ಅನ್ನಭಾಗ್ಯ ಮತ್ತು ಅರ್ಥಶಾಸ್ತ್ರ

Update: 2022-05-12 11:02 GMT

ಜಗತ್ತಿನ ಎಲ್ಲ ದೇಶಗಳ ಆರ್ಥಿಕತೆಯು ಸುಸ್ಥಿರವಾಗಿ ಇರಬೇಕಾದರೆ ಅಲ್ಲಿನ ಜನರು ಸೂಕ್ತ ಆಹಾರ ಭದ್ರತೆಯನ್ನು ಹೊಂದಿರಬೇಕೆಂದು ಅರ್ಥಶಾಸ್ತ್ರದ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಯಾರಿಗೆ ಆಹಾರ ಭದ್ರತೆಯ ಯೋಜನೆಯ ಕುರಿತಂತೆ ಜ್ಞಾನವಿಲ್ಲವೋ ಅಂತಹ ದೇಶಗಳು ಚಿತ್ರ ವಿಚಿತ್ರವಾದ ತೊಂದರೆಗಳಿಗೆ ಸಿಲುಕುತ್ತವೆ. ಇದು ಆರೋಗ್ಯ, ಶಿಕ್ಷಣ ಮತ್ತು ಇನ್ನಿತರ ವಲಯಗಳ ಹೆಚ್ಚುವರಿ ವೆಚ್ಚ ಮತ್ತು ಅಸಮತೋಲನಕ್ಕೆ ಕಾರಣವಾಗುತ್ತದೆ.

 ಅತಿ ಹೆಚ್ಚಿನ ಬಡತನ ಮತ್ತು ಅಪೌಷ್ಟಿಕತೆಯ ಸಮಸ್ಯೆಯನ್ನು ಎದುರಿಸುತ್ತಿರುವ ದೇಶಗಳು ಈ ದಿನ ಮಾನವ ಸಂಪನ್ಮೂಲದ ಅಭಿವೃದ್ಧಿಯನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದ ಹೆಚ್ಚು ತೊಂದರೆಗೆ ಸಿಲುಕಿದ್ದು, ಅದು ಆ ದೇಶದ ಸುಸ್ಥಿರ ಆರ್ಥಿಕತೆಗೂ ತೊಡಕಾಗಿದೆ.

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ವ್ಯಾಖ್ಯಾನದ ಪ್ರಕಾರ ‘‘ಆಹಾರದ ಕೊರತೆ ಮತ್ತು ಅಪೌಷ್ಟಿಕತೆಯು ಯಾವುದೇ ದೇಶದ ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆಗೆ ತೊಂದರೆ ಉಂಟು ಮಾಡುತ್ತದೆ’’. ಈ ಹಿನ್ನೆಲೆಯಲ್ಲಿ ದೇಶವೊಂದರ ಆಹಾರ ಲಭ್ಯತೆ ಮತ್ತು ಪೌಷ್ಟಿಕತೆ ಸಾಧನೆಯು ಆ ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ.

