ಬಿಬಿಎಂಪಿ ಚುನಾವಣೆಯನ್ನು ಬಿಜೆಪಿ ತಡ ಮಾಡಿದ್ದಕ್ಕೆ ಓಬಿಸಿಗೆ ಅನ್ಯಾಯ ಆಗಿದೆ: ರಾಮಲಿಂಗಾರೆಡ್ಡಿ

Update: 2022-05-10 16:48 GMT

ಬೆಂಗಳೂರು, ಮೇ 10: ಇಡೀ ದೇಶದ ಎಲ್ಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಬಿಜೆಪಿ ಬಿಬಿಎಂಪಿ ಚುನಾವಣೆ ತಡ ಮಾಡಿದ್ದಕ್ಕೆ ಓಬಿಸಿಗೆ ಅನ್ಯಾಯ ಆಗಿದೆ. ಓಬಿಸಿ ಅವರು ಈಗ ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೆಪಿಸಿಸಿ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಗ ಮಾಡಿ ಓಬಿಸಿ ಕುರಿತ ಅಂಕಿ ಅಂಶ ಕೊಟ್ಟಿದ್ದರು. ಆದರೆ ಬಿಜೆಪಿ ಸರಕಾರ ಅದನ್ನು ಒಪ್ಪಲಿಲ್ಲ. ಒಪ್ಪಿದ್ದರೆ ಯಾವಾಗಲೋ ಓಬಿಸಿಗೆ ಮೀಸಲಾತಿ ನೀಡಬಹುದಿತ್ತು. ಅಥವಾ ಕೂಡಲೇ ಚುನಾವಣೆ ಮಾಡಿದ್ದರೂ ಈ ವರ್ಗಕ್ಕೆ ಮೀಸಲಾತಿ ದೊರೆಯುತ್ತಿತ್ತು. ಬಿಜೆಪಿ ಚುನಾವಣೆ ತಡ ಮಾಡಿದ್ದಕ್ಕೆ ಓಬಿಸಿಗೆ ಅನ್ಯಾಯ ಆಗಿದೆ. ಓಬಿಸಿ ಅವರು ಈಗ ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. 

ಬಿಜೆಪಿ ಸರಕಾರ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‍ಗಳ ಮರುವಿಂಗಡನೆ ಮಾಡುತ್ತೇವೆ, ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡುತ್ತೇವೆ ಎಂದು ಹೇಳಿತ್ತು. ಆಗ ನಾವು ಕೂಡ ಸರಕಾರಕ್ಕೆ ಸಹಕಾರ ಕೊಟ್ಟೆವು.

ಇದಕ್ಕಾಗಿ ರಘು ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ವರದಿಯನ್ನು ತರಾತುರಿಯಲ್ಲಿ ಅಂಗೀಕಾರ ಮಾಡಿದರು. ನಾವು ಕೊಟ್ಟ ಸಲಹೆ ಸೂಚನೆಗಳನ್ನು ಪರಿಗಣಿಸಲಿಲ್ಲ. ಯಾವುದೇ ನೂತನ ಪ್ರದೇಶ ಸೇರಿಸಲಿಲ್ಲ. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆ ಮೂಲಕ 1 ವರ್ಷ 8 ತಿಂಗಳು ಪಾಲಿಕೆ ಚುನಾವಣೆ ಮುಂದೂಡಿದರು.

ಅವರಿಗೆ ಚುನಾವಣೆ ಮಾಡುವ ಮನಸ್ಸು ಇದ್ದಿದ್ದರೆ ಇದು ದೊಡ್ಡ ಕೆಲಸವಾಗಿರಲಿಲ್ಲ. ಆರು ತಿಂಗಳಲ್ಲಿ ಮಾಡಬಹುದಿತ್ತು. ಚುನಾವಣೆ ಮಾಡದೆ ಅದನ್ನು ಮುಂದೂಡುವುದು ಇವರ ಉದ್ದೇಶವಾಗಿತ್ತು.

ಬೆಂಗಳೂರು ಆಯುಕ್ತರು ಮರು ವಿಂಗಡಣೆ ಮಾಡಬೇಕಿತ್ತು. ಆದರೆ ಅವರು ಈ ವಿಚಾರವಾಗಿ ಒಂದೇ ಒಂದು ಸಭೆ ಮಾಡಲಿಲ್ಲ. ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯ ಪಡೆಯಲಿಲ್ಲ. ಈ ವಾರ್ಡ್ ವಿಂಗಡಣೆ ಪ್ರಕ್ರಿಯೆ ಬಿಜೆಪಿ ಸಂಸದರ, ಶಾಸಕರ ಕಚೇರಿ ನಾಯಕರ ಕಚೇರಿಯಲ್ಲಿ ಮಾಡಲಾಗಿತ್ತು. ಈ ಬಗ್ಗೆ ನಾವು ಪ್ರತಿಭಟನೆ ಮಾಡಿದ್ದೆವು.

ಇನ್ನು ಓಬಿಸಿ ಮೀಸಲಾತಿ ವಿಚಾರ ಇದ್ದ ಕಾರಣ ಅದನ್ನು ಮುಂದಿಟ್ಟುಕೊಂಡು ಸರಕಾರ ಪಂಚಾಯ್ತಿ ಹಾಗೂ ಪಾಲಿಕೆ ಚುನಾವಣೆ ಮುಂದೂಡಿತು.

ಸರಕಾರ 20 ತಿಂಗಳು ತಡ ಮಾಡಿದ ಪರಿಣಾಮ ನಗರದ ಅಭಿವೃದ್ಧಿ ಕುಂಠಿತ ಆಗಿದೆ. ಕಾಂಗ್ರೆಸ್ ಸರಕಾರದಲ್ಲಿ ಆಗಿದ್ದ ಕಾರ್ಯಗಳು ಹಿನ್ನಡೆ ಆದವು. ನಗರದ ರಸ್ತೆಗಳಲ್ಲಿ ಲಕ್ಷಾಂತರ ಗುಂಡಿಗಳು ಬಿದ್ದವು. ಗುತ್ತಿಗೆದಾರರ ಬಿಲ್ ಪಾವತಿ ಆಗುತ್ತಿಲ್ಲ, ಟೆಂಡರ್‍ಗಳಲ್ಲಿ ಅಕ್ರಮ ಆಗುತ್ತಿದೆ. ಇಂತಹ ಸಂದರ್ಭದಲ್ಲಿ, ನ್ಯಾಯಾಲಯದ ಆದೇಶಕ್ಕೆ ಯಾವುದೇ ಸಬೂಬು ಹೇಳದೆ ಚುನಾವಣೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು. 

243 ವಾರ್ಡ್ ವಿಚಾರವಾಗಿ ಇದ್ದ ನ್ಯಾಯಾಲಯ ಅರ್ಜಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಡೆಯಜ್ಞೆ ನೀಡಿತ್ತು. ಆದರೆ ಆ ಬಗ್ಗೆ ಚರ್ಚೆ ಮಾಡಿರಲಿಲ್ಲ. ಈಗ ಹೈಕೋರ್ಟ್ ಕಳೆದ ಬಾರಿ ಚುನಾವಣೆ ಮಾಡಿದ ವಾರ್ಡ್‍ಗಳಿಗೆ ಚುನಾವಣೆ ಮಾಡಬೇಕು ಎಂದು ಸ್ಪಷ್ಟವಾಗಿ ಆದೇಶ ನೀಡಿರುವ ಪರಿಣಾಮ ಈಗ ಮರು ವಿಂಗಡಣೆ ಎಲ್ಲವೂ ಅಸಿಂಧುವಾಗಿವೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News