×
Ad

ನರ್ಸಿಂಗ್ ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲು ರವಿಕುಮಾರ್ ಸೂಚನೆ

Update: 2022-05-12 20:29 IST

ಮಂಗಳೂರು : ದ.ಕ.ಜಿಲ್ಲೆಯ ಎಲ್ಲಾ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿ ರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವಿಶೇಷ ಜಂಟಿ ಸದನ ಸಮಿತಿಯ ಉಪ ಸಮಿತಿಯ ಅಧ್ಯಕ್ಷರೂ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿ ಕುಮಾರ್ ಸೂಚನೆ ನೀಡಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ನ ಮಾರ್ಗಸೂಚಿಗಳಂತೆ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಗಳನ್ನು ನಡೆಸಬೇಕು, ಆದರೆ ಬಹಳಷ್ಟು ಕಾಲೇಜುಗಳಲ್ಲಿ ಬೋಧಕರ ಕೊರತೆ ಇದೆ. ಪ್ರಯೋಗಾಲಯಗಳು ವ್ಯವಸ್ಥಿತವಾಗಿಲ್ಲ, ಆ ಕಾಲೇಜುಗಳ ಸ್ಥಿತಿಗತಿ ಪರಿಶೀಲಿಸಿ ವರದಿಯನ್ನು ಸದನಕ್ಕೆ ನೀಡಲಾಗುವುದು ಎಂದು ರವಿ ಕುಮಾರ್ ಸೂಚಿಸಿದರು.

ನರ್ಸಿಂಗ್ ವಿದ್ಯಾರ್ಥಿಗಳು ಐಚ್ಛಿಕ ವಿಷಯ ಮತ್ತು ಪ್ರಯೋಗ ಶಾಲೆಗಳ ಶಿಕ್ಷಣ ಪಡೆಯುವುದರೊಂದಿಗೆ ಆಸ್ಪತ್ರೆಗಳಲ್ಲಿ ತರಬೇತಿ ಪಡೆಯಲು ಹೋದಾಗ ಸ್ಥಳೀಯರೊಂದಿಗೆ ಕನ್ನಡದಲ್ಲಿ ಮಾತನಾಡುವುದು ಕಷ್ಟವಾಗುತ್ತದೆ, ಅವರಿಗೆ ಕನ್ನಡ ಕಲಿಸುವ ವ್ಯವಸ್ಥೆಯಾಗಬೇಕು ಎಂದರು.

ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಸಮಿತಿಯ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿದರು.

ಸಭೆಯಲ್ಲಿ ಶಾಸಕ ಡಾ.ಅವಿನಾಶ್ ಉಮೇಶ್ ಜಾದವ್, ಸಚಿವಾಲಯದ ಅಪರ ಕಾರ್ಯದರ್ಶಿ ಎಸ್. ನಿರ್ಮಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಅಧಿಕಾರಿ ಡಾ.ಕಿಶೋರ್ ಕುಮಾರ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕ ಡಾ.ಸದಾಶಿವ ಶಾನುಭೋಗ, ಖಾಸಗಿ ನಸಿರ್ಂಗ್ ಕಾಲೇಜುಗಳ ಪ್ರಾಂಶುಪಾಲರು, ಕಾಲೇಜುಗಳ ಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News