ಹೆಲಿಕಾಪ್ಟರ್ ಮೇಲೆ ಶಾರ್ಕ್ ದಾಳಿಯ ‘ಅಪರೂಪದ ವೀಡಿಯೊ’!: ಸಿಕ್ಕಾಪಟ್ಟೆ ಟ್ರೋಲ್ ಗೊಳಗಾದ ಕಿರಣ್ ಬೇಡಿ‌

Update: 2022-05-11 17:10 GMT

ಹೊಸದಿಲ್ಲಿ, ಮೇ 11: ಸಮುದ್ರದ ನೀರಿನಿಂದ ಮೇಲಕ್ಕೆ ಜಿಗಿದ ಬೃಹತ್ ಶಾರ್ಕ್ ಮೀನು ಹೆಲಿಕಾಪ್ಟರ್ವೊಂದನ್ನು ಪತನಗೊಳಿಸಿದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಕ್ಕಾಗಿ ಪುದುಚೇರಿಯ ಮಾಜಿ ಲೆಫ್ಟಿನಂಟ್ ಗವರ್ನರ್ ಕಿರಣ ಬೇಡಿ ಅವರು ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್ಗೊಳಗಾಗಿದ್ದಾರೆ. ವೀಡಿಯೊದಲ್ಲಿರುವ ಅಡಿಬರಹವು ‘ಈ ವೀಡಿಯೊದ ಹಕ್ಕುಗಳನ್ನು ಪಡೆಯಲು ನ್ಯಾಷನಲ್ ಜಿಯಾಗ್ರಾಫಿಕ್ 10 ಲ.ಡಾ.ಗಳನ್ನು ಪಾವತಿಸಿದೆ ’ಎಂದು ಹೇಳಿಕೊಂಡಿದೆ.

ಶಾರ್ಕ್ ಮೀನು ಹೆಲಿಕಾಪ್ಟರ್ನ್ನು ಹಿಡಿಯಲು ನಂಬಲಾಗದಷ್ಟು ಎತ್ತರಕ್ಕೆ ಜಿಗಿಯುತ್ತಿರುವುದನ್ನು ಮತ್ತು ದಿಗ್ಭ್ರಮೆಗೊಂಡ ಗುಂಪೊಂದು ಭೀತಿಯಿಂದ ಅದನ್ನು ನೋಡುತ್ತಿರುವುದನ್ನು ವೀಡಿಯೊ ತೋರಿಸಿದೆ. ಹೆಲಿಕಾಪ್ಟರ್ ನೀರಿಗೆ ಅಪ್ಪಳಿಸಿ ಬೆಂಕಿ ಹತ್ತಿಕೊಳ್ಳುವುದರ ಜೊತೆಗೆ ವೀಡಿಯೊ ಅಂತ್ಯಗೊಂಡಿದೆ. ವಾಸ್ತವದಲ್ಲಿ ಇದು 2017ರ ‘5 ಹೆಡೆಡ್ ಶಾರ್ಕ್ ಅಟ್ಯಾಕ್’ ಚಿತ್ರದಲ್ಲಿಯ ಒಂದು ದೃಶ್ಯವಾಗಿದೆ.
ಈ ಪೋಸ್ಟ್ ಟ್ವೀಟರ್ನಲ್ಲಿ ಬೇಡಿ ವಿರುದ್ಧ ಟೀಕೆಗಳ ಮಹಾಪೂರವನ್ನೇ ಸೃಷ್ಟಿಸಿದೆ. ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ಹಲವರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

