×
Ad

ಫುಟ್ ಪಾತ್ ನಲ್ಲಿ ಡ್ರೈನ್ ಹೋಲ್ ಗೆ ಬಿದ್ದ ಖ್ಯಾತ ಗಾಯಕ ಅಜಯ್ ವಾರಿಯರ್: ಬಿಬಿಎಂಪಿ ವಿರುದ್ಧ ಆಕ್ರೋಶ

Update: 2022-05-11 19:28 IST

ಬೆಂಗಳೂರು, ಮೇ 11: ಗಾಯಕ ಅಜಯ್ ವಾರಿಯರ್ (Ajay Warier) ರಸ್ತೆ ಬದಿಯ ಡ್ರೈನ್ ಹೋಲ್ ಗೆ ಬಿದ್ದು, ಕಾಲಿಗೆ ಗಾಯ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮೇ 8 ರಂದು ಕೇರಳಕ್ಕೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಹೋಗಬೇಕಿದ್ದ ಅಜಯ್ ವಾರಿಯರ್ ಅವರು ಮೆಟ್ರೋ ನಿಲ್ದಾಣ ಸಮೀಪಿಸುತ್ತಿದ್ದಂತೆ ಮುಖ್ಯ ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ಪಾದಚಾರಿ ಮಾರ್ಗದ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಡ್ರೈನ್ ಹೋಲ್  ಕಾಣದೆ ಅದರೊಳಗೆ ಕಾಲಿಟ್ಟಿದ್ದು, ಚರಂಡಿಯೊಳಗೆ ಬಿದ್ದಿದ್ದಾರೆ. 

ಈ ಕುರಿತು ಬಿಬಿಎಂಪಿಗೆ ಬಹಿರಂಗ ಪತ್ರ ಬರೆದಿರುವ ಅವರು, ಡ್ರೈನ್ ಹೋಲ್ ಮುಚ್ಚುವ ಸಿಮೆಂಟ್ ಕವಚ ಬದಲಾಯಿಸುವ ಬಗ್ಗೆ ಬಿಬಿಎಂಪಿ ತಲೆಕೆಡಿಸಿಕೊಳ್ಳದ ಕಾರಣ ಈ ಘಟನೆ ಸಂಭವಿಸಿದೆ. ಮಕ್ಕಳು ಅದರೊಳಗೆ ಬಿದ್ದಿದ್ದರೆ ದೊಡ್ಡ ಅನಾಹುತ ನಡೆಯುತಿತ್ತು. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸುರಕ್ಷಿತ ರಸ್ತೆ, ಪಾದಚಾರಿ ಮಾರ್ಗ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ, ಮೇ 7ರಂದು ರಾತ್ರಿ ಕಿರುತೆರೆ ನಟಿ ಸುನೇತ್ರಾ ಪಂಡಿತ್ ಅವರು ಕೂಡ ಬೆಂಗಳೂರಿನ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೆ ಒಳಗಾದರು. ಈ ರೀತಿಯ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದು, ಹಲವರು ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News