ಬಿಜೆಪಿಗೆ 5 ರೂ.ದೇಣಿಗೆಯ ಕುತೂಹಲಕರ ಪ್ರಕರಣ

Update: 2022-05-12 14:36 GMT

ಹೊಸದಿಲ್ಲಿ,ಮೇ 12: ಬಿಜೆಪಿಯು ಆನ್ಲೈನ್ ನಲ್ಲಿ ಜನರಿಂದ ದೇಣಿಗೆಯನ್ನು ಸ್ವೀಕರಿಸುತ್ತದೆ. ಈವರೆಗೆ ಹಲವರು ದೇಣಿಗೆಗಳನ್ನು ನೀಡಿದ್ದಾರೆ. ದೇಣಿಗೆಯ ಮೊತ್ತ ದೊಡ್ಡದೇ ಆಗಿರಬೇಕು ಎಂದೇನಿಲ್ಲ,ಐದು ರೂ.ಗಳ ದೇಣಿಗೆಯನ್ನೂ ಬಿಜೆಪಿ ಸ್ವೀಕರಿಸುತ್ತದೆ. ವಿಷಯ ಅದಲ್ಲ,‌ ದೇಣಿಗೆಯನ್ನು ಪಾವತಿಸದವರಿಗೂ ಬಿಜೆಪಿ ದೇಣಿಗೆಯ ಸ್ವೀಕೃತಿಯನ್ನು ರವಾನಿಸುತ್ತಿದೆ! ಅದಕ್ಕೊಂದು ನಿದರ್ಶನ ಇಲ್ಲಿದೆ.

ಮೇ 7ರಂದು ನೊಯ್ಡದ ಮಾಧ್ಯಮ ಸಲಹೆಗಾರ ವಿಶಾಖ್ ರಾಠೀ ಅವರ ಮೊಬೈಲ್ ಗೆ ಎಸ್ಎಂಎಸ್ ಸಂದೇಶವೊಂದು ಬಂದಿತ್ತು. ನಿಮ್ಮ ಹೆಸರಿನಲ್ಲಿ ಬಿಜೆಪಿಗೆ ಐದು ರೂ.ಗಳ ದೇಣಿಗೆ ಯಶಸ್ವಿಯಾಗಿ ತಲುಪಿದೆ ಎಂದು ‘ಜೆಎಕ್ಸ್-ಎನ್ಎಂಆ್ಯಪ್ಸ್ ’ಹೆಸರಿನ ಸೆಂಡರ್ನಿಂದ ಬಂದಿದ್ದ ಸಂದೇಶದಲ್ಲಿ ತಿಳಿಸಲಾಗಿತ್ತು. 

ಈ ಸಂದೇಶ ರಾಠೀ ಅವರಿಗೆ ಅಚ್ಚರಿಯನ್ನುಂಟು ಮಾಡಿತ್ತು. ಅಸಲಿಗೆ ಅವರು ಇಂತಹ ಯಾವುದೇ ದೇಣಿಗೆಯನ್ನು ಕಳುಹಿಸಿರಲೇ ಇಲ್ಲ. ಹೀಗಿರುವಾಗ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವೆಂದು ಹೇಳಿಕೊಳ್ಳುವ ಮತ್ತು ದೇಶದಲ್ಲಿ ಅತ್ಯಂತ ಹೆಚ್ಚಿನ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವ ಬಿಜೆಪಿ ದೇಣಿಗೆ ಸ್ವೀಕೃತಿಯ ಹಿಂಬರಹವನ್ನು ರಾಠೀಯವರಿಗೆ ರವಾನಿಸಿದ್ದಾದರೂ ಏಕೆ?
 
ರಾಠೀಯವರಿಗೆ ಇ-ಮೇಲ್ ಮೂಲಕವೂ ಐದು ರೂ.ದೇಣಿಗೆ ಸ್ವೀಕೃತಿಯ ಪತ್ರವನ್ನು ಕಳುಹಿಸಲಾಗಿದೆ. ಇ-ಮೇಲ್ ಸೃಷ್ಟಿಯಾಗಿದ್ದ ಸೈಟ್ ಸೆಂಡರ್ ‘ನರೇಂದ್ರ ಮೋದಿ’ ಆಗಿದ್ದಾರೆ ಎಂದು ಹೇಳಿಕೊಂಡಿತ್ತು ಮತ್ತು ಅದರ ಡಿಸ್ಪ್ಲೇದಲ್ಲಿ ಬಿಳಿಯ ಮಾಸ್ಕ್ ಧರಿಸಿದ್ದ ಪ್ರಧಾನಿಯವರ ಚಿತ್ರವಿತ್ತು.

ರಾಠೀ ಕಳವಳಗೊಳ್ಳಲು ಪ್ರಾಮಾಣಿಕ ಕಾರಣವಿತ್ತು. ‘ನೋ ರಿಪ್ಲೈ ಡೊನೇಷನ್’ ಎಂಬ ಸಬ್ಜಕ್ಟ್ ಲೈನ್ ಹೊಂದಿದ್ದ ಇ-ಮೇಲ್ ಅವರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನೂ ಪ್ರದರ್ಶಿಸಿತ್ತು.