‘ಧನ್ಯವಾದಗಳು,ಮೇಡಮ್! ನೀವು ಲಕ್ಷಾಂತರ ಐಎಎಸ್/ಐಪಿಎಸ್ ಆಕಾಂಕ್ಷಿಗಳಿಗೆ ಸ್ಫೂರ್ತಿಯ ಮೂಲವಾಗಿದ್ದೀರಿ. ಅದು ನಿಮ್ಮ ಬುದ್ಧಿಮತ್ತೆಯ ಯಾರಾದರೂ ಅದನ್ನು ಮಾಡಬಲ್ಲರು ಎಂದಾದರೆ ತಾವೂ ಪರೀಕ್ಷೆಯನ್ನು ಗೆಲ್ಲಬಹುದು ಎಂಬ ಆತ್ಮವಿಶ್ವಾಸವನ್ನು ಅವರಲ್ಲಿ ಮೂಡಿಸುತ್ತದೆ ’ಎಂದು ಓರ್ವ ಟ್ವಿಟರ್ ಬಳಕೆದಾರ ಕಾಲೆಳೆದಿದ್ದಾರೆ.
‘ಈ ಟ್ವೀಟ್ನ್ನು ನೋಡಿದ ಬಳಿಕ ಐಪಿಎಸ್,ರಾಜ್ಯಪಾಲ,ಪಿಎಚ್ಡಿ ಐಐಟಿ ದಿಲ್ಲಿ,ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರೆಲ್ಲ ಅತ್ಯಂತ ಹೆಚ್ಚಿನ ಬುದ್ಧಿಮತ್ತೆಯ ಜನರು ಎಂಬ ನನ್ನ ಗ್ರಹಿಕೆಯು ದೂರವಾಗಿದೆ. ಅವರೂ ವಾಟ್ಸ್ಆ್ಯಪ್ ಯುನಿವರ್ಸಿಟಿಯ ಪದವೀಧರರಾಗಬಹುದು ಎಂದು ಈಗ ನನಗೆ ಅರ್ಥವಾಗಿದೆ ’ಎಂದು ಇನ್ನೋರ್ವರು ಟ್ವೀಟಿಸಿದ್ದಾರೆ.

ಸತ್ಯಶೋಧಕ ಜಾಲತಾಣ ಆಲ್ಟ್ನ್ಯೂಸ್ನ ಮುಹಮ್ಮದ್ ಝುಬೇರ್ ಅವರೂ ಟೀಕಿಸಿದ್ದು,‘ನ್ಯಾಷನಲ್ ಜಿಯಾಗ್ರಾಫಿಕ್ ಹತ್ತು ಲ.ಡಾಲರ್ ಪಾವತಿಸಿದೆ ಎನ್ನುವುದು ಹುಸಿಯಾಗಿದೆ ’ ಎಂದು ಬೇಡಿಯವರಿಗೆ ಹೇಳಿದ್ದಾರೆ.

ಕಟುಟೀಕೆಗಳ ಬಳಿಕ ಅದೇ ವೀಡಿಯೊವನ್ನು ಇನ್ನೊಂದು ಟ್ವೀಟ್ನೊಂದಿಗೆ,ಈ ಬಾರಿ ವಿವರಣೆಯೊಂದಿಗೆ ಬೇಡಿ ಪೋಸ್ಟ್ ಮಾಡಿದ್ದಾರೆ. ‘ಈ ಸಾಹಸದ ವೀಡಿಯೊದ ಮೂಲವು ಮುಕ್ತವಾಗಿದೆ ಮತ್ತು ದೃಢೀಕರಣಕ್ಕೆ ಒಳಪಟ್ಟಿದೆ. ಅಧಿಕೃತ ಮತ್ತು ನಿಜವಾದ ಮೂಲ ಯಾವುದಾಗಿದ್ದರೂ ಇದೊಂದು ಭಯಾನಕ ವೀಡಿಯೊ ಆಗಿದೆ. ಆದರೆ ಅದನ್ನು ತಯಾರಿಸಲಾಗಿದ್ದರೂ ಪ್ರಶಂಸನೀಯವಾಗಿದೆ. ದಯವಿಟ್ಟು ಈ ಮುನ್ಸೂಚನೆಯೊಂದಿಗೆ ಅದನ್ನು ವೀಕ್ಷಿಸಿ ’ಎಂದು ಹೇಳಿದ್ದಾರೆ. ನಿವೃತ್ತ ಐಪಿಎಸ್ ಅಧಿಕಾರಿ ಬೇಡಿ ತನ್ನ ಟ್ವಟರ್ ಪೋಸ್ಟ್ಗಾಗಿ ಟ್ರೋಲ್ಗೊಳಗಾಗಿದ್ದು ಇದೇ ಮೊದಲೇನಲ್ಲ.
2020 ಜನವರಿಯಲ್ಲಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಕಲಿ ವೀಡಿಯೊವೊಂದನ್ನು ಶೇರ್ ಮಾಡಿಕೊಂಡಿದ್ದರು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ದಾಖಲಿಸಿಕೊಂಡಿರುವ ಸೂರ್ಯನ ಶಬ್ದದಲ್ಲಿ ‘ಓಂ’ ಪಠಣ ಕೇಳುತ್ತಿದೆ ಎಂದು ಆ ವೀಡಿಯೊದಲ್ಲಿ ಭೋಂಗು ಬಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News