ವಾಜಪೇಯಿ ಕ್ರೀಡಾಂಗಣದಲ್ಲಿ ಕಳಪೆ ಕಾಮಗಾರಿ: ತಾಕತ್ತಿದ್ದರೆ ತೇಜಸ್ವಿ ಸೂರ್ಯ ಮಾತನಾಡಲಿ; ಎಎಪಿ ಬಹಿರಂಗ ಸವಾಲು

Update: 2022-05-10 18:02 GMT

ಬೆಂಗಳೂರು, ಮೇ 10: ಸಂಸದ ತೇಜಸ್ವಿ ಸೂರ್ಯ ಬಿಜೆಪಿ ಕಾರ್ಯಕರ್ತರೊಂದಿಗೆ ದೆಹಲಿಯಲ್ಲಿ ದಾಂಧಲೆ ನಡೆಸಿದ್ದಾರೆ. ಅವರಿಗೆ ತಾಕತ್ತಿದ್ದರೆ ಅವರದ್ದೇ ಕ್ಷೇತ್ರದಲ್ಲಿ ಶೇ.40 ಕಮಿಷನ್ ದಂಧೆಗೆ ಒಳಗಾಗಿರುವ ವಾಜಪೇಯಿ ಕ್ರೀಡಾಂಗಣಕ್ಕೆ ಬಂದು ಕಳಪೆ ಕಾಮಗಾರಿ ಬಗ್ಗೆ ಮಾತನಾಡಲಿ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಎಪಿ ಉಸ್ತುವಾರಿ ಸೀತಾರಾಮ್ ಗುಂಡಪ್ಪ ಸವಾಲು ಹಾಕಿದ್ದಾರೆ.  

ಮಂಗಳವಾರ ನಗರದ ಎಚ್‍ಎಸ್‍ಆರ್ ಲೇಔಟ್‍ನ ವಾಜಪೇಯಿ ಕ್ರೀಡಾಂಗಣದ ಮುಂದೆ ಪ್ರತಿಭಟನೆ ಮಾಡಿ, ಮಾತನಾಡಿದ ಅವರು, ತೇಜಸ್ವಿ ಸೂರ್ಯ ದೆಹಲಿ ಸಿಎಂ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರೊಡನೆ ದಾಂಧಲೆ ಮಾಡಿದ್ದರು. ಎಎಪಿಯ ರಾಜ್ಯ ಕಚೇರಿಗೂ ಗೂಂಡಾ ಕಾರ್ಯಕರ್ತರನ್ನು ಕಳುಹಿಸಿದ್ದರು. ಈಗ ಅವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ ನಡೆದು ಸುಮಾರು ಕೋಟಿ ಸರಕಾರದ ಹಣ ನಷ್ಟವಾಗಿದೆ. ಆದರೆ ಅವರು ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು. 

ಎಎಪಿ ಮುಖಂಡ ಮೋಹನ್ ದಾಸರಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆಗೊಂಡ ಎರಡನೇ ತಿಂಗಳಲ್ಲಿ ಗ್ಯಾಲರಿಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಬಿಜೆಪಿ ಸರಕಾರ ಹಾಗೂ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಅವರ ಶೇ.40 ಕಮಿಷನ್ ದಂಧೆಗೆ ಇದೊಂದು ನಿದರ್ಶನವಾಗಿದೆ ಎಂದು ಆರೋಪಿಸಿದರು. 

ಜನರ ತೆರಿಗೆ ಹಣವು ಭ್ರಷ್ಟರ ಪಾಲಾಗಿ, ಸಾರ್ವಜನಿಕ ಆಸ್ತಿಗಳು ಕಳಪೆ ಆಗುವುದನ್ನು ನೋಡಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು. 

ಪ್ರತಿಭಟನೆಯಲ್ಲಿ ಎಎಪಿ ಮುಖಂಡ ಜಗದೀಶ್ ಕದಂ, ಯೋಗಿತಾ ರೆಡ್ಡಿ, ಪಲ್ಲವಿ ಚಿದಂಬರಂ, ನಾಗಭೂಷಣ ರೆಡ್ಡಿ, ಮಂಜುನಾಥಸ್ವಾಮಿ, ಕಲೈ, ಫಿರೋಜ್ ಖಾನ್, ವೀಣಾ ರಾವ್, ಸತೀಶ್ ಗೌಡ ಮತ್ತಿತರ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ವಾಜಪೇಯಿ ಕ್ರೀಡಾಂಗಣದ ಸಂಪೂರ್ಣ ನಿರ್ಮಾಣಕ್ಕಾಗಿ 140 ಕೋಟಿ ರೂ.ಗಳನ್ನು ವ್ಯಯಿಸಲಾಗಿದ್ದು, 4 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾಂಗಣದ ಗ್ಯಾಲರಿಗೆ ಕಾಮಗಾರಿ ನಡೆದಿದೆ. ಈಗ ಒಂದೇ ಮಳೆಗೆ ಗ್ಯಾಲರಿಯು ನೆಲಕ್ಕೆ ಉರಳಿದ್ದು, ಕಾಮಗಾರಿಯ ಸಂಪೂರ್ಣ ತನಿಖೆ ಆಗಬೇಕು. ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ, ಅಕ್ರಮದಲ್ಲಿ ಭಾಗಿಯಾದ ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.'

-ಮೋಹನ್ ದಾಸರಿ, ಎಎಪಿ ಮುಖಂಡ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News