‘ಏನಿದು ವಂಚನೆ?’ ಎಂದು ರಾಠೀ ಟ್ವೀಟಿಸಿದ್ದಾರೆ. ಹಣ ಹೇಗೆ ವರ್ಗಾವಣೆಯಾಗಿತ್ತು ಎಂಬ ಬಗ್ಗೆ ಮಾತ್ರವಲ್ಲ,ಬಹುಶಃ ಬಿಜೆಪಿಯ ಅಧಿಕೃತ ಸದಸ್ಯತ್ವ ಸಂಖ್ಯೆಯನ್ನು ಮತ್ತು ದೇಣಿಗೆ ಮೊತ್ತಗಳನ್ನು ಹೆಚ್ಚಾಗಿ ತೋರಿಸಲು ಇದು ನಿಯಮಿತವಾಗಿ ನಡೆಯುತ್ತಿದೆಯೇ ಎಂಬ ಬಗ್ಗೆಯೂ ಕಳವಳವನ್ನು ಹುಟ್ಟುಹಾಕಿದೆ.

ಈ ಸಂದೇಶಗಳು ತನಗೆ ಆಘಾತವನ್ನುಂಟು ಮಾಡಿವೆ,ಅಲ್ಲದೆ ಅವರಿಗೆ ತನ್ನ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಪ್ರದರ್ಶಿಸಲು ಸಾಧ್ಯವಾಗಿದ್ದು ಹೇಗೆ ಎಂಬ ಬಗ್ಗೆ ಕಳವಳವೂ ಉಂಟಾಗಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಠೀ ತಿಳಿಸಿದರು. ರಾಠೀಯವರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಲಾಗಿಲ್ಲ,ಅವು ಸುರಕ್ಷಿತವಾಗಿವೆ.

ತನ್ನ ಖಾತೆಯಿಂದ ಹಣ ಹೇಗೆ ವರ್ಗಾವಣೆಯಾಗಿರಬಹುದು ಎಂಬ ಬಗ್ಗೆ ತಲೆ ಕೆಡಿಸಿಕೊಂಡಿದ್ದ ರಾಠೀ ಕೊನೆಗೂ ತಮ್ಮ ಪೇಟಿಎಂ ಖಾತೆಯನ್ನು ಯಾರೋ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
 
ಅದರಲ್ಲಿ 50-60 ರೂ.ಗಳಿದ್ದವು. ಬಹಳ ಸಮಯದಿಂದ ಅದನ್ನು ತಾನು ಬಳಸಿರಲಿಲ್ಲ. ಬಿಜೆಪಿಗೆ ಹಣ ರವಾನೆಯಾಗಲು ಅದು ಏಕೈಕ ಮೂಲವಾಗಿತ್ತು ಎಂದು ಭಾವಿಸಿದ್ದೇನೆ ಎಂದು ರಾಠೀ ತಿಳಿಸಿದರು.

ಬಿಜೆಪಿಯ ದೇಣಿಗೆ ಖಾತೆಗಳು ಮೊದಲು ದೇಣಿಗೆ ನೀಡುವವರ ಅಥವಾ ಪಕ್ಷದ ಸದಸ್ಯತ್ವ ಪಡೆದುಕೊಳ್ಳಲು ಬಯಸುವವರ ಹೆಸರು,ಫೋನ್ ನಂ.ಮತ್ತು ವಿಳಾಸವನ್ನು ಪಡೆದುಕೊಳ್ಳುತ್ತವೆ. ವ್ಯಕ್ತಿಯ ಮೊಬೈಲ್ ಗೆ ರವಾನಿಸಲಾದ ಒಟಿಪಿಯನ್ನು ನಮೂದಿಸಿದ ಬಳಿಕವೇ ಅದು ದೇಣಿಗೆಯನ್ನು ಸ್ವೀಕರಿಸುತ್ತದೆ. ಆದರೆ ತನಗೆ ಯಾವುದೇ ಒಟಿಪಿ ಬಂದಿರಲಿಲ್ಲ,ತನ್ನ ವಿವರಗಳನ್ನೂ ಎಲ್ಲಿಯೂ ಸಲ್ಲಿಸಿರಲಿಲ್ಲ ಎಂದು ರಾಠೀ ಹೇಳಿದರು.

ಈ ವರದಿಗಾರ ಕುತೂಹಲಕ್ಕೆಂದು ಬಿಜೆಪಿಯ ವೆಬ್ಸೈಟ್ ಗೆ ಭೇಟಿ ನೀಡಿ ಕೇವಲ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ದಾಖಲಿಸಿದ ಬೆನ್ನಿಗೇ ಅವರ ಇ-ಮೇಲ್ ಗೆ,‘ನೀವೀಗ ಬಿಜೆಪಿಯ ಸದಸ್ಯರಾಗಿದ್ದೀರಿ’ ಎಂಬ ಸಂದೇಶ ರವಾನೆಯಾಗಿತ್ತು. ಸದಸ್ಯತ್ವಕ್ಕೆ ನೋಂದಣಿ ಮತ್ತು ದೇಣಿಗೆಯ ಕನಿಷ್ಠ ಮೊತ್ತವಾದ 105 ರೂ.ಗಳನ್ನೂ ಅವರು ಪಾವತಿಸಿರಲಿಲ್ಲ!

Writer - ಗೌರವ್ ವಿ.ಭಟ್ನಾಗರ್ (thewire.in)

contributor

Editor - ಗೌರವ್ ವಿ.ಭಟ್ನಾಗರ್ (thewire.in)

contributor

Similar News