×
Ad

ಮೇ 16ರಿಂದ 22ರ ವರೆಗೆ ‘ರಾಜ್ಯ ಮಿನಿ ಒಲಿಂಪಿಕ್ಸ್' ಕ್ರೀಡಾಕೂಟ: ಡಾ.ಕೆ.ಗೋವಿಂದರಾಜು

Update: 2022-05-11 23:32 IST

ಬೆಂಗಳೂರು, ಮೇ 11: ‘ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಎರಡನೆ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ-2022ವನ್ನು ಮೇ 16 ರಿಂದ 22ರ ವರೆಗೆ ಆಯೋಜಿಸಲಾಗಿದೆ ಎಂದು ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಕೆ. ಗೋವಿಂದರಾಜು ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ಕುರಿತು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭವಿಷ್ಯದ ಕ್ರೀಡಾಪಟುಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಿನಿ ಒಲಿಂಪಿಕ್ಸ್‍ನ್ನು ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ 2020ರಲ್ಲಿ ಆಯೋಜಿಸಲಾಗಿತ್ತು. ಎರಡನೆ ಬಾರಿಗೆ ಆಯೋಜನೆಗೊಳ್ಳುತ್ತಿರುವ ಈ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟವು ರಾಜ್ಯದ ಕ್ರೀಡಾ ಭವಿಷ್ಯದ ಅಡಿಪಾಯ. ಈ ಕ್ರೀಡಾಕೂಟವನ್ನು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯಿಂದ ಆಯೋಜಿಸಲಾಗಿದ್ದು, ಸರಕಾರವು 2.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ' ಎಂದು ಮಾಹಿತಿ ನೀಡಿದರು.

‘ಎರಡನೆ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 14 ವರ್ಷದೊಳಗಿನ ಸುಮಾರು 5 ಸಾವಿರ ಬಾಲಕ-ಬಾಲಕಿಯರು ಭಾಗವಹಿಸುವ ನಿರೀಕ್ಷೆಯಿದ್ದು, ಅಥ್ಲೆಟಿಕ್ಸ್, ಆರ್ಚರಿ, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಜಿಮಾಸ್ಟಿಕ್ಸ್, ಹ್ಯಾಂಡ್ ಬಾಲ್, ಹಾಕಿ, ಜೂಡೋ, ಖೊಖೊ, ಲಾನ್ ಟೆನ್ನಿಸ್, ನೆಟ್ ಬಾಲ್, ರೈಫಲ್ ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ವೈಟ್‍ಫ್ಟಿಂಗ್ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು. 

‘ಹ್ಯಾಂಡ್‍ಬಾಲ್, ನೆಟ್‍ಬಾಲ್ ಹಾಗೂ ಖೊಖೊ ಸ್ಪರ್ಧೆಗಳು ವಿದ್ಯಾನಗರದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ, ರೈಫಲ್ ಶೂಟಿಂಗ್ ಭಾರತೀಯ ಕ್ರೀಡಾ ಪ್ರಾಧಿಕಾರದ ದಕ್ಷಿಣದ ಕೇಂದ್ರದಲ್ಲಿ, ಸೈಕ್ಲಿಂಗ್ ನೈಸ್ ರಸ್ತೆಯಲ್ಲಿ, ಫುಟ್ಬಾಲ್ ರಾಜ್ಯ ಅಸೋಸಿಯೇಷನ್ ಸ್ಟೇಡಿಯಂನಲ್ಲಿ, ಜಿಮ್ನಾಸ್ಟಿಕ್ ಹೂಡಿಯಲ್ಲಿರುವ ಗೋಪಾಲನ್ ಸ್ಪೋಟ್ರ್ಸ್ ಕೇಂದ್ರದಲ್ಲಿ, ಸ್ವಿಮ್ಮಿಂಗ್ ಬಸವನಗುಡಿ ಸ್ವಿಮ್ಮಿಂಗ್ ಫೂಲ್‍ನಲ್ಲಿ ಹಾಗೂ ಹಾಕಿ ಶಾಂತಿನಗರದಲ್ಲಿರುವ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿವೆ. ಉಳಿದ ಸ್ಪರ್ಧೆಗಳು ಕಂಠೀರವ ಸ್ಟೇಡಿಯಂ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ' ಎಂದರು.

‘ಈ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮೇ 16ರಂದು ಸಂಜೆ 4:30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News