ಕೇಂದ್ರದ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ: ಎಚ್.ಡಿ.ದೇವೇಗೌಡ ಕಳವಳ

Update: 2022-05-11 15:56 GMT

ಬೆಂಗಳೂರು, ಮೇ 11: ‘ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ಕೇಂದ್ರದ ನಿರ್ಲಕ್ಷ್ಯ ಧೋರಣೆಯಿಂದಾಗಿ ನಮ್ಮ ನೀರು ನಾವು ಪಡೆಯಲು ಆಗಲಿಲ್ಲ. ಭವಿಷ್ಯದಲ್ಲಿ ನೀರು ಪೂರೈಕೆ ಬಹಳ ಕಷ್ಟವಾಗಲಿದೆ. ಈಗಲೇ ನಾವು ಸಮಸ್ಯೆ ಪರಿಹರಿಸಿಕೊಳ್ಳದಿದ್ದರೆ ಮುಂದೆ ನೀರಿನ ಹಾಹಾಕಾರ ಎದುರಿಸಬೇಕಾಗಲಿದೆ' ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿನ ಬಸವನಗುಡಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮದ ವೇಳೆ ಗವಿಗಂಗಾಧರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಈಗಾಗಲೇ ನೀರಿಗಾಗಿ ಸಾಕಷ್ಟು ಕಷ್ಟ ಇದೆ, ಟ್ಯಾಂಕರ್ ನೀರನ್ನು ತರಿಸಲಾಗುತ್ತಿದೆ. ಮುಂದಿನ ದಿನಗಳು ಇನ್ನೂ ಕಷ್ಟಕರವಾಗಿರಲಿದೆ. ಈ ಸಮಸ್ಯೆಗಳನ್ನು ಪರಿಹಾರ ಮಾಡಬೇಕು' ಎಂದು ಹೇಳಿದರು.

‘ಜನತಾ ಜಲಧಾರೆ ಕಾರ್ಯಕ್ರಮದ ಉದ್ದೇಶ ನಮ್ಮ ನದಿಗಳ ನೀರನ್ನ ನಾವು ಬಳಸಿಕೊಳ್ಳಬೇಕು ಎನ್ನುವುದಾಗಿದೆ. ಸದ್ಯ ನಮ್ಮ ನದಿ ನೀರನ್ನು ನಾವು ಬಳಸಿಕೊಳ್ಳಲು ಅನೇಕ ಸಮಸ್ಯೆಗಳಿವೆ. ಕೇಂದ್ರದ ನಿರ್ಲಕ್ಷ್ಯ ಮನೋಭಾವದಿಂದ ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ನಮ್ಮ ನೀರು ನಾವು ಪಡೆಯಲು ಆಗಲಿಲ್ಲ, ಎಲ್ಲ ಕಡೆ ಕಾವೇರಿ ನೀರನ್ನು ಕೊಡಲು ಆಗಿಲ್ಲ ಈಗಲೂ ಕುಡಿಯುವ ನೀರಿನ ಕೊರತೆ ಇದೆ' ಎಂದು ಅವರು ವಿವರಿಸಿದರು.

‘ಬೆಂಗಳೂರು ಅಭಿವೃದ್ಧಿ ಹೊಂದಿದೆ ಎಂದರೆ ಅದು ಜೆಡಿಎಸ್ ಸರಕಾರ ಕೊಟ್ಟ ಕಾರ್ಯಕ್ರಮಗಳಿಂದ. ಈಗಿನ ಜನಪ್ರತಿನಿಧಿಗಳು ಅಭಿವೃದ್ಧಿ ಹೆಸರಿನಲ್ಲಿ ಜನರ ಹಣ ಲೂಟಿ ಮಾಡುತ್ತಿದ್ದಾರೆ, ಮೊನ್ನೆ ಬಿದ್ದ ಮಳೆಯಿಂದ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕ್ರೀಡಾಂಗಣದ ಛಾವಣಿ ಬಿದ್ದು ಹೋಗಿದೆ, ಇದು ಇವರ ಅಭಿವೃದ್ಧಿ ಶೈಲಿ. ಮನೆಗಳೆ ಇಲ್ಲದೇ ಗುಡಿಸಿಲಿನಲ್ಲಿ ಅನೇಕ ಜನ ವಾಸ ಮಾಡುತ್ತಾ ಇದ್ದಾರೆ ಎಂದು ಅವರು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News