ಇನ್ನು ದೇಶವೊಂದು ಆರ್ಥಿಕವಾಗಿ ಮುಂದುವರಿದಿದೆ ಎಂದಾಕ್ಷಣ ಅಲ್ಲಿ ಆಹಾರ ಮತ್ತು ಅಪೌಷ್ಟಿಕತೆ ಸಮಸ್ಯೆಯು ಪೂರ್ಣವಾಗಿ ಪರಿಹಾರವಾಗಿದೆ ಎಂದು ಭಾವಿಸಬೇಕಿಲ್ಲ. ಆರೋಗ್ಯ ಮತ್ತು ಪೌಷ್ಟಿಕತೆಯ ವಲಯಕ್ಕೆ ಸಂಬಂಧಿಸಿದ ಜಗತ್ತಿನ ಪ್ರತಿಷ್ಠಿತ ನಿಯತಕಾಲಿಕೆ (ಜರ್ನಲ್) ‘ಲ್ಯಾನ್ಸೆಟ್’ ಪ್ರಕಾರ ದೇಶವೊಂದರಲ್ಲಿ ಶೇ. 10ರಷ್ಟು ಆರ್ಥಿಕ ಅಭಿವೃದ್ಧಿ ಆದರೂ ಅದು ಅಪೌಷ್ಟಿಕತೆಯ ಪ್ರಮಾಣವನ್ನು ಕೇವಲ ಶೇ. 6ರಷ್ಟು ಮಾತ್ರವೇ ತಗ್ಗಿಸಬಲ್ಲದು. ಈ ನಿಟ್ಟಿನಲ್ಲಿ ಆಹಾರ ಮತ್ತು ಅಪೌಷ್ಟಿಕತೆ ಎಂಬುದು ಆರ್ಥಿಕತೆಯ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ಕೊಡು ಕೊಳ್ಳುವಿಕೆ ಸಂಬಂಧವನ್ನು ಹೊಂದಿದೆ. ಜೊತೆಗೆ ಕೇವಲ ಆರ್ಥಿಕತೆ ಅಭಿವೃದ್ಧಿಯು ದೇಶದ ಹಸಿವು ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸುವುದಿಲ್ಲ. ಅಲ್ಲಿ ಸರಕಾರವೊಂದರ ದೂರದೃಷ್ಟಿಯ ಆಹಾರ ಯೋಜನೆಯೂ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ ಎಂಬ ಅರ್ಥಶಾಸ್ತ್ರದ ಅಂಶವನ್ನು ನಾವು ನೆನಪಿಟ್ಟುಕೊಂಡರೆ ಯುಪಿಎ ಸರಕಾರದ 2013ರ ಆಹಾರ ಭದ್ರತಾ ಕಾಯ್ದೆ ಮತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಜಾರಿಗೆ ತಂದ ಅನ್ನಭಾಗ್ಯ, ಮಾತೃಪೂರ್ಣ (ಗರ್ಭಿಣಿಯರಿಗೆ), ಇಂದಿರಾ ಕ್ಯಾಂಟೀನ್, ಮಕ್ಕಳಿಗೆ ಶಾಲೆಯಲ್ಲಿ ಹಾಲು ಮತ್ತು ಮೊಟ್ಟೆಯ ವಿತರಣೆ, ಡೈರಿ ಹಾಲಿನ ಉತ್ಪನ್ನಗಳಿಗೆ ಸಬ್ಸಿಡಿ ಮತ್ತು ಹೆಚ್ಚಿನ ಬೆಂಬಲ ಬೆಲೆ, ಆಹಾರದ ವಿಷಯಕ್ಕೆ ಸಂಬಂಧಿಸಿದ ಕೃಷಿಕರ 50 ಸಾವಿರದ ವರೆಗಿನ ಸಾಲ ಮನ್ನಾ, ಆಹಾರ ಉತ್ಪಾದನೆಗೆ ಸಂಬಂಧಿಸಿದ ಕೃಷಿಯನ್ನು ನಿರ್ವಹಿಸಲು ಸಹಕರಿಸಿದ ಕೃಷಿ ಯಂತ್ರಧಾರೆ ಯೋಜನೆಗಳು ಆರ್ಥಿಕ ಅಭಿವೃದ್ಧಿ ಸಾಧಿಸುವುದಕ್ಕೆ ಪೂರಕವಾಗಿ ಮಾನವ ಸಂಪನ್ಮೂಲಗಳನ್ನು ಸಮರ್ಥಗೊಳಿಸುವ ಮಹತ್ತರ ಉದ್ದೇಶವನ್ನೇ ಹೊಂದಿವೆ.

 ಲ್ಯಾಟಿನ್ ಅಮೆರಿಕದ ದೇಶಗಳಲ್ಲೂ ಆಹಾರ ಮತ್ತು ಅಪೌಷ್ಟಿಕತೆಯ ನಿರ್ವಹಣೆಯು ಅತ್ಯುತ್ತಮವಾದ ಫಲಿತಾಂಶವನ್ನೇ ನೀಡಿದೆ. ಉದಾಹರಣೆಗೆ ಬ್ರೆಝಿಲ್‌ನಂತಹ ದೇಶದಲ್ಲಿ ಉತ್ತಮ ಆಹಾರ ಯೋಜನೆಗಳು ಮತ್ತು ಅಪೌಷ್ಟಿಕತೆಯ ನಿರ್ವಹಣೆಯ ಪರಿಣಾಮ 1996ರಿಂದ 2007ರ ಒಳಗೆ ಅಪೌಷ್ಟಿಕತೆಯ ಪ್ರಮಾಣವು ಶೇ. 37.1 ರಿಂದ ಶೇ. 7.1ಕ್ಕೆ ಇಳಿಕೆಯಾಯಿತು. ಇದು ಆ ದೇಶಕ್ಕೆ ಮುಂದೆ ಗುಣ ಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯಗಳು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ಅವರ ಕೊಳ್ಳುವ ಶಕ್ತಿಯನ್ನೂ ಕೂಡಾ ಹೆಚ್ಚು ಮಾಡಿತು ಎಂಬುದನ್ನು ಈ ವೇಳೆ ನಾವು ಗಮನಿಸಬೇಕು.

