ.ಟಿ.ಎಸ್.ನಾಗಾಭರಣ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News