ಭಾರತದಲ್ಲೂ ಆಹಾರ ಭದ್ರತಾ ಕಾಯ್ದೆಯ ಪರಿಣಾಮದಿಂದಾಗಿ 2004-06ರಲ್ಲಿ ಶೇ. 21.7ರಷ್ಟಿದ್ದ ಹಸಿವು ಮತ್ತು ಅಪೌಷ್ಟಿಕತೆಯ ಪ್ರಮಾಣವು 2017ರ ಹೊತ್ತಿಗೆ ಶೇ.14ಕ್ಕೆ ಇಳಿಕೆಯಾಯಿತು. ನನ್ನ ಪ್ರಕಾರ ಇದು ಆಹಾರ ಭದ್ರತೆಯ ಮತ್ತು ಆಹಾರ ಯೋಜನೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.

ಆದರೆ ವಿಪರ್ಯಾಸದ ಸಂಗತಿ ಎಂದರೆ ಇಂದು ಮತ್ತೆ ಹಸಿವು ಮತ್ತು ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗಿದೆ. ಆಹಾರ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎಂದು ಹೇಳುತ್ತಿರುವ ಕೋಮುವಾದಿ ಸರಕಾರಗಳು ಶ್ರೀಮಂತರ ತಿಜೋರಿಯನ್ನು ತುಂಬಿಸುವುದಕ್ಕೆ ತಮ್ಮೆಲ್ಲಾ ದೇಶಪ್ರೇಮವನ್ನು ಖರ್ಚು ಮಾಡುತ್ತಿವೆ. ಇದೇ ಕಾರಣಕ್ಕಾಗಿಯೇ ಇಂದು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 55ರಿಂದ 101 ನೇ ಸ್ಥಾನಕ್ಕೆ ಕುಸಿಯಲ್ಪಟ್ಟಿದ್ದು ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯು ಕುಂಠಿತಗೊಂಡಿದ್ದು ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಚಾಣಾಕ್ಷತೆಯಿಂದ ಸಾಧಿಸಲಾಗಿದ್ದ ಶೇ. 8.5 ಜಿಡಿಪಿ ದರವನ್ನು ಶೇ. 5ಕ್ಕೆ ಕುಗ್ಗುವಂತೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಟ್ಟಿಗೆ ನೋಡುವುದಾದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಜಾರಿಗೊಳಿಸಲಾದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಮಾತೃಪೂರ್ಣ ಹಾಗೂ ಇಂದಿರಾ ಕ್ಯಾಂಟೀನ್ ನಂತಹ ಆಹಾರ ಯೋಜನೆಗಳು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮತ್ತು ದೇಶವೊಂದರ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳೇ ಆಗಿದ್ದರೂ ಸಮಾಜ ವಿರೋಧಿಯಾದ ಮತ್ತು ಬಡವರ ವಿರೋಧಿಯಾದಂತಹ ಕೋಮು ಹಾಗೂ ಬಂಡವಾಳಶಾಹಿ ಹಿತಾಸಕ್ತಿಗಳು ಇವುಗಳನ್ನು ‘‘ಜನರನ್ನು ಸೋಮಾರಿಗಳನ್ನಾಗಿಸುವ ಯೋಜನೆಗಳು’’ ಎಂದು ಕೆಟ್ಟದಾಗಿ ಚಿತ್ರಿಸುತ್ತಿದ್ದು ಇದು ನಿಜಕ್ಕೂ ಅಮಾನವೀಯತೆಯ ಸಂಕೇತವಾಗಿದೆ. ಅಷ್ಟೇ ಅಲ್ಲದೆ ಅರ್ಥಶಾಸ್ತ್ರಕ್ಕೆ ವಿರುದ್ಧವಾದ, ಕೆಲವೇ ಕೆಲವು ಮಂದಿಯನ್ನು ಶ್ರೀಮಂತರನ್ನಾಗಿಸಬೇಕು ಎನ್ನುವಂತಹ ಬಂಡವಾಳಶಾಹಿ ತರ್ಕವಾಗಿದೆ.

ಹೀಗಾಗಿ ನಮ್ಮ ಯುವಕರು ಈ ಬ್ಗಗೆ ಹೆಚ್ಚು ಚಿಂತಿಸುವಂತಾಗಬೇಕು, ಜನಪರ ಯೋಜನೆಗಳನ್ನು ಅದರಲ್ಲೂ ಆಹಾರ ಯೋಜನೆಗಳನ್ನು ಅಸೂಯೆಯಿಂದ ನೋಡದೆ ಅದರ ಹಿಂದಿನ ಅರ್ಥಶಾಸ್ತ್ರೀಯ ತಿಳುವಳಿಕೆಯನ್ನು ಎಲ್ಲೆಡೆ ಪಸರಿಸುವಂತಾಗಬೇಕು.

Writer - ಡಾ. ಎಚ್.ಸಿ. ಮಹದೇವಪ್ಪ

contributor

Editor - ಡಾ. ಎಚ್.ಸಿ. ಮಹದೇವಪ್ಪ

contributor

Similar News